ದೈಹಿಕ ಸಂಬಂಧವಿಲ್ಲದೆ ಹೆಂಡತಿ ಬೇರೆ ಪುರುಷನನ್ನು ಪ್ರೀತಿಸಿದರೆ ವ್ಯಭಿಚಾರವಲ್ಲ; ಮಧ್ಯಪ್ರದೇಶ ಹೈಕೋರ್ಟ್ ತೀರ್ಪು
ದೈಹಿಕ ಸಂಬಂಧವಿಲ್ಲದೆ ಹೆಂಡತಿಯೊಬ್ಬಳು ಬೇರೆ ಪುರುಷನನ್ನು ಪ್ರೀತಿ ಮಾಡುವುದು ವ್ಯಭಿಚಾರವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ತನ್ನ ಹೆಂಡತಿಗೆ 4,000 ರೂ.ಗಳ ಮಧ್ಯಂತರ ಜೀವನಾಂಶವನ್ನು ಪಾವತಿಸಲು ನಿರ್ದೇಶಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿಯ ವಿಚಾರಣೆ ನೀಡಿದ ನ್ಯಾಯಾಲಯ ಈ ಆದೇಶ ನೀಡಿದೆ.

ನವದೆಹಲಿ: ಒಂದು ವೇಳೆ ಮಹಿಳೆ ತನ್ನ ಪತಿಯನ್ನು ಹೊರತುಪಡಿಸಿ ಬೇರೆ ಪುರುಷರ ಜೊತೆ ದೈಹಿಕ ಸಂಬಂಧ ಹೊಂದದೆ ಕೇವಲ ಪ್ರೀತಿ, ವಾತ್ಸಲ್ಯದ ಸಂಬಂಧವನ್ನು ಮಾತ್ರ ಹೊಂದಿದ್ದರೆ ಅದು ವ್ಯಭಿಚಾರಕ್ಕೆ ಸಮನಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದೈಹಿಕ ಸಂಬಂಧ ಹೊಂದಿದರೆ ಮಾತ್ರ ಅದನ್ನು ಅಕ್ರಮ ಸಂಬಂಧ ಅಥವಾ ವ್ಯಭಿಚಾರ ಎಂದು ಕರೆಯಲು ಸಾಧ್ಯ ಎಂದು ಕೋರ್ಟ್ ತೀರ್ಪು ನೀಡಿದೆ. ತನ್ನ ಹೆಂಡತಿ ಬೇರೊಬ್ಬರನ್ನು ಪ್ರೀತಿಸುತ್ತಿರುವುದರಿಂದ ಆಕೆ ತನ್ನಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮಧ್ಯಪ್ರದೇಶ ಕೋರ್ಟ್ ಈ ತೀರ್ಪು ನೀಡಿದೆ.
ಆ ವ್ಯಕ್ತಿಯ ವಾದವನ್ನು ತಿರಸ್ಕರಿಸಿರುವ ಕೋರ್ಟ್ “ವ್ಯಭಿಚಾರವೆಂದರೆ ಆಕೆ ಪರ ವ್ಯಕ್ತಿಯೊಂದಿಗೆ ಲೈಂಗಿಕ ಸಂಭೋಗವನ್ನು ಹೊಂದಿರಬೇಕು. ಆಕೆ ಕೇವಲ ಪ್ರೀತಿ ಮಾಡುತ್ತಿದ್ದರೆ ಅದು ವ್ಯಭಿಚಾರವೆಂದು ಪರಿಗಣನೆಯಾಗುವುದಿಲ್ಲ” ಎಂದು ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಜಿ.ಎಸ್. ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅತ್ಯಾಚಾರಕ್ಕೊಳಗಾದ ಹೆಣ್ಣಿಗೆ ಗರ್ಭಪಾತದ ಹಕ್ಕಿದೆ; ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು
ತನ್ನ ಹೆಂಡತಿಗೆ 4,000 ರೂ.ಗಳ ಮಧ್ಯಂತರ ಜೀವನಾಂಶವನ್ನು ಪಾವತಿಸಲು ನಿರ್ದೇಶಿಸಿದ ಕುಟುಂಬ ನ್ಯಾಯಾಲಯದ ಆದೇಶದ ವಿರುದ್ಧ ಪತಿ ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. “ಯಾವುದೇ ದೈಹಿಕ ಸಂಬಂಧವಿಲ್ಲದೆ ಹೆಂಡತಿ ಬೇರೊಬ್ಬರ ಬಗ್ಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ಹೊಂದಿದ್ದರೆ ಅದು ವ್ಯಭಿಚಾರ ಎಂದು ಹೇಳಲಾಗುವುದಿಲ್ಲ. ಹಾಗೇ, ಗಂಡನ ಅಲ್ಪ ಆದಾಯದ ಕಾರಣಕ್ಕೆ ಜೀವನಾಂಶವನ್ನು ನಿರಾಕರಿಸಲು ಮಾನದಂಡವಾಗಲು ಸಾಧ್ಯವಿಲ್ಲ. ಅರ್ಜಿದಾರರು ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ಸಮರ್ಥರಲ್ಲ ಎಂದು ಸಂಪೂರ್ಣವಾಗಿ ತಿಳಿದೂ ಅವರು ಯುವತಿಯನ್ನು ಮದುವೆಯಾದರೆ ಅದಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ. ಅವರು ಸಮರ್ಥ ವ್ಯಕ್ತಿಯಾಗಿದ್ದರೆ ಅವರು ತಮ್ಮ ಹೆಂಡತಿಯನ್ನು ನಿರ್ವಹಿಸಲು ಅಥವಾ ನಿರ್ವಹಣಾ ಮೊತ್ತವನ್ನು ಪಾವತಿಸಲು ಏನನ್ನಾದರೂ ಸಂಪಾದಿಸಬೇಕು.” ಎಂದು ಕೋರ್ಟ್ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




