‘ಭಾರತ ವಿರೋಧಿ ಚಟುವಟಿಕೆಗೆ ನಮ್ಮ ಭೂಮಿ ಬಳಸಲು ಬಿಡುವುದಿಲ್ಲ’; ರಾಜನಾಥ್​ ಸಿಂಗ್​ಗೆ ಶ್ರೀಲಂಕಾ ಅಧ್ಯಕ್ಷ ಭರವಸೆ

ಕಳೆದ 38 ವರ್ಷಗಳಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ ಭಾರತದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಪಾತ್ರರಾಗಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರೊಂದಿಗೆ ರಾಜನಾಥ್ ಸಿಂಗ್ ಸಭೆ ನಡೆಸಿದ್ದಾರೆ. ಭಾರತ ಮತ್ತು ಶ್ರೀಲಂಕಾ ದೇಶಗಳು ಸುರಕ್ಷಿತ ಸಮುದ್ರ ಮಾರ್ಗಗಳು, ಮುಕ್ತ ನೌಕಾಯಾನ, ಅಂತಾರಾಷ್ಟ್ರೀಯ ಕಾನೂನುಗಳಿಗೆ ಗೌರವ ಹಾಗೂ ಅಡೆತಡೆಯಿಲ್ಲದ ಸಾಗರ ವ್ಯಾಪಾರಕ್ಕೆ ತಮ್ಮ ಮೊದಲ ಆದ್ಯತೆ ನೀಡಬೇಕು ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ.

ಭಾರತ ವಿರೋಧಿ ಚಟುವಟಿಕೆಗೆ ನಮ್ಮ ಭೂಮಿ ಬಳಸಲು ಬಿಡುವುದಿಲ್ಲ; ರಾಜನಾಥ್​ ಸಿಂಗ್​ಗೆ ಶ್ರೀಲಂಕಾ ಅಧ್ಯಕ್ಷ ಭರವಸೆ
ರಾಜನಾಥ್ ಸಿಂಗ್-ಶ್ರೀಲಂಕಾ ಅಧ್ಯಕ್ಷ
Image Credit source: PTI

Updated on: Sep 09, 2026 | 5:48 PM

ಕೊಲಂಬೋ, ಸೆಪ್ಟೆಂಬರ್ 9: ಶ್ರೀಲಂಕಾದ ಮಣ್ಣನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಎಂದಿಗೂ ಬಳಸಲು ಬಿಡುವುದಿಲ್ಲ ಎಂದು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸ್ಪಷ್ಟ ಭರವಸೆ ನೀಡಿದ್ದಾರೆ. ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಬಲಪಡಿಸುವ ಭಾಗವಾಗಿ ಎರಡೂ ದೇಶಗಳು ಪ್ರಮುಖ 3 ಒಪ್ಪಂದಗಳಿಗೆ ಸಹಿ ಹಾಕಿವೆ.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರನ್ನು ಭೇಟಿಯಾಗಿ, ಪ್ರಾದೇಶಿಕ ಸುರಕ್ಷತೆ, ಭದ್ರತೆ, ಶಾಂತಿ ಮತ್ತು ಸಮೃದ್ಧಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಉಭಯ ದೇಶಗಳ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದರು. 3 ದಿನಗಳ ಭೇಟಿಗಾಗಿ ಮಂಗಳವಾರ ಶ್ರೀಲಂಕಾಕ್ಕೆ ಆಗಮಿಸಿರುವ ರಾಜನಾಥ್ ಸಿಂಗ್, ಕಳೆದ 38 ವರ್ಷಗಳಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ ಭಾರತದ ಮೊದಲ ರಕ್ಷಣಾ ಸಚಿವ ಎನಿಸಿಕೊಂಡಿದ್ದಾರೆ.


ಇದನ್ನೂ ಓದಿ: ಭಾರತದ ಭಯೋತ್ಪಾದನಾ ವಿರೋಧಿ ಹೋರಾಟವನ್ನು ಬೆಂಬಲಿಸಿದ್ದಕ್ಕೆ ಸಿಂಗಾಪುರ ಪ್ರಧಾನಿಗೆ ಮೋದಿ ಧನ್ಯವಾದ

ಶ್ರೀಲಂಕಾ ಸರ್ಕಾರವು ಯಶಸ್ವಿಯಾಗಿ ೨ ವರ್ಷಗಳ ಆಡಳಿತ ಪೂರ್ಣಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ರಾಜನಾಥ್ ಸಿಂಗ್ ಅಧ್ಯಕ್ಷ ದಿಸ್ಸಾನಾಯಕೆ ಅವರಿಗೆ ಶುಭಾಶಯ ಕೋರಿದರು. ಭಾರತ ಮತ್ತು ಶ್ರೀಲಂಕಾ ನಾಗರಿಕ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಅವರು ಈ ವೇಳೆ ಸ್ಮರಿಸಿದರು.


ಸಾಗರ ಭದ್ರತೆ ಮತ್ತು ಕಾರ್ಯತಂತ್ರ:

ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾ ಅತ್ಯಂತ ಆಯಕಟ್ಟಿನ ಮಿಲಿಟರಿ ಹಾಗೂ ರಾಜತಾಂತ್ರಿಕ ಸ್ಥಾನದಲ್ಲಿದೆ. ಬೆಳೆಯುತ್ತಿರುವ ಸಾಗರ ಸವಾಲುಗಳು ಭದ್ರತೆಗೆ ಬೆದರಿಕೆಯಾಗುವ ಮುನ್ನವೇ ಉಭಯ ದೇಶಗಳು ಜಂಟಿಯಾಗಿ ಅವುಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಬಂದರು ಮತ್ತು ಸಾಗರ ಉದ್ಯಮಗಳು ಹಂಚಿಕೆಯ ಆರ್ಥಿಕ ಬೆಳವಣಿಗೆಯ ಇಂಜಿನ್‌ಗಳಾಗಬೇಕು ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.


ಮೀನುಗಾರರ ಸಮಸ್ಯೆ ಪರಿಹಾರ:

ಭಾರತ ಮತ್ತು ಶ್ರೀಲಂಕಾ ಮೀನುಗಾರರ ಸಮಸ್ಯೆಯನ್ನು ಜೀವನಾಧಾರದ ವಿಷಯವಾಗಿ ಮಾನವೀಯತೆಯಿಂದ ಪರಿಗಣಿಸಬೇಕು. ಕಾನೂನು ಬದ್ಧ ಜಾರಿ ಮತ್ತು ಪಾಲನೆಯ ಜೊತೆಗೆ, ಭೌಗೋಳಿಕ ಗಡಿಗಳನ್ನು ಗಮನದಲ್ಲಿಟ್ಟುಕೊಂಡು ಪರಸ್ಪರ ಪ್ರಯೋಜನಕಾರಿ ರೀತಿಯಲ್ಲಿ ಈ ವಿವಾದವನ್ನು ಬಗೆಹರಿಸಿಕೊಳ್ಳಲು ಜಂಟಿ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಅಕ್ರಮ ಮೀನುಗಾರಿಕೆ, ಅನುಮಾನಾಸ್ಪದ ಹಡಗುಗಳ ಸಂಚಾರ, ಮಾದಕ ದ್ರವ್ಯ ಕಳ್ಳಸಾಗಣೆ, ಭಯೋತ್ಪಾದನೆ ಮತ್ತು ಇತರ ಭದ್ರತಾ ಬೆದರಿಕೆಗಳನ್ನು ತಡೆಯಲು ಉಭಯ ದೇಶಗಳ ನೌಕಾಪಡೆ, ಕೋಸ್ಟ್ ಗಾರ್ಡ್ ಹಾಗೂ ತನಿಖಾ ಸಂಸ್ಥೆಗಳ ನಡುವೆ ಸಾಂಸ್ಥಿಕ ಸಹಕಾರ ಬೇಕು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

 

ಇದನ್ನೂ ಓದಿ: ನೋ ಚಾನ್ಸ್.. ಯಾವ ಕಾರಣಕ್ಕೂ ನಿಮಗೆ ಸಿಂಧೂ ನದಿ ನೀರು ಬಿಡಲ್ಲ: ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ

ಈ ವೇಳೆ ಭಾರತೀಯ ರಕ್ಷಣಾ ಪಡೆಗಳು ನಿರ್ಮಿಸಿರುವ 3 ಬೈಲಿ ಸೇತುವೆಗಳನ್ನು ರಾಜನಾಥ್ ಸಿಂಗ್ ಮತ್ತು ಶ್ರೀಲಂಕಾ ಅಧ್ಯಕ್ಷ ದಿಸ್ಸಾನಾಯಕೆ ವರ್ಚುವಲ್ ಆಗಿ ಉದ್ಘಾಟಿಸಿದರು. ಶ್ರೀಲಂಕಾ ವಾಯುಪಡೆಯ 6 L70 ವಾಯು ರಕ್ಷಣಾ ಗನ್‌ಗಳನ್ನು ಭಾರತ ಸರ್ಕಾರದ ಅನುದಾನದಡಿ ಆಧುನೀಕರಿಸಲು ಒಪ್ಪಂದ ಮಾಡಿಕೊಳ್ಳಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us