ಭಯೋತ್ಪಾದನೆಯನ್ನು ನಿಲ್ಲಿಸದಿದ್ದರೆ ಭೂಪಟದಿಂದಲೇ ಮಾಯವಾಗುತ್ತೀರಿ; ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ಎಚ್ಚರಿಕೆ
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಭಾರತವು ಆಪರೇಷನ್ ಸಿಂಧೂರ್ 1.0 ಸಮಯದಲ್ಲಿ ತೋರಿಸಿದ ಅದೇ ಸಂಯಮವನ್ನು ಮುಂದೆಯೂ ತೋರಿಸುತ್ತದೆ ಎಂದು ಭಾವಿಸಬೇಡಿ. ನೀವು ಭಯೋತ್ಪಾದನೆಯನ್ನು ನಿಲ್ಲಿಸದಿದ್ದರೆ ಭೂನಕ್ಷೆಯಲ್ಲೇ ಪಾಕಿಸ್ತಾನ ಇರದಂತೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

ನವದೆಹಲಿ, ಅಕ್ಟೋಬರ್ 3: ಪಾಕಿಸ್ತಾನ (Pakistan) ಮುಂದೆಯೂ ಕೂಡ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವನ್ನು ಒದಗಿಸುವುದನ್ನು ಮುಂದುವರಿಸಿದರೆ ಭಾರತ ಭಯೋತ್ಪಾದನೆಯ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಎಚ್ಚರಿಸಿದ್ದಾರೆ. ಜನರಲ್ ದ್ವಿವೇದಿ ಇಂದು ಘಡ್ಶಾನಾ ಗ್ರಾಮದಲ್ಲಿ ಭಾರತೀಯ ಸೇನಾ ಕಂಟೋನ್ಮೆಂಟ್‌ನಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸುವಲ್ಲಿ ಮತ್ತು 100ಕ್ಕೂ ಹೆಚ್ಚು ಉಗ್ರಗಾಮಿಗಳ ಹತ್ಯೆಗೆ ಕಾರಣವಾದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸನ್ನು ಅವರು ಈ ವೇಳೆ ಎತ್ತಿ ತೋರಿಸಿದರು.
ಇದನ್ನೂ ಓದಿ: ಪಾಕಿಸ್ತಾನದ ಜೊತೆಗಿನ ಯುದ್ಧ ಮೇ 10ಕ್ಕೆ ಕೊನೆಗೊಂಡಿಲ್ಲ; ಆಪರೇಷನ್ ಸಿಂಧೂರ್ ಬಗ್ಗೆ ಸೇನಾ ಮುಖ್ಯಸ್ಥ ಮಹತ್ವದ ಹೇಳಿಕೆ
ಪಾಕಿಸ್ತಾನ ಜಾಗತಿಕ ಭೂಪಟದಲ್ಲಿ ಉಳಿಯಲು ಬಯಸಿದರೆ ಭಾರತದೊಳಗೆ ಭಯೋತ್ಪಾದನೆಯನ್ನು ಪ್ರಾಯೋಜಿಸುವುದನ್ನು ನಿಲ್ಲಿಸಬೇಕು ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತೋರಿಸಿದ ಅದೇ ಸಂಯಮವನ್ನು ಮುಂದೆಯೂ ತೋರಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.
VIDEO | Anupgarh, Rajasthan: Indian Army Chief General Upendra Dwivedi says, “This time we will not maintain the restraint that we did in Operation Sindoor 1.0… this time we will do something that Pakistan will have to think whether it wants to be in Geography or not. If… pic.twitter.com/YXoHUL7xKv
— Press Trust of India (@PTI_News) October 3, 2025
“ಈ ಬಾರಿ ನಾವು ಆಪರೇಷನ್ ಸಿಂಧೂರ್ 1.0ರಲ್ಲಿ ತೋರಿದ ಅದೇ ಸಂಯಮವನ್ನು ಕಾಯ್ದುಕೊಳ್ಳುವುದಿಲ್ಲ. ಈ ಬಾರಿ ಪಾಕಿಸ್ತಾನವು ಭೌಗೋಳಿಕವಾಗಿ ಇರಬೇಕೇ ಅಥವಾ ಬೇಡವೇ ಎಂದು ಯೋಚಿಸಬೇಕಾದ ಕೆಲಸವನ್ನು ನಾವು ಮಾಡುತ್ತೇವೆ. ಪಾಕಿಸ್ತಾನ ಭೌಗೋಳಿಕವಾಗಿ ಇರಬೇಕೆಂದು ಬಯಸಿದರೆ ಅದು ಭಯೋತ್ಪಾದನೆಯನ್ನು ನಿಲ್ಲಿಸಬೇಕು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ಬಳಿಕ ಉಗ್ರರ ನೆಲೆಗಳು ಪಾಕಿಸ್ತಾನದಿಂದ ಅಫ್ಘಾನ್ ಗಡಿಗೆ ಶಿಫ್ಟ್
ಸೇನಾ ಮುಖ್ಯಸ್ಥ ದ್ವಿವೇದಿ ಇಂದು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಮಹತ್ವದ ಕೊಡುಗೆಗಳಿಗಾಗಿ ಮಾಜಿ ಸೈನಿಕರಾದ ಲೆಫ್ಟಿನೆಂಟ್ ಕರ್ನಲ್ ಹೆಮ್ ಸಿಂಗ್ ಶೇಖಾವತ್ (ನಿವೃತ್ತ), ಲೆಫ್ಟಿನೆಂಟ್ ಕರ್ನಲ್ ಬಿರ್ಬಲ್ ಬಿಷ್ಣೋಯ್ (ನಿವೃತ್ತ), ರಿಸಲ್ದಾರ್ ಭನ್ವರ್ ಸಿಂಗ್ (ನಿವೃತ್ತ) ಮತ್ತು ಹವ್ ನಕತ್ ಸಿಂಗ್ (ನಿವೃತ್ತ) ಅವರನ್ನು ಸನ್ಮಾನಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




