ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ (PM Narendra Modi), ಅವರ ಸಚಿವ ಸಂಪುಟ ಸಹೋದ್ಯೋಗಿಗಳು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕರು ಇಂದು ಹೈದರಾಬಾದ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿ (BJP National Executive meeting) ಸಭೆಯಲ್ಲಿ ತೆಲಂಗಾಣದ ದೇಸೀ ಖಾದ್ಯಗಳನ್ನು (Telangana Dishes) ಸವಿಯಲಿದ್ದಾರೆ. ಈ ಖಾದ್ಯಗಳನ್ನು ತೆಲಂಗಾಣದ ಕರೀಂನಗರ ಜಿಲ್ಲೆ ಹುಸ್ನಾಬಾದ್ ಕ್ಷೇತ್ರದ ಗೌರವೆಲ್ಲಿ ಗುದಾಟಿಪಲ್ಲೆಯ ಯಾದಮ್ಮ ತಯಾರಿಸಲಿದ್ದಾರೆ. ಊಟ ಮಾತ್ರವಲ್ಲ ಕುರುಕಲು ತಿನಿಸು ಮತ್ತು ಸಿಹಿ ತಿಂಡಿಗಳನ್ನೂ ತೆಲಂಗಾಣದ ದೇಸಿ ಶೈಲಿಯಲ್ಲಿಯೇ ಸಿದ್ಧಪಡಿಸಲಾಗುತ್ತಿದೆ.
ಭಾನುವಾರದ ಸಮಾರಂಭದಲ್ಲಿ ತಿನಿಸುಗಳ ಪಟ್ಟಿಯಲ್ಲಿ 50 ಖಾದ್ಯಗಳಿವೆ. ಇದರಲ್ಲಿ ವಿವಿಧ ಕರಿ, ಟೊಮೆಟೊ ಸಾರು, ಆಲು ಕುರ್ಮಾ, ಬದನೆ ಮಸಾಲಾ, ದೊಂಡಕಾಯ ಸಾದೊಬ್ಬರಿ ಟುರುಮು ಫ್ರೈ, ಒಕ್ರಾ ಕಾಜು ಪಲ್ಲಿಲ ಫ್ರೈ, ಟೊಮೆಟೊ ಫ್ರೈ, ಬೇರಕಾಯ ಚೂರ ಫ್ರೈ, ಮಾವಿನ ದಾಲ್, ಪುದೀನಾ ಬಾತ್, ಪುಳಿಯೋಗರೆ, ಮೊಸರನ್ನ, ಗೊಂಗೂರು ಪಚಡಿ, ಸೌತೆಕಾಯಿ ಚಟ್ನಿ, ಟೊಮೆಟೊ ಚಟ್ನಿ ಸೇರಿದಂತೆ ಹಲವು ಖಾದ್ಯಗಳು ಮೆನುವಿನಲ್ಲಿವೆ. ಬೆಲ್ಲದ ಪರಮಾನ್ನ, ಶ್ಯಾವಿಗೆ ಪಾಯಸ, ಶಾಲ್ಯನ್ನ ಸೇರಿದಂತೆ ವಿವಿಧ ಸಿಹಿ ತಿನಿಸುಗಳು ಇವೆ. ಕುರುಕಲು ತಿಂಡಿಗಳಾಗಿ ಪಿಸರಪ್ಪು ಗಾರಲು, ಸಕಿನಾ, ಮಕ್ಕ ಗುಡಾ, ಸರ್ವ ಪಿಂಡಿ, ಕೊಬ್ಬರಿ ಚಟ್ನಿ ಸೇರಿದಂತೆ ಹಲವು ತಿಂಡಿಗಳಿವೆ.
‘ನನಗೆ ಇಂಥ ಗೌರವ ಸಿಗುತ್ತದೆ ಎಂದು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ಬಿಜೆಪಿ ತೆಲಂಗಾಣ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಅವರು ನನಗೆ ಪರಿಚಯವಿದ್ದರು. ಆದರೆ ಪ್ರಧಾನಿಗೆ ಅಡುಗೆ ಮಾಡುವಂಥ ಸೌಭಾಗ್ಯ ತಂದುಕೊಡುತ್ತಾರೆ ಎಂದುಕೊಂಡಿರಲಿಲ್ಲ’ ಎಂದು ಯಾದಮ್ಮ ಯೇಳಿದರು.
‘ಯಾದಮ್ಮ ಅವರನ್ನು ನಾವು ಒಮ್ಮೆ ದೆಹಲಿಗೆ ಕರೆದೊಯ್ಯಬೇಕು ಎಂದುಕೊಂಡಿದ್ದೇವೆ. ತೆಲಂಗಾಣದ ಅಡುಗೆಯನ್ನು ಎಲ್ಲರಿಗೂ ಪರಿಚಯಿಸಬೇಕು’ ಎನ್ನುವ ಆಸೆಯಿದೆ ಎಂದು ಬಂಡಿ ಸಂಜಯ್ ಹೇಳಿದ್ದರು.
ಕಾರ್ಯಾಕಾರಿಣಿ ಸಭೆ ಆರಂಭಗೊಳ್ಳುವುದಕ್ಕೆ ಕೆಲ ದಿನಗಳು ಮೊದಲು ಯಾದಮ್ಮ ಅವರು ಫೈವ್ಸ್ಟಾರ್ ಹೊಟೆಲ್ಗೆ ಭೇಟಿ ನೀಡಿ, ಅಲ್ಲಿನ ಬಾಣಸಿಗರೊಂದಿಗೆ ಸಂವಾದ ನಡೆಸಿದ್ದರು. ಅವರು ತಯಾರಿಸಿದ ಅಡುಗೆಯ ರುಚಿ ನೋಡಿ, ಸುಧಾರಣೆಗೆ ಸಲಹೆಗಳನ್ನು ನೀಡಿದ್ದರು.
ಕರೀಂನಗರ ಸೇರಿದಂತೆ ತೆಲಂಗಾಣದ ಹಲವೆಡೆ ಅಡುಗೆ ಯಾದಮ್ಮ ಉತ್ತಮ ಹೆಸರು ಪಡೆದಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಆಯೋಜಿಸಿದ್ದ ಹಲವು ಕಾರ್ಯಕ್ರಮಗಳಿಗೆ ಈ ಹಿಂದೆಯೂ ಯಾದಮ್ಮ ಅಡುಗೆ ಮಾಡಿದ್ದರು. ಅವರ ಅಡುಗೆಗೆಂದೇ ಜನಸೇರುವ ಮಟ್ಟಿಗೆ ಯಾದಮ್ಮ ಹೆಸರು ಮಾಡಿದ್ದಾರೆ.