ಸಿಹಿ ಸುದ್ದಿ: ಮಹಿಳೆಯರ ಎನ್ಡಿಎ ಪ್ರವೇಶ, ಶಾಶ್ವತ ಆಯೋಗಕ್ಕೆ ಕೇಂದ್ರದ ಒಪ್ಪಿಗೆ; ಸುಪ್ರೀಂಕೋರ್ಟ್ಗೆ ಮಾಹಿತಿ
Indian Army: ಮಹಿಳೆಯರನ್ನು ಸೇನೆಯಲ್ಲಿ ಶಾರ್ಟ್ ಸರ್ವೀಸ್ ಕಮಿಷನ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಲಿಂಗತಾರತಮ್ಯವನ್ನು ಹೋಗಲಾಡಿಸಬೇಕು ಎಂದು ಸುಪ್ರಿಂಕೋರ್ಟ್ ಹೇಳಿತ್ತು.

ಮಹಿಳೆಯರೂ ಸಹ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಪ್ರವೇಶ ಪಡೆಯಲು ಭಾರತೀಯ ಸೇನಾ ಪಡೆಯ ಮೂರೂ ವಿಭಾಗಗಳ (ಭೂ, ವಾಯು ಮತ್ತು ನೌಕಾಪಡೆ)ಮುಖ್ಯಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಅದರ ಪ್ರಕಾರ, ಇನ್ನುಮುಂದೆ ಮಹಿಳೆಯರು ಎನ್ಡಿಎ ಪ್ರವೇಶ ಮಾಡುವ ಜತೆ ಅವರಿಗಾಗಿ ಶಾಶ್ವತ ಆಯೋಗ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿದೆ. ಇದೊಂದು ಐತಿಹಾಸಿಕ ನಿರ್ಧಾರವಾಗಿದೆ. ಇಂದು ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೌಕಾದಳ ಅಕಾಡೆಮಿ (Naval Academy) ಮೂಲಕ ಸೇನೆಯಲ್ಲಿ ಯುವತಿಯರಿಗೂ ಶಾಶ್ವತ ಆಯೋಗ ನೀಡಲು ಕೇಂದ್ರ ಸರ್ಕಾರ ಮತ್ತು ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರು ಒಪ್ಪಿದ್ದಾರೆ. ಈ ನಿರ್ಧಾರವನ್ನು ನಿನ್ನೆ ರಾತ್ರಿ ತೆಗೆದುಕೊಳ್ಳಲಾಯಿತು ಎಂದು ಹೇಳಿದ್ದಾರೆ.
ಸೇನೆಯ ಮೂರು ಪಡೆಗಳಿಗಳಲ್ಲಿ ಮಹಿಳಾ ಸಿಬ್ಬಂದಿಗೆ ಶಾಶ್ವತ ಆಯೋಗ ನೀಡುವ ಸಂಬಂಧ ನೀತಿ ಮತ್ತು ಪ್ರಕ್ರಿಯೆ ರಚನೆ ಬಗ್ಗೆ ಕೆಲಸ ಮಾಡಲಾಗುತ್ತಿದೆ ಎಂದು ಐಶ್ವರ್ಯಾ ಭಾಟಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಕೆ.ಕೌಲ್, ‘ನಾವು ಈ ವಿಚಾರವಾಗಿ ಸುದೀರ್ಘ ಸಮಯದಿಂದಲೂ ನ್ಯಾಯವಿಚಾರಣೆ ಮಾಡುತ್ತಿದ್ದೇವೆ. ಲಿಂಗಸಮಾನತೆ ದೃಷ್ಟಿಯಿಂದ ಸೇನಾ ಪಡೆಗಳು ಮಹಿಳೆಯರಿಗೆ ಹೆಚ್ಚೆಚ್ಚು ಪ್ರಾಶಸ್ತ್ಯ ನೀಡುವ ಕೆಲಸ ಮಾಡಬೇಕು. ಕೊನೆಗೂ ಮಹಿಳೆಯರಿಗೆ ಎನ್ಡಿಎ ಪ್ರವೇಶ ಮತ್ತು ಶಾಶ್ವತ ಆಯೋಗಕ್ಕೆ ಅವಕಾಶ ನೀಡಿದ ಬಗ್ಗೆ ನಮಗೆ ತುಂಬ ಸಂತೋಷವಿದೆ’ ಎಂದು ತಿಳಿಸಿದ್ದಾರೆ.
ನಿರ್ದಿಷ್ಟ ಸಮಯ ಹೇಳಿ ಎಂದಿದ್ದ ಸುಪ್ರೀಂಕೋರ್ಟ್ ಮಹಿಳೆಯರನ್ನು ಸೇನೆಯಲ್ಲಿ ಶಾರ್ಟ್ ಸರ್ವೀಸ್ ಕಮಿಷನ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಲಿಂಗತಾರತಮ್ಯವನ್ನು ಹೋಗಲಾಡಿಸಬೇಕು. ಮಹಿಳೆಯರನ್ನೂ ಶಾಶ್ವತ ಆಯೋಗದಡಿಯೇ ನೇಮಕ ಮಾಡಬೇಕು ಎಂದು 2020ರಲ್ಲೇ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಅದರ ವಿಚಾರಣೆ ನಡೆಯುತ್ತಿತ್ತು..ಆಗಸ್ಟ್ 18ರಂದು ಮತ್ತೆ ಈ ವಿಚಾರ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಪುನರುಚ್ಚರಿಸಿತ್ತು. ಮಹಿಳೆಯರಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪ್ರವೇಶಕ್ಕೆ ಅವಕಾಶ ಕೊಟ್ಟು, ಶಾಶ್ವತ ಆಯೋಗ ನೀಡಲು ಇನ್ನೆಷ್ಟು ದಿನ ಬೇಕು? ನೀವೇ ನಮಗೆ ಹೇಳಿ ಕೇಂದ್ರ ಸರ್ಕಾರಕ್ಕೆ ಹೇಳಿತ್ತು.
ಇದನ್ನೂ ಓದಿ: ‘ನಿರ್ದೇಶಕರು ತಪ್ಪು ಮಾಡಿದರು ಎಂದು ನನಗನಿತು’; ‘ತಲೈವಿ’ ಬಗ್ಗೆ ಕಂಗನಾ ರಣಾವತ್ ಅಚ್ಚರಿಯ ಹೇಳಿಕೆ
Published On - 3:12 pm, Wed, 8 September 21




