Modi Cabinet: ನಿಮ್ಮ ಕೆಲಸಗಳು ಎದ್ದು ಕಾಣಬೇಕೇ ವಿನಃ ನೀವಲ್ಲ; ಹೊಸ ಸಚಿವರಿಗೆ ಮೋದಿ ಪಾಠ
ಯಾರೂ ಕೂಡಾ ಮಾಧ್ಯಮಗಳ ಮುಂದೆ ಅನಾವಶ್ಯಕ ಹೇಳಿಕೆ ನೀಡುವುದು, ಗೊಂದಲ ಸೃಷ್ಟಿಸುವುದು ಮಾಡಬಾರದು ಅದರ ಬದಲು ಕೆಲಸ ಮಾಡುವುದರಲ್ಲಿ ತಲ್ಲೀನರಾಗಿ ಶ್ರಮವನ್ನು ಅಲ್ಲಿ ವ್ಯಯಿಸಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ದೆಹಲಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಒಂದಷ್ಟು ಜನರನ್ನು ಕೈಬಿಟ್ಟು, ಹೊಸಬರಿಗೆ ಮಣೆ ಹಾಕಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹೊಸ ಮುಖಗಳೊಂದಿಗೆ ಸಭೆ ನಡೆಸಿ ಅವರು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ಸಲಹೆ ನೀಡಿದ್ದಾರೆ. ನೂತನ ಸಚಿವ ಸಂಪುಟದೊಂದಿಗಿನ ಮೊದಲ ಸಭೆಯಲ್ಲೇ ಸಚಿವರಿಗೆ ಪಾಠ ಮಾಡಿರುವ ಮೋದಿ, ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹೆಚ್ಚು ಶ್ರಮ ಹಾಕಿ. ಒಟ್ಟಾರೆಯಾಗಿ ನೋಡಿದಾಗ ನಿಮ್ಮ ಕೆಲಸಗಳು ಎದ್ದು ಕಾಣಬೇಕೇ ವಿನಃ ನೀವಲ್ಲ ಎಂದು ಕಿವಿಮಾತು ಹೇಳಿರುವುದಾಗಿ ಉನ್ನತ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ.
ಈ ಬಗ್ಗೆ ಇಂಡಿಯಾ ಟುಡೆ ಸುದ್ದಿತಾಣದಲ್ಲಿ ವರದಿ ಪ್ರಕಟಿಸಲಾಗಿದ್ದು, ಮೋದಿ ತಮ್ಮ ಸಂಪುಟ ಸಚಿವರಿಗೆ ಸಾಕಷ್ಟು ವಿಚಾರಗಳಿಗೆ ಸಂಬಂಧಿಸಿದಂತೆ ಸಲಹೆ ನೀಡಿದ್ದಾರೆ. ಯಾರೂ ಕೂಡಾ ಮಾಧ್ಯಮಗಳ ಮುಂದೆ ಅನಾವಶ್ಯಕ ಹೇಳಿಕೆ ನೀಡುವುದು, ಗೊಂದಲ ಸೃಷ್ಟಿಸುವುದು ಮಾಡಬಾರದು ಅದರ ಬದಲು ಕೆಲಸ ಮಾಡುವುದರಲ್ಲಿ ತಲ್ಲೀನರಾಗಿ ಶ್ರಮವನ್ನು ಅಲ್ಲಿ ವ್ಯಯಿಸಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಆರೋಗ್ಯ ಸಚಿವ ಸ್ಥಾನದಲ್ಲಿದ್ದ ಡಾ.ಹರ್ಷವರ್ಧನ್, ಶಿಕ್ಷಣ ಸಚಿವರಾಗಿದ್ದ ರಮೇಶ್ ಪೋಖ್ರಿಯಾಲ್ ನಿಶಾಂಕ್, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದ ಡಿ.ವಿ.ಸದಾನಂದಗೌಡ, ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವರಾಗಿದ್ದ ರವಿಶಂಕರ್ ಪ್ರಸಾದ್ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಜನ ರಾಜೀನಾಮೆ ನೀಡಿದ್ದು, ಅವರ ಜಾಗಕ್ಕೆ ಅಚ್ಚರಿ ಆಯ್ಕೆ ಮೂಲಕ ಹೊಸಬರನ್ನು ಕರೆತರಲಾಗಿದೆ.
ಅದಕ್ಷತೆ, ಅಸಮರ್ಥತೆ, ಅನಾರೋಗ್ಯ ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ಹಲವರನ್ನು ಕೈಬಿಟ್ಟಿರುವ ಮೋದಿ, ಹೊಸದಾಗಿ ಅಧಿಕಾರ ಸ್ವೀಕರಿಸಿದ ಸಚಿವರಿಗೆ ಅವರ ಕಾರ್ಯ ವೈಖರಿ ಹೇಗಿರಬೇಕೆಂದು ಆರಂಭದಲ್ಲೇ ಕಿವಿಮಾತು ಹೇಳಿದ್ದಾರೆ. ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಜಬೇಕು, ಬೆಳಗ್ಗೆ 9.30ಕ್ಕೆ ಸರಿಯಾಗಿ ಎಲ್ಲರೂ ಕಚೇರಿಯಲ್ಲಿರಬೇಕು ಎಂದು ಸಚಿವರಿಗೆ ತಿಳಿಸಿದ್ದು, ಕೆಲಸದಲ್ಲಿ ಲೋಪ ದೋಷಗಳು ಕಾಣದಂತೆ ನಿಗಾ ವಹಿಸಲು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇನ್ನು ಇದೇವೇಳೆ ಕೊರೊನಾ ಬಗ್ಗೆ ಮಾತನಾಡಿರುವ ಮೋದಿ, ಜನರು ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸಿ ಮೈಮರೆತು ಓಡಾಡುತ್ತಿರುವುದು ಆತಂಕಕಾರಿ. ಕೊರೊನಾ ಅಪಾಯ ಇನ್ನೂ ಮುಗಿದಿಲ್ಲ, ಅದರ ಅಂತ್ಯ ಬಹಳ ದೂರದಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಸಚಿವರು ಈ ಬಗ್ಗೆ ತುಸು ಜಾಗ್ರತೆ ವಹಿಸಿ ಜನರಲ್ಲಿ ಎಚ್ಚರಿಕೆ ಮೂಡಿಸುವ ಕೆಲಸ ಮಾಡಬೇಕು. ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವೇ ಹೊರತು ಭಯ ಬಿತ್ತುವುದಲ್ಲ ಎಂದು ಹೇಳಿದ್ದಾರೆ ಎನ್ನುವುದನ್ನೂ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಶೇ.70ರಷ್ಟು ಬೆಂಗಳೂರಿಗರಿಗೆ ಕೊರೊನಾ ಸದ್ದಿಲ್ಲದೇ ಬಂದು ಹೋಗಿದೆ; ಐಸಿಎಂಆರ್ ಸೆರೋ ಸರ್ವೆಯಲ್ಲಿ ಬಯಲಾಯ್ತು ಅಚ್ಚರಿ