ಚಂಡಮಾರುತದಿಂದ ತತ್ತರಿಸಿದ ಜನರೊಂದಿಗೆ ಭಾರತ ಸದಾ ಇರಲಿದೆ; ಶ್ರೀಲಂಕಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಭರವಸೆ
ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತವು ಅಪಾರ ಹಾನಿಯನ್ನುಂಟುಮಾಡಿದೆ. 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1.5 ಲಕ್ಷ ಜನರು ಶಿಬಿರಗಳಲ್ಲಿದ್ದಾರೆ. ಈ ವಿಪತ್ತಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಅಧ್ಯಕ್ಷ ದಿಸಾನಾಯಕೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು. ನಡೆಯುತ್ತಿರುವ ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಸಂತ್ರಸ್ತರಿಗೆ ನಿರಂತರ ಸಹಾಯವನ್ನು ಒದಗಿಸಲಾಗುವುದು ಎಂದರು.

ನವದೆಹಲಿ, ಡಿಸೆಂಬರ್ 1: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ, ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದ ಉಂಟಾದ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ. ಶ್ರೀಲಂಕಾದೊಂದಿಗೆ ಭಾರತ ದೃಢವಾಗಿ ನಿಲ್ಲುತ್ತದೆ, ಅಗತ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತದೆ ಎಂದು ಪ್ರಧಾನಿ ಮೋದಿ ಶ್ರೀಲಂಕಾ ಅಧ್ಯಕ್ಷ ದಿಸಾನಾಯಕೆ ಅವರಿಗೆ ಭರವಸೆ ನೀಡಿದ್ದಾರೆ.
ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತವು ಅಪಾರ ಹಾನಿಯನ್ನುಂಟುಮಾಡಿದೆ. 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಕಾಣೆಯಾಗಿದ್ದಾರೆ. ದೇಶಾದ್ಯಂತ ಲಕ್ಷಾಂತರ ಜನರು ತೊಂದರೆಗೊಳಗಾಗಿರುವುದರಿಂದ ಶ್ರೀಲಂಕಾ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಸುಮಾರು 1.5 ಲಕ್ಷ ಜನರನ್ನು ತಾತ್ಕಾಲಿಕ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಶ್ರೀಲಂಕಾದಲ್ಲಿ ಚಂಡಮಾರುತದಿಂದ ಉಂಟಾದ ಜೀವಹಾನಿ ಮತ್ತು ವ್ಯಾಪಕ ವಿನಾಶದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದ 123 ಜನ ಸಾವು; ತುರ್ತು ಪರಿಸ್ಥಿತಿ ಘೋಷಣೆ
ಶ್ರೀಲಂಕಾಕ್ಕೆ ರಕ್ಷಣಾ ತಂಡಗಳನ್ನು ತ್ವರಿತವಾಗಿ ನಿಯೋಜಿಸಲು ಮತ್ತು ಪರಿಹಾರ ಸಾಮಗ್ರಿಗಳನ್ನು ಒದಗಿಸುವ ಭಾರತದ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಲಂಕಾ ಅಧ್ಯಕ್ಷರು ಧನ್ಯವಾದ ಅರ್ಪಿಸಿದ್ದಾರೆ. ಭಾರತದ ಸಕಾಲಿಕ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ಪ್ರಯತ್ನಗಳಿಗೆ ಶ್ರೀಲಂಕಾದ ಜನರ ಮೆಚ್ಚುಗೆಯನ್ನು ಅವರು ತಿಳಿಸಿದ್ದಾರೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.
Spoke with President Dissanayake and conveyed heartfelt condolences on the tragic loss of lives and the widespread devastation caused by Cyclone Ditwah. As a close and trusted friend, India stands firmly beside Sri Lanka and its people in this difficult hour.
India will continue…
— Narendra Modi (@narendramodi) December 1, 2025
“ಪ್ರಸ್ತುತ ನಡೆಯುತ್ತಿರುವ ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಶ್ರೀಲಂಕಾಕ್ಕೆ ಭಾರತದ ನಿರಂತರ ಬೆಂಬಲದ ಬಗ್ಗೆ ಪ್ರಧಾನಿ ಅಧ್ಯಕ್ಷ ದಿಸಾನಾಯಕೆ ಅವರಿಗೆ ಭರವಸೆ ನೀಡಿದರು” ಎಂದು ಪಿಎಂಒ ಹೇಳಿದೆ. ಚಂಡಮಾರುತದ ಪರಿಣಾಮ ಹಾಗೂ ಸದ್ಯದ ಸ್ಥಿತಿಯ ಬಗ್ಗೆ ತಿಳಿಯಲು ಇಬ್ಬರೂ ನಾಯಕರು ನಿಕಟ ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಿ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಚಂಡಮಾರುತ ಪೀಡಿತ ಶ್ರೀಲಂಕಾಕ್ಕೆ ಆಪರೇಷನ್ ಸಾಗರ್ ಬಂಧು ಅಡಿ ಭಾರತದಿಂದ ಸಹಾಯಹಸ್ತ
ಶ್ರೀಲಂಕಾವು ದಿತ್ವಾ ಚಂಡಮಾರುತದಿಂದ ತತ್ತರಿಸಲ್ಪಟ್ಟಿದ್ದು, ಇದು ಶ್ರೀಲಂಕಾದ 360ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಶ್ರೀಲಂಕಾ ಸರ್ಕಾರದ ಪ್ರಕಾರ, ಕ್ಯಾಂಡಿ ಜಿಲ್ಲೆ ಅತ್ಯಂತ ಹಾನಿಗೊಳಗಾಗಿದ್ದು ಅಲ್ಲಿ ಇದುವರೆಗೆ 88 ಸಾವುಗಳು ವರದಿಯಾಗಿವೆ. ಚಂಡಮಾರುತದಿಂದ ತತ್ತರಿಸಿದ್ದ ಶ್ರೀಲಂಕಾಕ್ಕೆ ಭಾರತ ನೆರವಿಗೆ ನಿಂತು ಆಪರೇಷನ್ ಸಾಗರ್ ಬಂಧುವನ್ನು ಪ್ರಾರಂಭಿಸಿತು. ಅದರ ಮೂಲಕ ಈಗಾಗಲೇ ಶ್ರೀಲಂಕಾಕ್ಕೆ ಪರಿಹಾರ ಸಾಮಗ್ರಿಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




