ಉದ್ಯೋಗದಲ್ಲಿರುವ ಪತ್ನಿ ಸಂಬಳವನ್ನು ತನ್ನ ಕೈಗೆ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪತಿ ಆಕೆಗೆ ಮನಬಂದಂತೆ ಥಳಿಸಿರುವ ಘಟನೆ ಗುಜರಾತ್ (Gujarat)ನ ಅಹ್ಮದಾಬಾದ್ನ ನಾನಾ ಚಿಲೋಡಾ ಎಂಬಲ್ಲಿ ನಡೆದಿದೆ. ಪತಿಯಿಂದ ಹಿಂಸೆಗೆ ಒಳಗಾಗಿರುವ 27ವರ್ಷದ ಮಹಿಳೆ ಇದೀಗ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ನನ್ನ ಸಂಪೂರ್ಣ ಸಂಬಳವನ್ನೂ ಪತಿ ಕಸಿದುಕೊಳ್ಳುತ್ತಾರೆ. ನಾನು ಅದಕ್ಕೆ ಪ್ರತಿರೋಧ ಒಡ್ಡಿದರೆ ಮನಬಂದಂತೆ ಥಳಿಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ. ಎಫ್ಐಆರ್ ಕೂಡ ದಾಖಲಾಗಿದೆ.
ಈ ದಂಪತಿ 2018ರ ಆಗಸ್ಟ್ನಲ್ಲಿ ಮದುವೆಯಾಗಿದ್ದಾರೆ. ಮಹಿಳೆ ಚಾರ್ಟರ್ಡ್ ಅಕೌಂಟೆಂಟ್. ಮದವೆಯಾದ ಕೆಲವೇ ದಿನದಲ್ಲಿ ಪತಿ ಆಕೆಯ ಬಳಿ ನಿನ್ನ ಪೂರ್ತಿ ಸಂಬಳವನ್ನೂ ನನಗೇ ಕೊಡಬೇಕು ಎಂದು ಹೇಳಿದ್ದ. ಆತ ಸ್ವತಃ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಪತ್ನಿಯ ಸಂಬಳವೂ ತನಗೇ ಬೇಕು ಎಂಬುದು ಆಗ್ರಹವಾಗಿತ್ತು. ಆದರೆ ಮಹಿಳೆ ಅರ್ಧ ಸಂಬಳ ತಾನಿಟ್ಟುಕೊಂಡು ಇನ್ನರ್ಧವನ್ನು ಆತನಿಗೆ ಕೊಟ್ಟಿದ್ದರು. ಅಷ್ಟಕ್ಕೇ ತೀವ್ರವಾಗಿ ಕೋಪಗೊಂಡಿದ್ದ ಆತ ಮನಬಂದಂತೆ ಹೊಡೆದಿದ್ದ. ನಾನು ನಿನ್ನನ್ನು ಮದುವೆಯಾಗಿದ್ದೇ ಸಂಬಳಕ್ಕಾಗಿ ಎಂದು ಪತ್ನಿಗೆ ನೇರವಾಗಿಯೇ ಹೇಳಿದ್ದ ಅವನು, ಸ್ಯಾಲರಿ ಕೊಡದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದ್ದ. ಈ ಎಲ್ಲ ವಿವರಗಳನ್ನೂ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಈ ದಂಪತಿ 2019ರಲ್ಲಿ ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾಕ್ಕೆ ಉದ್ಯೋಗಕ್ಕಾಗಿ ತೆರಳಿದ್ದರು. ಅಲ್ಲಿ ಹೋದರೆ ಈ ಜಗಳ, ಹೊಡೆದಾಟ ತಪ್ಪಬಹುದು ಎಂಬ ಆಸೆಯಿತ್ತು. ಆದರೆ ಅಲ್ಲಿಯೂ ಇದೇ ಪರಿಸ್ಥಿತಿಯೇ ಮುಂದುವರಿದಿತ್ತು. ಪತಿ ಹೊಡೆಯುವುದು, ಹಿಂಸಿಸುವುದು ತಪ್ಪಲಿಲ್ಲ. ನಂತರ 2020ರ ಸೆಪ್ಟೆಂಬರ್ನಲ್ಲಿ ಮತ್ತೆ ವಾಪಸ್ ಬಂದೆವು ಎಂದೂ ಮಹಿಳೆ ಹೇಳಿದ್ದಾರೆ. ಇನ್ನು ಕಳೆದ ವಾರ ನನ್ನ ತಂದೆ-ತಾಯಿ ನನ್ನ ಮನೆಗೆ ಬಂದಿದ್ದರು. ಆಗ ಕೂಡ ನನ್ನ ಪತಿ ಸರಿಯಾಗಿ ವರ್ತಿಸಲಿಲ್ಲ. ಅವರ ಬಳಿ ನಮ್ಮ ಮನೆಗೆ ಬರಬೇಡಿ ಎಂದು ಹೇಳಿದ. ಇದಾದ ಬಳಿಕ ನನಗೂ ತುಂಬ ನೋವಾಯಿತು. ನಾನೂ ಮನೆಬಿಟ್ಟು ಹೋಗಿ ಅಪ್ಪ-ಅಮ್ಮನ ಜತೆ ವಾಸಿಸಲು ಶುರುಮಾಡಿದ್ದೇನೆ ಎಂದೂ ತಿಳಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನಕ್ಕೆ ಅವಕಾಶ; ಜಗ್ಗೇಶ್ ಪುತ್ರ ಗುರುರಾಜ್ ನಟನೆಯ ‘ಕಾಗೆ ಮೊಟ್ಟೆ’ ಬಿಡುಗಡೆ
ಟೆಕ್ಕಿ ಸಾವಿಗೆ 2.82 ಕೋಟಿ ಪರಿಹಾರ ನೀಡದೆ ಸತಾಯಿಸಿದ ಸಾರಿಗೆ ಇಲಾಖೆ: ಬಸ್ ಜಪ್ತಿ ಮಾಡಿದ ಕೋರ್ಟ್ ಸಿಬ್ಬಂದಿ!
Published On - 12:14 pm, Fri, 1 October 21