ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಬೇರೆಡೆ ಗಮನ ಸೆಳೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದ ರಾಹುಲ್ ; ಬಿಜೆಪಿ ಟೀಕೆ

|

Updated on: Aug 20, 2024 | 7:50 PM

ರಾಹುಲ್ ಗಾಂಧಿ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಇಂಡಿ ಮೈತ್ರಿಕೂಟ ಮತ್ತು ಅದರ ಹಿರಿಯ ನಾಯಕರ ಮನಸ್ಥಿತಿ ಇಂದು ಎಷ್ಟರಮಟ್ಟಿಗೆ ಕುಸಿದಿದೆ ಎಂದರೆ ಅವರಿಗೆ ನಾಡಿನ ಮಗಳ ಬದುಕು ಕೇವಲ ‘ಬೇರೆಡೆ ಗಮನ ಸೆಳೆಯುವುದು’ ಆಗಿದೆ. ವಿರೋಧ ಪಕ್ಷದ ನಾಯಕರ ಈ ಹೇಳಿಕೆ ಅತ್ಯಂತ ಖಂಡನೀಯ ಮತ್ತು ಮಹಿಳಾ ವಿರೋಧಿಯಾಗಿದೆ ಎಂದು ಎಕ್ಸ್​​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಬೇರೆಡೆ ಗಮನ ಸೆಳೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದ ರಾಹುಲ್ ; ಬಿಜೆಪಿ ಟೀಕೆ
ರಾಹುಲ್ ಗಾಂಧಿ
Follow us on

ದೆಹಲಿ ಆಗಸ್ಟ್ 20: ಕೋಲ್ಕತ್ತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Kolkata Rape-Murder Case) ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ ಉತ್ತರವನ್ನು ಬಿಜೆಪಿ (BJP) ಟೀಕಿಸಿದೆ. ರಾಹುಲ್ ಗಾಂಧಿಯವರು ತಮ್ಮ ಲೋಕಸಭಾ ಕ್ಷೇತ್ರವಾದ ರಾಯ್​​ಬರೇಲಿಯಲ್ಲಿ ಗುಂಡೇಟಿಗೆ ಬಲಿಯಾದ ದಲಿತ ಯುವಕನ ಕುಟುಂಬವನ್ನು ಭೇಟಿಯಾಗಲು ಮಂಗಳವಾರ ಪಿಚ್ವಾರಿಯಾಗೆ ಬಂದಿದ್ದರು. ಈ ವೇಳೆ ಮಾಧ್ಯಮವರು ರಾಹುಲ್ ಗಾಂಧಿಯಲ್ಲಿ ಕೊಲ್ಕತ್ತಾ ಪ್ರಕರಣ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, “ಸಂತ್ರಸ್ತರ (ದಲಿತ ಯುವಕ) ಕುಟುಂಬವನ್ನು ಬೆಂಬಲಿಸಲು ನಾನು ಇಲ್ಲಿಗೆ (ರಾಯ್​​ಬರೇಲಿ) ಬಂದಿದ್ದೇನೆ. ಈ ವಿಷಯದಿಂದ ಬೇರೆಡೆ ಗಮನ ಸೆಳೆಯಲು ನಾನು ಬಿಡುವುದಿಲ್ಲ. ಕೋಲ್ಕತ್ತಾ ವೈದ್ಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ನಾನು ನಂತರ ಮಾತನಾಡುತ್ತೇನೆ ಎಂದು ಕಾಂಗ್ರೆಸ್ ಸಂಸದ ಹೇಳಿದ್ದಾರೆ.

ಬಿಜೆಪಿ ಟೀಕೆ

ರಾಹುಲ್ ಗಾಂಧಿಯವರ ಈ ಪ್ರತಿಕ್ರಿಯೆಯನ್ನು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಇಂಡಿ ಮೈತ್ರಿಕೂಟ ಮತ್ತು ಅದರ ಹಿರಿಯ ನಾಯಕರ ಮನಸ್ಥಿತಿ ಇಂದು ಎಷ್ಟರಮಟ್ಟಿಗೆ ಕುಸಿದಿದೆ ಎಂದರೆ ಅವರಿಗೆ ನಾಡಿನ ಮಗಳ ಬದುಕು ಕೇವಲ ‘ಬೇರೆಡೆ ಗಮನ ಸೆಳೆಯುವುದು’ ಆಗಿದೆ. ವಿರೋಧ ಪಕ್ಷದ ನಾಯಕರ ಈ ಹೇಳಿಕೆ ಅತ್ಯಂತ ಖಂಡನೀಯ ಮತ್ತು ಮಹಿಳಾ ವಿರೋಧಿಯಾಗಿದೆ.


ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರಾವಧಿಯಲ್ಲಿ ವರ್ಷಗಳಿಂದ ನಡೆಯುತ್ತಿರುವ ಮಹಿಳಾ ದೌರ್ಜನ್ಯದ ಚಿತ್ರಣ ಇಡೀ ದೇಶದ ಮುಂದಿದೆ. ಎಲ್ಲೆಲ್ಲಿ ಇಂಡಿ ಸಮ್ಮಿಶ್ರ ಸರ್ಕಾರವಿದೆಯೋ ಅಲ್ಲಿ ಮಹಿಳೆಯರ ಗೌರವ, ಘನತೆ ಮತ್ತು ಜೀವಕ್ಕೆ ಅಪಾಯವಿದೆ ಎಂದು ಇತ್ತೀಚಿಗೆ ಕೋಲ್ಕತ್ತಾದಲ್ಲಿ ನಡೆದ ಘಟನೆಯಿಂದ ಸ್ಪಷ್ಟವಾಗುತ್ತದೆ. ‘ಮೊಹಬ್ಬತ್ ಕಿ ದುಕಾನ್’ನಲ್ಲಿ ‘ಭಯ ಮತ್ತು ಹಿಂಸೆ’ಯ ವಸ್ತುಗಳನ್ನು ಮಾರುವವರನ್ನು ಸಾರ್ವಜನಿಕರು ಎಂದಿಗೂ ಕ್ಷಮಿಸುವುದಿಲ್ಲ. ಇಂದು ಇಡೀ ದೇಶವೇ ಸಂತ್ರಸ್ತ ಕುಟುಂಬದೊಂದಿಗೆ ನಿಂತಿದೆ ಎಂದಿದ್ದಾರೆ.

‘ಊಹೆಗೂ ನಿಲುಕದ ಆಘಾತ’: ಪೂನಾವಾಲಾ

ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಗಾಂಧಿಯವರ ಹೇಳಿಕೆಯನ್ನು “ಆಘಾತಕಾರಿ” ಎಂದು ಕರೆದಿದ್ದಾರೆ. ಆರ್ ಜಿ ಕರ್ ಮೆಡಿಕಲ್ ಕಾಲೇಜ್ ಪ್ರಕರಣದ ಬಗ್ಗೆ ಕೇಳಿದಾಗ ರಾಹುಲ್ ಗಾಂಧಿ ಹೇಳಿರುವುದು ಊಹೆಗೂ ನಿಲುಕದ ಸಂಗತಿ.ಸುಪ್ರೀಂಕೋರ್ಟ್ ಬೇರೆಡೆ ಗಮನ ಸೆಳೆಯುವುದರಲ್ಲಿ ತೊಡಗಿದೆಯೇ? ಇದನ್ನು ಬೇರೆಡೆಗದೆ ಗಮನ ಸೆಳೆಯುವುದು ಎಂದು ಕರೆಯಲು ಅವರಿಗೆ ಧೈರ್ಯವಾದರೂ ಹೇಗೆ ಬಂತು ಎಂದು ಪೂನಾವಾಲಾ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ: ಡಿಜಿಟಲೀಕರಣ, ಸೆಮಿಕಂಡಕ್ಟರ್‌, AI ನಲ್ಲಿ ಸಹಕಾರವನ್ನು ವಿಸ್ತರಿಸಲಿದೆ ಭಾರತ-ಮಲೇಷ್ಯಾ

“ಅದೇ ರಾಹುಲ್ ಗಾಂಧಿ, ಯುಪಿ, ಮಧ್ಯಪ್ರದೇಶದ ವಿಷಯ ಆಗಿದ್ದರೆ ಅವರು ಅಲ್ಲಿಗೆ ಹೋಗುತ್ತಾರೆ. ಆದರೆ  ಸಂವಿಧಾನವನ್ನು ಉಳಿಸುವುದು ಮುಖ್ಯವಾದ ಬಂಗಾಳಕ್ಕೆ ಅವರು ಹೋಗುವುದಿಲ್ಲ. ಅವರು ಇಂಡಿಯಾ ಮೈತ್ರಿಕೂಟದ ಪಾಲುದಾರರಾಗಿರುವ ಟಿಎಂಸಿ ಬಗ್ಗೆ ಒಂದು ಮಾತೂ ಮಾತನಾಡುವುದಿಲ್ಲ. ಇದು ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಿಗೆ ಮಾತ್ರವಲ್ಲದೇ ಕುಟುಂಬಕ್ಕೆ ಮತ್ತು ಸಂತ್ರಸ್ತರಿಗೆ ಮಾಡಿದ ಅವಮಾನ. ಅವರು ಕ್ಷಮೆಯಾಚಿಸಬೇಕು,” ಎಂದು ಹೇಳಿದ್ದಾರೆ.

ಆಗಸ್ಟ್ 9 ರಂದು, ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯದಲ್ಲಿದ್ದ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಯಿತು. ಪ್ರಕರಣ ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದುಬರುತ್ತಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ