
ನವದೆಹಲಿ, ಆಗಸ್ಟ್ 4: ಪ್ರಧಾನಮಂತ್ರಿಗಳು ಎಲ್ಲೇ ಹೋಗಲಿ ಅವರ ಹಿಂದೆ ಕಪ್ಪು ಬಣ್ಣದ ಸೂಟ್ ಧರಿಸಿ, ಕಪ್ಪು ಕನ್ನಡಕ ಹಾಕಿಕೊಂಡು, ಕಿವಿಗೆ ಇಯರ್ ಬಡ್ಸ್ ಇಟ್ಟುಕೊಂಡಿರುವ ಅಂಗರಕ್ಷಕರು ಕಾಣುತ್ತಾರೆ. ಅವರು ಯಾರನ್ನು ನೋಡುತ್ತಿದ್ದರೆ ಎಂದು ಬೇರೆಯವರಿಗೆ ಗೊತ್ತಾಗಬಾರದು ಎಂದು ಈ ರೀತಿ ಕಪ್ಪು ಕೂಲಿಂಗ್ ಗ್ಲಾಸ್ ಹಾಕಿಕೊಂಡಿರುತ್ತಾರೆ. ಎಸ್‌ಪಿಜಿ ಕಮಾಂಡೋಗಳಾದ ಈ ಅಧಿಕಾರಿಗಳದ್ದು ನಿಜವಾಗಿಯೂ ಹದ್ದಿನ ಕಣ್ಣು. ಅವರ ಕಣ್ತಪ್ಪಿಸಿ ಯಾವ ಘಟನೆಯೂ ನಡೆಯಲು ಸಾಧ್ಯವಿಲ್ಲ. ಈ ಬಾರಿ ಈ ತಂಡದಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಸೇರ್ಪಡೆಯಾಗಿದ್ದಾರೆ. ಪ್ರಧಾನಿಯ ಭದ್ರತಾ ತಂಡದ ಮೊದಲ ಮಹಿಳಾ ಅಧಿಕಾರಿಯಾಗಿ ಇತಿಹಾಸ ನಿರ್ಮಿಸಿರುವ ಮಣಿಪುರದ ಈ ಮಹಿಳೆ (Adaso Kapesa) ಪ್ರಧಾನಿ ಮೋದಿಯರ (PM Modi) ನಾರಿ ಶಕ್ತಿ ಘೋಷಣೆಯ ಸಂಕೇತವೂ ಆಗಿದ್ದಾರೆ.
ಈ ಬಾರಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇವುಗಳಲ್ಲಿ ಒಂದು ಫೋಟೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಿಂದೆ ಮಹಿಳಾ ಎಸ್‌ಪಿಜಿ ಕಮಾಂಡೋ ನಿಂತಿರುವುದನ್ನು ನೋಡಬಹುದು. ಮೋದಿಯವರ ಹಿಂದೆ ಆತ್ಮವಿಶ್ವಾಸದಿಂದ ನಿಂತಿರುವ ಈ ಮಹಿಳೆ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಪ್ರಧಾನ ಮಂತ್ರಿಯವರ ಗಣ್ಯ ಭದ್ರತಾ ತಂಡದಲ್ಲಿ ನಿಯೋಜಿಸಲಾದ ಮೊದಲ ಮಹಿಳಾ ಅಧಿಕಾರಿ ಎಂಬ ಕಾರಣಕ್ಕಾಗಿ ಭಾರೀ ಗಮನ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: ‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಎಸ್‌ಪಿಜಿ ಅಧಿಕಾರಿ ಇನ್ಸ್‌ಪೆಕ್ಟರ್ ಅದಾಸೋ ಕಪೇಸಾ ಪ್ರಸ್ತುತ ವಿಶೇಷ ರಕ್ಷಣಾ ಗುಂಪಿನಲ್ಲಿ (SPG) ನಿಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಣಿಪುರದ ಸೇನಾಪತಿ ಜಿಲ್ಲೆಯ ಕೈಬಿ ಗ್ರಾಮದವರಾದ ಅದಾಸೋ ಕಪೇಸಾ ಅವರು ದೇಶದ ಹೆಮ್ಮೆಯ ಸಂಕೇತವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಯುನೈಟೆಡ್ ಕಿಂಗ್‌ಡಮ್ ಭೇಟಿಯ ಸಮಯದಲ್ಲಿ ಅವರ ಪಕ್ಕದಲ್ಲಿ ನಿಂತಿದ್ದ ಮಹಿಳೆಯೊಬ್ಬರು ಚರ್ಚೆಗೆ ಗ್ರಾಸವಾಗಿದ್ದಾರೆ. ನೆಟ್ಟಿಗರು ಮೋದಿ ಪಕ್ಕ ನಿಂತ ಆ ಮಹಿಳೆಯ ಬಗ್ಗೆ ಭಾರೀ ಆಸಕ್ತಿ ತೋರಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಉಪಸ್ಥಿತಿಯನ್ನು ಶ್ಲಾಘಿಸಿದ್ದಾರೆ. ಹಾಗಾದರೆ, ಆಕೆ ಯಾರು?
From a remote village in Manipur to standing behind the PM as part of the SPG – what a journey! Saluting Inspector Adaso Kapesa for rewriting what’s possible for Indian women in uniform. @narendramodi @PMOIndia pic.twitter.com/MqVc0Dbcwg
— Manasi Kirloskar Tata (@M_KirloskarTata) August 4, 2025
ಅದಾಸೋ ಕಪೇಸಾ ಯಾರು?:
ವೈರಲ್ ಆಗಿರುವ ಫೋಟೋಗಳಲ್ಲಿ ಪ್ರಧಾನಿ ಮೋದಿಯ ಹಿಂದೆ ಇರುವ ಮಹಿಳೆ ಮಣಿಪುರದ ಇನ್ಸ್‌ಪೆಕ್ಟರ್ ಅದಾಸೋ ಕಪೇಸಾ. ಅವರು ತಮ್ಮ ರಾಜ್ಯದ ಮೊದಲ ಮಹಿಳೆಯಾಗಿ ಮತ್ತು ಪ್ರಧಾನಿಯನ್ನು ರಕ್ಷಿಸಲು ಮೀಸಲಾಗಿರುವ ಭಾರತದ ಗಣ್ಯ ಪಡೆಯಾದ ವಿಶೇಷ ರಕ್ಷಣಾ ಗುಂಪಿನಲ್ಲಿ (SPG) ಸೇವೆ ಸಲ್ಲಿಸಿದ ಮೊದಲ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಹುದ್ದೆ ತಲುಪುವ ಮೊದಲು ಅವರ ಪ್ರಯಾಣವು ಗೃಹ ಸಚಿವಾಲಯದ ಅಡಿಯಲ್ಲಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಶಸ್ತ್ರ ಸೀಮಾ ಬಲ್ (SSB)ನಲ್ಲಿ ಪ್ರಾರಂಭವಾಯಿತು. ಅವರು ಪ್ರಸ್ತುತ ಉತ್ತರಾಖಂಡದ ಪಿಥೋರಗಢದಲ್ಲಿರುವ 55ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದಲ್ಲಿ ಭದ್ರತೆ ಮತ್ತು ಕಾನೂನು ಜಾರಿಯಲ್ಲಿ ಮಹಿಳೆಯರಿಗೆ ಎಸ್‌ಪಿಜಿಯಲ್ಲಿ ಅವರ ಸೇರ್ಪಡೆ ಒಂದು ಮಹತ್ವದ ಕ್ಷಣವಾಗಿದೆ. ಇದು ಭಾರತೀಯ ರಕ್ಷಣಾ ಮತ್ತು ಅರೆಸೈನಿಕ ಸೇವೆಗಳಲ್ಲಿ ಮಹಿಳೆಯರಿಗೆ ನೀಡುತ್ತಿರುವ ಅವಕಾಶದ ಹೆಚ್ಚಳದ ಸಂಕೇತವಾಗಿದೆ. ಈ ಮೂಲಕ ಮೋದಿ ನಾರಿಶಕ್ತಿಗೆ ಅಧಿಕಾರ ನೀಡಿ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ದೆಹಲಿ ಆಸ್ಪತ್ರೆಯಲ್ಲಿ ಶಿಬು ಸೊರೆನ್ ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿ, ಹೇಮಂತ್ ಸೊರೆನ್ಗೆ ಸಾಂತ್ವನ
ವಿಶೇಷ ರಕ್ಷಣಾ ತಂಡ (ಎಸ್‌ಪಿಜಿ) ಭಾರತದ ಪ್ರಧಾನಿ ಮತ್ತು ಕೆಲವು ಸಂದರ್ಭಗಳಲ್ಲಿ ಮಾಜಿ ಪ್ರಧಾನಿಗಳು ಮತ್ತು ಅವರ ಹತ್ತಿರದ ಕುಟುಂಬಗಳ ವೈಯಕ್ತಿಕ ಭದ್ರತೆಗೆ ಮೀಸಲಾಗಿರುವ ಹೆಚ್ಚು ತರಬೇತಿ ಪಡೆದ ಪಡೆ. ಈ ತಂಡದಲ್ಲಿ ಸೇರಲು ತೀವ್ರವಾದ ದೈಹಿಕ, ಯುದ್ಧತಂತ್ರದ ಮತ್ತು ಮಾನಸಿಕ ತರಬೇತಿಯನ್ನು ನೀಡಲಾಗುತ್ತದೆ. ದೈಹಿಕ ಪ್ರಾಬಲ್ಯ ಹೆಚ್ಚಾಗರಬೇಕಾದ ಈ ಎಸ್‌ಪಿಜಿ ಇದುವರೆಗೂ ಪುರುಷರ ಘಟಕವಾಗಿತ್ತು. ಈ ತಂಡಕ್ಕೆ ಅದಾಸೋ ಕಪೇಸಾ ಅವರ ಪ್ರವೇಶವು ಇತಿಹಾಸ ನಿರ್ಮಿಸಿದೆ.
ಮಣಿಪುರದ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಅದಾಸೋ ಅವರು ಜೀವನದ ಆರಂಭದಲ್ಲಿಯೇ ದೊಡ್ಡ ಕನಸುಗಳನ್ನು ಬೆಳೆಸಿಕೊಂಡರು. ಅವರು ಕಠಿಣ ಪರಿಶ್ರಮದ ಮೂಲಕ ಎಸ್‌ಎಸ್‌ಬಿ ಪ್ರವೇಶಿಸಿದರು,. ಅದರ ನಂತರ ಭಾರತದ ಅತ್ಯಂತ ವಿಶೇಷ ಮತ್ತು ಸವಾಲಿನ ರಕ್ಷಣಾ ಪಡೆಯ ಮೇಲೆ ಅವರ ದೃಷ್ಟಿ ಇತ್ತು. ಪ್ರತಿಭೆ, ಶಿಸ್ತು ಮತ್ತು ನಿರಂತರ ಪರಿಶ್ರಮದ ಮೂಲಕ ಅವರು ಈಗ ಈ ಗುರಿಯನ್ನು ಸಾಧಿಸಿದ್ದಾರೆ. ಎಸ್‌ಪಿಜಿಗೆ ಸೇರುವುದು ಸಾಮಾನ್ಯ ವಿಷಯವಲ್ಲ. ಇದರಲ್ಲಿ ಸೇರಲು ಸೈನಿಕರಗಂತಲೂ ಹೆಚ್ಚಿನ ತರಬೇತಿ ಬೇಕಾಗುತ್ತದೆ. ಎಸ್‌ಪಿಜಿ ದೇಶದ ಅತ್ಯುತ್ತಮ ತರಬೇತಿ ಪಡೆದ ಸಿಬ್ಬಂದಿ ಮಾತ್ರ ಧರಿಸುವ ಬ್ಯಾಡ್ಜ್ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ