ಇಂದಿನಿಂದ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನಕ್ಕೆ ಅವಕಾಶ; ಜಗ್ಗೇಶ್ ಪುತ್ರ ಗುರುರಾಜ್ ನಟನೆಯ ‘ಕಾಗೆ ಮೊಟ್ಟೆ’ ಬಿಡುಗಡೆ
ಇಂದು ಬಿಡುಗಡೆಯಾಗಿರುವ ನಟ ಜಗ್ಗೇಶ್ ಪುತ್ರ ಗುರುರಾಜ್ ನಟಿಸಿರುವ ‘ಕಾಗೆ ಮೊಟ್ಟೆ’ ಚಿತ್ರವನ್ನು ಪ್ರೇಕ್ಷಕರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಚಿತ್ರಮಂದಿರಗಳಲ್ಲಿ 100 ಪ್ರತಿಶತ ಭರ್ತಿಗೆ ಅವಕಾಶ ನೀಡಿರುವುದರಿಂದ ಕಳೆಗುಂದಿದ್ದ ಗಾಂಧಿನಗರ ಮತ್ತೆ ಸಂಭ್ರಮದಿಂದ ನಳನಳಿಸುತ್ತಿದೆ.
100% ಆಕ್ಯೂಪೆನ್ಸಿಗೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಮತ್ತೆ ಆಗಮಿಸಿದ್ದಾರೆ. ಇಂದು ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆಯಾದ ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಅಭಿನಯದ ‘ಕಾಗೆ ಮೊಟ್ಟೆ’ ಚಿತ್ರವನ್ನು ವೀಕ್ಷಿಸಲು ಸಾಕಷ್ಟು ಅಭಿಮಾನಿಗಳು ಧಾವಿಸಿ ಬಂದಿದ್ದಾರೆ. ಚಿತ್ರಮಂದಿರ ಸಂಪೂರ್ಣವಾಗಿ ತೆರೆದಿರುವ ಕುರಿತು ಸಂತಸ ಹಂಚಿಕೊಂಡಿರುವ ಪ್ರೇಕ್ಷಕರು, ‘ಇಷ್ಟು ದಿನ ಈ ಸಂಭ್ರಮ ಮಿಸ್ ಮಾಡಿಕೊಳ್ಳುತ್ತಿದ್ದೆವು’ ಎಂದಿದ್ದಾರೆ. ಚಿತ್ರಮಂದಿರಗಳಲ್ಲಿ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದ್ದು, ಮಾಸ್ಕ್ ಧರಿಸಿದ್ದರೆ ಮಾತ್ರ ಥಿಯೇಟರ್ಗೆ ಪ್ರವೇಶ ನೀಡಲಾಗುತ್ತಿದೆ. ಚಿತ್ರಮಂದಿರಗಳು ಸ್ವಚ್ಛತೆಗೆ ಹೆಚ್ಚು ಒತ್ತನ್ನು ನೀಡಿವೆ.
ಮಾಗಡಿ ರಸ್ತೆಯಲ್ಲಿರುವ ವೀರೇಶ್ ಸಿನಿಮಾಸ್ನಲ್ಲಿಯೂ ಪ್ರೇಕ್ಷಕರು ಸಂಭ್ರಮದಿಂದ ಆಗಮಿಸುತ್ತಿರುವ ದೃಶ್ಯ ಕಂಡುಬಂದಿದೆ. ಪ್ರೇಕ್ಷಕರು ಟಿಕೆಟ್ ಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದು, ದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಸ್ಕ್ರೀನ್ – 1 ನಲ್ಲಿ ತೆಲುಗಿನ ‘ರಿಪಬ್ಲಿಕ್’ ಹಾಗೂ ಸ್ಕ್ರೀನ್- 2ನಲ್ಲಿ ಕನ್ನಡದ ‘ಕಾಗೆಮೊಟ್ಟೆ’ ಚಿತ್ರದ ಪ್ರದರ್ಶನ ನಡೆಯುತ್ತಿದೆ.
‘ಕಾಗೆ ಮೊಟ್ಟೆ’ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ಜೊತೆ ಕೆ. ಮಾದೇಶ್ ಹಾಗೂ ಹೇಮಂತ್ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ತನುಜಾ ಅವರು ಈ ಚಿತ್ರದ ನಾಯಕಿ. ಸಹ ನಿರ್ಮಾಪಕರಾಗಿ ಸುಬ್ಬರಾಯುಡು ಹಾಗೂ ಹೆಚ್.ಎನ್. ಶ್ರೀನಿವಾಸಯ್ಯ ಇವರ ಜೊತೆ ಕೈಜೋಡಿಸಿದ್ದಾರೆ. ಕೊಳ್ಳೇಗಾಲ, ಚಾಮರಾಜನಗರ ಅಲ್ಲದೆ ಬೆಂಗಳೂರಿನ ಹಲವಾರು ಸ್ಲಂಗಳಲ್ಲಿ ಚಿತ್ರದ ಶೂಟಿಂಗ್ ನಡೆಸಲಾಗಿದ್ದು, ಮೂವರು ಹುಡುಗರಿಗೆ ನಗರದಲ್ಲಿ ಬೆನ್ನೆಲುಬಾಗಿ ನಿಲ್ಲುವ ವೇಶ್ಯೆಯ ಪಾತ್ರವನ್ನು ನಟಿ ಸೌಜನ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿವೆ. ಶ್ರೀವತ್ಸ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಸಾಹಿತ್ಯ ರಚಿಸಿದ್ದಾರೆ. ನಟ ಜಗ್ಗೇಶ್ ಒಂದು ಹಾಡು ಬರೆದಿರುವುದು ಮಾತ್ರವಲ್ಲದೆ, ಅದಕ್ಕೆ ತಾವೇ ದನಿಯಾಗಿದ್ದಾರೆ. ಪಿ.ಎಲ್. ರವಿ ಛಾಯಾಗ್ರಹಣ ಮಾಡಿದ್ದಾರೆ.
ಅಕ್ಟೋಬರ್ನಲ್ಲಿ ಕನ್ನಡ ಸಿನಿಮಾಗಳ ಸುಗ್ಗಿ: ಸಾಲು ಸಾಲು ಹಬ್ಬಗಳ ನಡುವೆ ಕನ್ನಡ ಪ್ರೇಕ್ಷಕರಿಗೆ ಖ್ಯಾತ ತಾರೆಯರ ಬಹು ನಿರೀಕ್ಷಿತ ಚಿತ್ರಗಳೂ ಬಿಡುಗಡೆಯಾಗುತ್ತಿದ್ದು, ಸಂಭ್ರಮವನ್ನು ಹೆಚ್ಚಿಸಿವೆ. ಅಕ್ಟೋಬರ್ 14ರಂದು ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್ ನಿರ್ದೇಶನ, ನಟನೆಯ ‘ಸಲಗ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅಕ್ಟೋಬರ್ 29ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಈ ಚಿತ್ರಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಕೊರೊನಾದಿಂದ ಕಳೆಗುಂದಿದ್ದ ಗಾಂಧಿನಗರ ಮತ್ತೆ ಸಂಭ್ರಮದಿಂದ ಚೇತರಿಸಿಕೊಂಡಿರುವುದು ಸಿನಿ ಪ್ರೇಮಮಿಗಳ ಮೊಗದಲ್ಲಿ, ಚಿತ್ರತಂಡಗಳು ಮುಖದಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ:
Jaggesh: ಜಗ್ಗೇಶ್ ಪುತ್ರ ಗುರುರಾಜ್ ಹೇಳಲಿದ್ದಾರೆ ತಂದೆಗೆ ಆಕ್ಷನ್ ಕಟ್; ನವರಸ ನಾಯಕ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ
‘ಕರೀನಾಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತು ಸಲಹೆ ನೀಡುವುದಿಲ್ಲ’; ಅದೇ ದಾಂಪತ್ಯದ ಯಶಸ್ಸಿನ ಗುಟ್ಟು ಎಂದ ಸೈಫ್!
ನಾಗ ಚೈತನ್ಯ ಜತೆ ಸಾಯಿ ಪಲ್ಲವಿ ಲಿಪ್ ಲಾಕ್ ಮಾಡಿದ್ದು ನಿಜವೇ? ‘ಲವ್ ಸ್ಟೋರಿ’ ಹಿಂದಿನ ಸತ್ಯ ಬಾಯ್ಬಿಟ್ಟ ನಟಿ