ರಾಷ್ಟ್ರಪತಿ ಚುನಾವಣೆಯ ಮತದಾನಕ್ಕೆ ಇಂದಿಗೂ ಮತಪೆಟ್ಟಿಗೆಗಳೇ ಬಳಕೆಯಾಗುತ್ತಿವೆ, ಮತಯಂತ್ರ ಬಳಸುವುದಿಲ್ಲ ಏಕೆ?
ಈವರೆಗೆ ಎಂದಿಗೂ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗೆ, ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿಲ್ಲ.
ದೆಹಲಿ: ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಸಾಮಾನ್ಯ ಎನಿಸಿರುವ ವಿದ್ಯುನ್ಮಾನ ಮತಯಂತ್ರಗಳನ್ನು (Electronic Voting Machines) ರಾಷ್ಟ್ರಪತಿ ಚುನಾವಣೆಗೆ ಬಳಸುವುದಿಲ್ಲ ಎಂದು ನಿಮಗೆ ಆಶ್ಚರ್ಯವಾಗಿರಬಹುದು. ಈವರೆಗೆ 4 ಲೋಕಸಭಾ ಚುನಾವಣೆ ಮತ್ತು 127 ವಿಧಾನಸಭಾ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳು ಬಳಕೆಯಾಗಿವೆ. ಆದರೆ ಈವರೆಗೆ ಎಂದಿಗೂ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗೆ, ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿಲ್ಲ. ಏಕೆ ಹೀಗೆ ಎಂಬ ಪ್ರಶ್ನೆಯೊಂದು ನಿಮ್ಮನ್ನು ಕಾಡಬಹುದು.
ವಿದ್ಯುನ್ಮಾನ ಮತಯಂತ್ರಗಳನ್ನು ವಿಧಾನಸಭೆ ಅಥವಾ ಲೋಕಸಭೆಯಂಥ ಪ್ರತ್ಯಕ್ಷ ಚುನಾವಣೆಗಳಲ್ಲಿ ಮತಗಳನ್ನು ಸಂಗ್ರಹಿಸಿ, ಕ್ರೋಡೀಕರಣಗೊಳಿಸಲು ಅನುವಾಗುವಂತೆ ರೂಪಿಸಲಾಗಿದೆ. ಹೀಗಾಗಿ ಪರೋಕ್ಷ ಚುನಾವಣೆಗಳಲ್ಲಿ ಮತಯಂತ್ರಗಳನ್ನು ಬಳಸುವ ಪ್ರಕ್ರಿಯೆ ಕೈಬಿಡಲಾಗಿದೆ. ಪ್ರತ್ಯಕ್ಷ ಚುನಾವಣೆಗಳಲ್ಲಿ ಪ್ರತಿ ಮತದಾರರಿಗೆ ತಲಾ ಒಂದು ಮತ ಇರುತ್ತದೆ. ಈ ಮತಗಳನ್ನು ಲೆಕ್ಕ ಹಾಕಿ ಗೆಲುವು ಸಾಧಿಸಿದ ಅಭ್ಯರ್ಥಿಯನ್ನು ಘೋಷಿಸಲಾಗುತ್ತದೆ. ಆದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಹಾಗಲ್ಲ. ಇದರಲ್ಲಿ ಪ್ರತಿ ಮತಕ್ಕೂ ಇಂತಿಷ್ಟೂ ಮೌಲ್ಯ ಎಂಬುದು ಇರುತ್ತದೆ. ಅದನ್ನು ಲೆಕ್ಕ ಹಾಕಲು ತಕ್ಕಂತೆ ವಿದ್ಯುನ್ಮಾನ ಮತಯಂತ್ರ ರೂಪುಗೊಂಡಿಲ್ಲ. ವಿಧಾನ ಪರಿಷತ್ ಅಥವಾ ರಾಜ್ಯಸಭೆ ಚುನಾವಣೆಗಳಲ್ಲಿ ಪ್ರತಿಮತದಾರರು ಪ್ರಾಶಸ್ತ್ಯವನ್ನು ಗುರುತು ಮಾಡಬಹುದಾಗಿದೆ. ಇದನ್ನು ಸಹ ಮತಯಂತ್ರದ ಮೂಲಕ ಲೆಕ್ಕ ಹಾಕಲು ಆಗುವುದಿಲ್ಲ.
ಮತಪತ್ರದಲ್ಲಿ ಉಮೇದುವಾರರ ಹೆಸರುಗಳ ಎದುರು 1, 2, 3, 4, 5 ಎಂದು ಪ್ರಾಶಸ್ತ್ಯ ಗುರುತು ಮಾಡಲಾಗುತ್ತದೆ. ಈ ಪ್ರಾಶಸ್ತ್ಯಗಳನ್ನು ಆಧರಿಸಿ ಮೌಲ್ಯ ಲೆಕ್ಕ ಹಾಕಿ, ಗೆಲುವು ಸಾಧಿಸಿದವರ ಹೆಸರು ಘೋಷಿಸಲಾಗುತ್ತದೆ. ಇಂಥ ಪ್ರಕ್ರಿಯೆಯನ್ನು ಮತಯಂತ್ರದ ಮೂಲಕ ನಿರ್ವಹಿಸುವುದು ಕಷ್ಟ. ಇದೀಗ ನಡೆಯುತ್ತಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಕಣದಲ್ಲಿದ್ದಾರೆ. ಇಲ್ಲಿಯೂ ಪ್ರಜಾಪ್ರತಿನಿಧಿಗಳ ಮತಗಳನ್ನು ಮೌಲ್ಯದ ಆಧಾರದ ಮೇಲೆ ಲೆಕ್ಕ ಹಾಕುವುದರಿಂದ ಅದನ್ನು ನಿರ್ವಹಿಸಲು ಸುಧಾರಿತ ಮತಯಂತ್ರಗಳೇ ಬೇಕಾಗುತ್ತವೆ. ಅಂಥ ಮತಯಂತ್ರಗಳನ್ನು ಹೊಸದಾಗಿ ಅಭಿವೃದ್ಧಿಪಡಿಸಬೇಕಾಗುತ್ತದೆ.
Published On - 11:37 am, Mon, 18 July 22