ದೆಹಲಿಗೆ ಮತ್ತೊಮ್ಮೆ ಮಹಿಳಾ ಮುಖ್ಯಮಂತ್ರಿ?; ಬಿಜೆಪಿಯಿಂದ ಅಚ್ಚರಿಯ ಆಯ್ಕೆ ಸಾಧ್ಯತೆ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 27 ವರ್ಷಗಳ ಬಳಿಕ ಸರ್ಕಾರ ರಚಿಸಲಿದೆ. ಇನ್ನೂ ಬಿಜೆಪಿ ಸಿಎಂ ಯಾರಾಗಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ, ಬಿಜೆಪಿ ದೆಹಲಿಯಲ್ಲಿ ಅಚ್ಚರಿಯ ಆಯ್ಕೆಗೆ ಮುಂದಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಗೆ 4ನೇ ಬಾರಿಗೆ ಮಹಿಳಾ ಮುಖ್ಯಮಂತ್ರಿ ಅಧಿಕಾರಕ್ಕೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರ ಜೊತೆಗೆ ಪರ್ವೇಶ್ ವರ್ಮಾ ಸೇರಿದಂತೆ ಅನೇಕ ಪುರುಷ ಅಭ್ಯರ್ಥಿಗಳು ಕೂಡ ಸಿಎಂ ರೇಸ್​ನಲ್ಲಿದ್ದಾರೆ.

ದೆಹಲಿಗೆ ಮತ್ತೊಮ್ಮೆ ಮಹಿಳಾ ಮುಖ್ಯಮಂತ್ರಿ?; ಬಿಜೆಪಿಯಿಂದ ಅಚ್ಚರಿಯ ಆಯ್ಕೆ ಸಾಧ್ಯತೆ
Bansuri Swaraj With Modi

Updated on: Feb 11, 2025 | 5:26 PM

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಮುಖ್ಯಮಂತ್ರಿ ಹುದ್ದೆಗೆ ಮಹಿಳಾ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. 27 ವರ್ಷಗಳ ನಂತರ ದೆಹಲಿಯಲ್ಲಿ 70 ಸದಸ್ಯರ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆದ್ದು ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಮರಳಿದ ನಂತರ ಬಿಜೆಪಿಯ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಗುಸುಗುಸು ತೀವ್ರಗೊಂಡಿದೆ. ಮುಖ್ಯಮಂತ್ರಿ ಆಯ್ಕೆಯ ವಿಷಯಕ್ಕೆ ಬಂದಾಗ ಇತ್ತೀಚೆಗೆ ಬೇರೆ ರಾಜ್ಯಗಳಲ್ಲಿ ಅಚ್ಚರಿಯ ಹೆಸರುಗಳನ್ನು ಘೋಷಿಸಿರುವ ಬಿಜೆಪಿ ದೆಹಲಿಯಲ್ಲೂ ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆಯಿದೆ. ಹರಿಯಾಣ, ಮಧ್ಯಪ್ರದೇಶ, ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಸಿಎಂ ಸ್ಥಾನಕ್ಕೆ ಘೋಷಿಸಲಾಗಿತ್ತು.

ಮೂಲಗಳು ಸೂಚಿಸುವಂತೆ, ಬಿಜೆಪಿಯ ಪಟ್ಟಿಯಲ್ಲಿರುವ ಹೆಸರುಗಳಲ್ಲಿ ದೆಹಲಿಯ ಮೊದಲ ಮುಖ್ಯಮಂತ್ರಿ ಮತ್ತು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಕೂಡ ಒಬ್ಬರು. ಹಾಗೇ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ನಾಲ್ಕು ಮಹಿಳಾ ಅಭ್ಯರ್ಥಿಗಳು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಾಬಲ್ಯವನ್ನು ಕೊನೆಗೊಳಿಸಿದ ನಿರ್ಣಾಯಕ ಚುನಾವಣೆಯಲ್ಲಿ ರೇಖಾ ಗುಪ್ತಾ, ಶಿಖಾ ರಾಯ್, ಪೂನಂ ಶರ್ಮಾ ಮತ್ತು ನೀಲಂ ಪಹೇಲ್ವಾನ್ ಜಯ ಗಳಿಸಿದ್ದಾರೆ. ಹೀಗಾಗಿ, ಈ ನಾಲ್ವರಲ್ಲಿ ಒಬ್ಬರು ಮಹಿಳೆ ಸಿಎಂ ಆಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಹಾಗೇ, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರು ಕೂಡ ಈ ಪಟ್ಟಿಯಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ: ದೆಹಲಿ ಫಲಿತಾಂಶ: ಬಿಜೆಪಿಯಲ್ಲಿ ಸಿಎಂ ರೇಸ್​ನಲ್ಲಿ ಯಾರೆಲ್ಲ? ಇಲ್ಲಿದೆ ವಿವರ

ಮುಖ್ಯಮಂತ್ರಿ ಹುದ್ದೆಗೆ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು ಪರ್ವೇಶ್ ಸಾಹಿಬ್ ವರ್ಮಾ. ಅವರು ನವದೆಹಲಿ ಸ್ಥಾನದಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ನಂತರ ಸಿಎಂ ಸ್ಥಾನಕ್ಕೆ ಭಾರೀ ಚರ್ಚೆಯಲ್ಲಿರುವ ವ್ಯಕ್ತಿಯಾಗಿದ್ದಾರೆ. ಪರ್ವೇಶ್ ವರ್ಮಾ ಅವರ ತಂದೆ ಸಾಹಿಬ್ ಸಿಂಗ್ ವರ್ಮಾ ದೆಹಲಿಯ ಮುಖ್ಯಮಂತ್ರಿಯಾಗಿದ್ದರು. ಉಳಿದಂತೆ ಆಶಿಶ್ ಸೂದ್, ಪವನ್ ಶರ್ಮಾ, ವಿಜೇಂದರ್ ಗುಪ್ತಾ ಮತ್ತು ಸತೀಶ್ ಉಪಾಧ್ಯಾಯ ಹೆಸರು ಕೂಡ ದೆಹಲಿ ಮುಖ್ಯಮಂತ್ರಿ ರೇಸ್​ನಲ್ಲಿದೆ.

ಹೊಸ ಸಚಿವ ಸಂಪುಟವು ಮಹಿಳೆಯರು ಮತ್ತು ದಲಿತ ನಾಯಕರ ಬಲವಾದ ಮಿಶ್ರಣವನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ತನ್ನದಾಗಿಸಿಕೊಂಡಿರುವ ಬಿಜೆಪಿ, ದೆಹಲಿಯಲ್ಲಿ ಅಧಿಕಾರಕ್ಕೆ ಮರಳಲು 27 ವರ್ಷಗಳ ಕಾಲ ಕಾಯಬೇಕಾಯಿತು. ಈ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕೇವಲ 22 ಸ್ಥಾನಗಳನ್ನು ಪಡೆದಿದೆ.

ಸಂಭಾವ್ಯ ಮಹಿಳಾ ಸಿಎಂ ಅಭ್ಯರ್ಥಿಗಳು:

ರೇಖಾ ಗುಪ್ತಾ: ರೇಖಾ ಗುಪ್ತಾ (ಶಾಲಿಮಾರ್ ಬಾಗ್ ಶಾಸಕಿ) ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷೆಯೂ ಆಗಿದ್ದಾರೆ. 29,595 ಮತಗಳ ಅಂತರದಿಂದ ತಮ್ಮ ಸ್ಥಾನವನ್ನು ಗೆದ್ದಿದ್ದಾರೆ.

ಶಿಖಾ ರಾಯ್: ಶಿಖಾ ರಾಯ್ (ಗ್ರೇಟರ್ ಕೈಲಾಶ್) ಮತ್ತೊಂದು ಪ್ರಬಲ ಸ್ಪರ್ಧಿಯಾಗಿದ್ದು, ಅವರು ಎಎಪಿಯ ಸೌರಭ್ ಭಾರದ್ವಾಜ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಾರೆ.

ಇದನ್ನೂ ಓದಿ: Atishi Resigns: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅತಿಶಿ ಮರ್ಲೆನಾ

ಪೂನಂ ಶರ್ಮಾ: ವಜೀರ್‌ಪುರ ಶಾಸಕಿ. ಇವರು 11,425 ಮತಗಳಿಂದ ಗೆದ್ದಿದ್ದಾರೆ.

ನೀಲಂ ಪೆಹಲ್ವಾನ್: ನಜಫ್‌ಗಢ ಶಾಸಕಿ. ಇವರು 1,01,708 ಮತಗಳಿಂದ ಭಾರಿ ಗೆಲುವು ಸಾಧಿಸಿದ್ದಾರೆ.

ಬಾನ್ಸುರಿ ಸ್ವರಾಜ್: ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್. ನವದೆಹಲಿ ಲೋಕಸಭಾ ಸ್ಥಾನದಿಂದ ಗೆದ್ದಿರುವ ಇವರು ಬಿಜೆಪಿ ಸಂಸದೆಯಾಗಿದ್ದಾರೆ.

ಸ್ಮೃತಿ ಇರಾನಿ: ಮಾಜಿ ಕೇಂದ್ರ ಸಚಿವೆ. 2024ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ಕಾಂಗ್ರೆಸ್‌ನ ಕಿಶೋರಿ ಲಾಲ್ ವಿರುದ್ಧ ಸೋತರು. ಆದರೆ ಸಿಎಂ ಸ್ಥಾನದ ಪ್ರಬಲ ಸ್ಪರ್ಧಿಯಾಗಿ ಉಳಿದಿದ್ದಾರೆ.

ಈ ಮೊದಲು ದೆಹಲಿಯಲ್ಲಿ ಸುಷ್ಮಾ ಸ್ವರಾಜ್ (ಬಿಜೆಪಿ), ಶೀಲಾ ದೀಕ್ಷಿತ್ (ಕಾಂಗ್ರೆಸ್), ಮತ್ತು ಅತಿಶಿ (ಎಎಪಿ) ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಆ ಪಟ್ಟಿಗೆ ಈ ಬಾರಿ ಬಿಜೆಪಿಯಿಂದ ಮತ್ತೊಬ್ಬರ ಹೆಸರು ಸೇರ್ಪಡೆಯಾಗುವ ಸಾಧ್ಯತೆಗಳೂ ಇವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ