ಅಹಮದಾಬಾದ್: ದೇಶಕ್ಕೆ ದೇಶ, ಜಗತ್ತಿಗೆ ಜಗತ್ತೇ ಕೊರೊನಾ ಕಾಟದಿಂದ ಆರ್ಥಿಕ ಸಂಕಷ್ಟ, ತತ್ಫಲವಾಗಿ ಹಣದುಬ್ಬರ ಆಕಾಶದತ್ತ ಚಿಮ್ಮಿದೆ. ಆದರೂ ಗಾಂಧಿ ನಾಡು ಅಹಮದಾಬಾದಿನಲ್ಲಿ ಮದ್ಯ ಸೇವೆ ಬಲು ಅಗ್ಗವಾಗಿದ್ದು, ಮದ್ಯ ಪ್ರಿಯರಿಗೆ ಆಪ್ಯಾಯಮಾನವಾಗಿದೆ ಅನ್ನಿಸುತ್ತಿದೆ. ಒಂದು ಬೀರ್ ಕ್ಯಾನ್ ಬೆಲೆ 52 ರೂಪಾಯಿ, ಒಂದು ಬಾಟಲ್ ರಮ್ ಕೇವಲ 350 ರೂಪಾಯಿಯಂತೆ! ಒಂದು ನಿಮಿಷ ತಡೆಯಿರಿ, ಅಹಮದಾಬಾದಿನಲ್ಲಿ ಎಣ್ಣೆ ಇಷ್ಟು ಚೀಪಾ! ಎಂದು ಸಣ್ಣ ಬಾಟಡಲಿ/ ದೊಡ್ಡ ಬಾಟಲೀ ಎಲ್ಲಾ ಗುಡ್ಡೆ ಹಾಕಿಕೊಂಡು ಗುಜರಾತಿನತ್ತ ಓಡಿಬಿಡಬೇಡಿ. ಏಕೆಂದರೆ ಈ ದರ ಪಟ್ಟಿ ನೀಡಿರುವುದು ಅಬಕಾರಿ ಇಲಾಖೆ ಅಥವಾ ಇದು ಅಲ್ಲಿನ ಮಾರುಕಟ್ಟೆ ಬೆಲೆ ಅಲ್ಲ. ಈ ದರ ಪಟ್ಟಿ ದಾಖಲಿಸಿರುವುದು ಸಾಕ್ಷಾತ್ ಅಲ್ಲಿನ ಪೊಲೀಸ್ ಇಲಾಖೆ. ಕಳೆದ 20 ವರ್ಷಗಳಿಂದಲೂ ಗುಜರಾತ್ ಪೊಲೀಸರು ಈ ದರಪಟ್ಟಿಯನ್ನು ಬದಲಾಯಿಸಿಲ್ಲ. ಗಾಡಿಗೆ ಹಾಕುವ ಎಣ್ಣೆ ದರ ಒಂದೇ ಸಮನೆ ಸರ ಸರನೇ ಏರುತ್ತಿದ್ದರೆ, ಬಾಡಿಗೆ ಹಾಕುವ ಎಣ್ಣೆ ಸ್ಥಿರವಾಗಿ ಹೇಗೆ ಉಳಿದುಬಿಟ್ಟಿದೆ ಎಂಬುವುದೇ ಆಶ್ಚರ್ಯದ ಸಂಗತಿ.
ಇದು ಲಿಕ್ಕರ್ನ ನಿಖರ ಬೆಲೆ!
ಇತ್ತೀಚೆಗೆ ಗಾಂಧಿನಗರದ ಪೊಲೀಸರು ಮೂರು ಬಾಟಲಿ ಬ್ರ್ಯಾಂಡೆಡ್ ವಿಸ್ಕಿಯನ್ನು ವಶಪಡಿಸಿಕೊಂಡರು. ಅದರ ಒಟ್ಟು ಮೊತ್ತ 1125 ರೂ. ಅಥವಾ 750 ಎಂಎಲ್ ತಲಾ ಬಾಟಲಿ ಬೆಲೆ 375 ರೂಪಾಯಿಯಂತೆ. ಆದರೆ ಗಮನಿಸಿ ಇದೇ ವಿಸ್ಕಿಯ ಮಾರುಕಟ್ಟೆ ಬೆಲೆ ಸುಮಾರು 600 ರೂಪಾಯಿ ಇದೆ. ಇದು ಲಿಕ್ಕರ್ ನ ನಿಖರ ಬೆಲೆ. ಕುಡುಕ ಎಷ್ಟೇ ಗೋಗರೆದರೂ ಪರ್ಮಿಟ್ ಶಾಪ್ಗಳು ಒಂದು ನಯಾ ಪೈಸೆ ಕಡಿಮೆ ಮಾಡಿಕೊಳ್ಳುವುದಿಲ್ಲ. ಹಾಗಾದರೆ ಪೊಲೀಸರು ಯಾಮಾರಿದ್ದಾರಾ? ಯಾಕೆ ಅವರು ಅಷ್ಟು ಕಡಿಮೆ ರೇಟ್ ನಮೂದಿಸುತ್ತಾರೆ ಎಂದು ಕೆದಕಿ ನೋಡಿದಾಗ 2002ರಲ್ಲಿ ಗುಜರಾತ್ ಅಬಕಾರಿ ಮತ್ತು ಮದ್ಯಪಾನ ನಿಷೇಧ ಇಲಾಖೆ ನಿಗದಿ ಪಡಿಸಿದ್ದ ದರ ಪಟ್ಟಿಯನ್ನೇ ರೆಫರೆನ್ಸ್ಗೆ ಇಟ್ಟುಕೊಂಡು ಪೊಲೀಸರು ಇಂದಿಗೂ ಅಗ್ಗದ ಬೆಲೆಯ ಮದ್ಯ ದರ ನಮೂದಿಸುತ್ತಿದ್ದಾರೆ ತಮ್ಮ ಎಫ್ಐಆರ್ ನಲ್ಲಿ! ಇನ್ನು ಲೋಕಲ್ ಬ್ರ್ಯಾಂಡ್ ಮದ್ಯದ ಬೆಲೆಯೂ ಹೆಚ್ಚಾಗಿಲ್ಲವಂತೆ. ಇಂದಿಗೂ ಒಂದು ಲೀಟರ್ ಮದ್ಯ ಕೇವಲ 20 ರೂಪಾಯಿಗೆ ಸಿಗುತ್ತಿದೆಯಂತೆ… ಪೊಲೀಸ್ ಎಫ್ಐಆರ್ ನಲ್ಲಿ!
ಬೀಸ್ ಸಾಲ್ ಬಾದ್ ಆದರೂ ಇಂದಿಗೂ ಮದ್ಯ ಬೆಲೆ ಅಷ್ಟೇ ಇದೆ!
ಇನ್ನೂ ಏನು ಗೊತ್ತಾ ಭಾರತದಲ್ಲಿ ತಯಾರಾದ ವಿದೇಶಿ ಮದ್ಯಗಳ ಬೆಲೆ (Indian Made Foreign Liquor -IMFL) ಮತ್ತು ನೇರವಾಗಿ ಆಮದು ಮಾಡಿಕೊಂಡಿರುವ ಮದ್ಯದ ಬೆಲೆ 52 ರೂಪಾಯಿ ಯಿಂದ 850 ರೂಪಾಯಿ ವರೆಗೂ ತಲುಪಿದೆ. ಈ ಬ್ರ್ಯಾಂಡ್ ಮದ್ಯಗಳ ಬೆಲೆಗಳು ಕಾಲ ಕಾಲಕ್ಕೆ ಏರುಗತಿಯಲ್ಲಿಯೆ ಇವೆ. ತಗ್ಗಿದ ಮಾತೇ ಇಲ್ಲ. ಇದರ ಬೆಲೆಗಳು ಅನುಕ್ರಮವಾಗಿ 190 ರೂಪಾಯಿಯಿಂದ 1,900 ರೂಪಾಯಿವರೆಗೂ ಏರಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತೆರಿಗೆಯ ಹೊರೆ ಇಲ್ಲದೆ ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?
Published On - 8:23 pm, Mon, 2 May 22