
ಕೊಲ್ಕತ್ತಾ, ಜುಲೈ 12: ಐಐಎಂ-ಕೊಲ್ಕತ್ತಾದ ಬಾಲಕರ ಹಾಸ್ಟೆಲ್ ಒಳಗೆ ವಿದ್ಯಾರ್ಥಿಯೊಬ್ಬ ತನ್ನ ಮೇಲೆ ಅತ್ಯಾಚಾರ (Sexual Harassment) ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಳು. ಆದರೆ, ಆಕೆಯ ತಂದೆ ಇಂದು ಆ ಆರೋಪವನ್ನು ನಿರಾಕರಿಸಿದ್ದು, ಆಕೆ ಆಟೋದಿಂದ ಬಿದ್ದಿದ್ದಾಳೆ ಎಂದು ಹೇಳಿದ್ದಾರೆ. ಹರಿದೇವ್‌ಪುರ ಪೊಲೀಸ್ ಠಾಣೆಯಲ್ಲಿ ಯುವತಿ ದಾಖಲಿಸಿದ ಎಫ್‌ಐಆರ್ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆ ಶುಕ್ರವಾರ ಕಾಲೇಜಿನ ಬಾಲಕರ ಹಾಸ್ಟೆಲ್ ಒಳಗೆ ನಡೆದಿದೆ.
ಐಐಎಂ ಕೊಲ್ಕತ್ತಾದಲ್ಲಿ ಎರಡನೇ ವರ್ಷದ ಎಂಬಿಎ ವಿದ್ಯಾರ್ಥಿನಿಯೊಬ್ಬ ಬಾಲಕರ ಹಾಸ್ಟೆಲ್ ಒಳಗೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬಳು ಆರೋಪಿಸಿದ ನಂತರ ಆತನನ್ನು ಬಂಧಿಸಲಾಗಿದೆ. ಆದರೆ, ಆ ಯುವತಿಯ ತಂದೆ ತನ್ನ ಮಗಳ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ನಮ್ಮ ಮಗಳು ಚೆನ್ನಾಗಿದ್ದಾಳೆ ಮತ್ತು ವಿಶ್ರಾಂತಿ ಪಡೆಯುತ್ತಿದ್ದಾಳೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಕೇಸ್: ಜಾಮೀನು ವಿಚಾರವಾಗಿ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಮಹತ್ವದ ಸೂಚನೆ
ವೃತ್ತಿಯಲ್ಲಿ ಮನೋವಿಜ್ಞಾನಿಯಾಗಿರುವ ಯುವತಿ ಶುಕ್ರವಾರ ಸಂಜೆ ಹರಿದೇವಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಕೈಬರಹದ ದೂರು ಸಲ್ಲಿಸಿದರು. ಊಟದ ಸಮಯದಲ್ಲಿ ಪಿಜ್ಜಾ ಮತ್ತು ಜ್ಯೂಸ್ ನೀಡಲಾಗಿದ್ದು, ಅವುಗಳನ್ನು ಸೇವಿಸಿದ ಕೂಡಲೇ ಅಸ್ವಸ್ಥಳಾಗಿರುವುದಾಗಿ ಅವರು ಆರೋಪಿಸಿದ್ದರು. ಕೌನ್ಸೆಲಿಂಗ್‌ಗೆ ಆಮಿಷವೊಡ್ಡಿ, ಜ್ಯೂಸ್ನಲ್ಲಿ ಡ್ರಗ್ಸ್ ಬೆರೆಸಿ ಕೊಡಲಾಗಿದೆ ಮತ್ತು ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರಿಗೆ ಸಂತ್ರಸ್ತೆ ನೀಡಿದ ಹೇಳಿಕೆಯ ಪ್ರಕಾರ, ಆಕೆಯನ್ನು ಐಐಎಂ-ಕೊಲ್ಕತ್ತಾ ಕ್ಯಾಂಪಸ್ ಬಾಲಕರ ಹಾಸ್ಟೆಲ್‌ಗೆ ಉದ್ಯೋಗ ಕೌನ್ಸೆಲಿಂಗ್ಗಾಗಿ ಆಹ್ವಾನಿಸಲಾಗಿತ್ತು. ಅಲ್ಲಿ, ಆಕೆಗೆ ಪಿಜ್ಜಾ ಮತ್ತು ತಂಪು ಪಾನೀಯವನ್ನು ನೀಡಲಾಯಿತು. ಅದರಲ್ಲಿ ನಿದ್ರಾಜನಕ ಬೆರೆಸಲಾಗಿದೆ ಎಂದು ಆಕೆ ಶಂಕಿಸಿದ್ದಾರೆ. ಆ ಪಾನೀಯ ಸೇವಿಸಿದ ನಂತರ, ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಆಕೆಗೆ ಪ್ರಜ್ಞೆ ಮರಳಿ ಬಂದ ನಂತರ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆಕೆಗೆ ಗೊತ್ತಾಯಿತು. ಕೂಡಲೆ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆದರೆ, ಶನಿವಾರ ಮಧ್ಯಾಹ್ನ ಈ ಪ್ರಕರಣ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಮಾಧ್ಯಮಗಳೊಂದಿಗೆ ಮಾತನಾಡಿದ ಯುವತಿಯ ತಂದೆ ತಮ್ಮ ಮಗಳು ಮಾಡಿದ ಎಲ್ಲಾ ಆರೋಪಗಳನ್ನು ನಿರಾಕರಿಸಿದರು. ಯಾರೂ ಅವಳೊಂದಿಗೆ ಕೆಟ್ಟದಾಗಿ ವರ್ತಿಸಿಲ್ಲ, ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಮತ್ತು ಬಂಧಿತ ವಿದ್ಯಾರ್ಥಿಯ ಬಗ್ಗೆ ಅವಳಿಗೇನೂ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. “ಅವಳು ಸಂಪೂರ್ಣವಾಗಿ ಆರೋಗ್ಯವಾಗಿದ್ದಾಳೆ ಮತ್ತು ಈಗ ನಿದ್ರಿಸುತ್ತಿದ್ದಾಳೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊಲ್ಕತ್ತಾದ ಐಐಎಂ ಬಾಲಕರ ಹಾಸ್ಟೆಲ್‌ನಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ
ಶುಕ್ರವಾರ ರಾತ್ರಿ 9.34ರ ಸುಮಾರಿಗೆ ನನಗೆ ಫೋನ್ ಕರೆ ಬಂದಿದ್ದು, ಅದರಲ್ಲಿ ತನ್ನ ಮಗಳು ಆಟೋರಿಕ್ಷಾದಿಂದ ಬಿದ್ದು ಮೂರ್ಛೆ ಹೋಗಿದ್ದಾಳೆ ಎಂದು ತಿಳಿಸಿದ್ದಾಗಿ ಅವರು ಹೇಳಿದ್ದಾರೆ. ಆಕೆಯನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಯ ನರವಿಜ್ಞಾನ ವಿಭಾಗದಲ್ಲಿ ಸೇರಿಸಲಾಗಿದೆ. ಅಲ್ಲಿಗೆ ಪೊಲೀಸರು ಆಕೆಯನ್ನು ಕರೆದುಕೊಂಡು ಹೋಗಿದ್ದರು ಎಂದು ಅವರು ಹೇಳಿದ್ದಾರೆ. ಈ ಎಲ್ಲಾ ಹೇಳಿಕೆಗಳ ಹೊರತಾಗಿಯೂ, ಯುವತಿಯ ಲಿಖಿತ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ