Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿ ಬಿಕ್ಕಟ್ಟಿಗೆ ಸಿಎಂ ಸಿದ್ದರಾಮಯ್ಯನವರ ಮುತ್ಸದ್ಧಿತನವೇ ಮದ್ದು

ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿ ಸಮೀಕ್ಷೆಯ ವಿವಾದ ಕ್ರಮೇಣ ಸಂಘರ್ಷದ ವಾತಾವರಣನ್ನು ನಿರ್ಮಾಣ ಮಾಡುವ ಲಕ್ಷಣಗಳು ಕಂಡು ಬರುತ್ತಿವೆ. ಜಾತಿ ಜತೆಗೆ ರಾಜಕಾರಣ ತಳಕು ಹಾಕಿಕೊಂಡಿರುವುದರಿಂದಲೇ ಈ ವಿವಾದ ಉಲ್ಬಣಗೊಳ್ಳುತ್ತಿದೆ. ಕಳೆದ ಎರಡು ದಶಕಗಳ ರಾಜಕೀಯ ಸ್ಥಿತ್ಯಂತರಗಳನ್ನು ಗಮನಿಸಿದರೆ ಜಾತಿ ಸಮೀಕ್ಷೆಯ ವಿವಾದಕ್ಕೆ ಉತ್ತರ ದೊರೆತಿತ್ತು.

ಜಾತಿ ಬಿಕ್ಕಟ್ಟಿಗೆ ಸಿಎಂ ಸಿದ್ದರಾಮಯ್ಯನವರ ಮುತ್ಸದ್ಧಿತನವೇ ಮದ್ದು
ಸಿಎಂ ಸಿದ್ದರಾಮಯ್ಯ
Follow us
ಗಂಗಾಧರ​ ಬ. ಸಾಬೋಜಿ
|

Updated on: Dec 02, 2023 | 8:46 PM

ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿ ಸಮೀಕ್ಷೆ (caste census) ಯ ವಿವಾದ ಕ್ರಮೇಣ ಸಂಘರ್ಷದ ವಾತಾವರಣನ್ನು ನಿರ್ಮಾಣ ಮಾಡುವ ಲಕ್ಷಣಗಳು ಕಂಡು ಬರುತ್ತಿವೆ. ಜಾತಿ ಜತೆಗೆ ರಾಜಕಾರಣ ತಳಕು ಹಾಕಿಕೊಂಡಿರುವುದರಿಂದಲೇ ಈ ವಿವಾದ ಉಲ್ಬಣಗೊಳ್ಳುತ್ತಿದೆ. ಕಳೆದ ಎರಡು ದಶಕಗಳ ರಾಜಕೀಯ ಸ್ಥಿತ್ಯಂತರಗಳನ್ನು ಗಮನಿಸಿದರೆ ಜಾತಿ ಸಮೀಕ್ಷೆಯ ವಿವಾದಕ್ಕೆ ಉತ್ತರ ದೊರೆತಿತ್ತು. ಅಹಿಂದ ವರ್ಗಕ್ಕೆ ರಾಜಕೀಯ ಅಸ್ಮಿತೆಯನ್ನು ತಂದುಕೊಡುವ ಮೂಲಕ ಎರಡನೇ ಬಾರಿ ಅಭೂತಪೂರ್ವ ಜನಾದೇಶದೊಂದಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಈ ಹೊತ್ತಿನ ಪ್ರಬಲ ನಾಯಕರು ಎಂದು ಧಾರಾಳವಾಗಿ ಹೇಳಬಹುದು. ತಲಾ ಏಳೆಂಟು ಬಾರಿ ಮುಖ್ಯಮಂತ್ರಿಗಳಾಗಿದ್ದ ಲಿಂಗಾಯತರು ಮತ್ತು ಒಕ್ಕಲಿಗ ನಾಯಕರಿಗಿದ್ದ ತಾವು ಮಾತ್ರ ರೂಲಿಂಗ್ ಕ್ಲಾಸ್ ಎಂಬ ಭ್ರಮೆಯನ್ನು ಕಳಚುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಒಕ್ಕಲಿಗರು ಮತ್ತು ಲಿಂಗಾಯತರ ರಾಜಕೀಯ ಪ್ರಾಬಲ್ಯದ ವಿರುದ್ಧ ಸಿದ್ದರಾಮಯ್ಯನವರು ಸುಮಾರು 18 ವರ್ಷಗಳ ಹಿಂದೆ ಅಹಿಂದ ಚಳುವಳಿ ಮೂಲಕ ಸವಾಲು ಒಡ್ಡಿದ್ದರು. ಆಗ ಅವರ ವಿರುದ್ಧ ಪ್ರಬಲ ಸಮುದಾಯಗಳು ಒಂದಾಗಿದ್ದವು. ಜೆಡಿಎಸ್ ಮತ್ತು ಬಿಜೆಪಿ, ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಸಮಾನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದವು. ಈಗ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ನೀಡಿರುವ ಬಲವಾದ ಏಟಿನಿಂದ ಪ್ರಪಾತದ ಅಂಚಿಗೆ ತಲುಪಿದ್ದ ಅವರ ಎದುರಾಳಿಗಳು ಮತ್ತೆ ತಿರುಗಿ ಬೀಳಲು ಪ್ರಯತ್ನಿಸುತ್ತಿದ್ದಾರೆ. ಪರಂಪರಾಗತವಾಗಿ ರಾಜಕಾರಣದಲ್ಲಿ ಉತ್ತರ ದ್ರುವ ಮತ್ತು ದಕ್ಷಿಣ ದೃವಗಳಂತೆ ಇದ್ದ ಒಕ್ಕಲಿಗರು ಮತ್ತು ಲಿಂಗಾಯತರು ಸಿದ್ದರಾಮಯ್ಯನವರ ವಿರುದ್ಧ ಒಂದಾಗುತ್ತಿದ್ದಾರೆಯೇ ಎನ್ನುವ ಅನುಮಾನ ಬರುವಂತಹ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.

ಇದನ್ನೂ ಓದಿ: ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷ: ವಿಜಯೇಂದ್ರ ಎಂಬ ಮಿಶ್ರ ಫಲ

ಸ್ಥೂಲವಾಗಿ ಲಿಂಗಾಯತರ ಜತೆ ಗುರುತಿಸಿಕೊಂಡಿರುವ ಬಿಜೆಪಿ ಮತ್ತು ಒಕ್ಕಲಿಗರ ಜತೆ ಗುರುತಿಸಿಕೊಂಡಿರುವ ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದೆ. ಕರ್ನಾಟಕದಲ್ಲಿ ಯಾವತ್ತೂ ಸಾಮಾಜಿಕ ಮತ್ತು ರಾಜಕೀಯ ಪರಿವರ್ತನೆಗಳು ಸೌಹಾರ್ದಯುತವಾಗಿಯೇ ನಡೆದಿವೆ. ಯಾವುದೇ ಸಂಘರ್ಷಗಳಿಗೆ ಆಸ್ಪದ ನೀಡಿಲ್ಲ. ಗುಜರಾತಿನಲ್ಲಿ ಮತ್ತು ಉತ್ತರದ ರಾಜ್ಯಗಳಲ್ಲಿ ಈ ಹಿಂದೆ ಮೀಸಲಾತಿ ವಿರುದ್ಧ ಭಾರೀ ಹಿಂಸಾಚಾರ ಮತ್ತು ಪ್ರತಿಭಟನೆಗಳು ನಡೆದಿದ್ದವು. ಆದರೆ ಕರ್ನಾಟಕದಲ್ಲಿ ಎಪ್ಪತ್ತರ ದಶಕದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಭೂಸುಧಾರಣೆ ಮತ್ತು ಶೋಷಿತ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಮುಂತಾದ ಕ್ರಾಂತಿಕಾರೀ ಬದಲಾವಣೆಗಳು ಸುಸೂತ್ರವಾಗಿಯೇ ನಡೆದಿವೆ.

ಹಾವನೂರು ಆಯೋಗದ ವರದಿ ಅನ್ವಯ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ವಿಧೇಯಕದ ಪ್ರತಿಗಳನ್ನು ಲಿಂಗಾಯತ ಮುಖಂಡ ಭೀಮಣ್ಣ ಖಂಡ್ರೆ ವಿಧಾನ ಸಭೆಯಲ್ಲಿ ಹರಿದು ವಿರೋಧಿಸಿದ್ದರು. ಇದರಿಂದ ರಾಜ್ಯಾದ್ಯಂತ ಪ್ರತಿಭಟನೆ ತೀವ್ರವಾಗಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಏಕೆಂದರೆ, ಮುಖ್ಯಮಂತ್ರಿ ದೇವರಾಜ ಅರಸು ಅವರು ಮೀಸಲು ಮಸೂದೆ ಬಗ್ಗೆ ರಾಜ್ಯದ ಜನರ ವಿಶ್ವಾಸವನ್ನು ಗಳಿಸಿದ್ದರು. ಅವರು ವಿಧಾನ ಮಂಡಲ ಅಧಿವೇಶನದ ಮೊದಲು ರಾಜ್ಯದ ಪ್ರವಾಸ ಕೈಗೊಂಡಿದ್ದರು. ಅವರು ಭಾಷಣವನ್ನು ಆರಂಭಿಸುವ ಮೊದಲು ಸಚಿವ ಕೆ.ಎಚ್.ಶ್ರೀನಿವಾಸ್ ಸಭಿಕರಿಗೆ ಒಂದು ಕತೆಯನ್ನು ಹೇಳುತ್ತಿದ್ದರು.

ಅದರ ಸಾರಾಂಶ ಈ ರೀತಿ ಇತ್ತು:”ಒಬ್ಬಳು ತಾಯಿ. ಅವಳಿಗೆ ನಾಲ್ಕು ಮಕ್ಕಳು. ಇಬ್ಬರು ಸದೃಢರು. ಇಬ್ಬರು ದುರ್ಬಲರು. ಆ ತಾಯಿ ರೊಟ್ಟಿಯಲ್ಲಿ ಸಮಾನವಾಗಿ ನಾಲ್ಕು ಪಾಲುಗಳನ್ನು ಮಾಡುತ್ತಿದ್ದಳು. ಸದೃಢರ ರೊಟ್ಟಿಗಳಲ್ಲಿ ಸ್ವಲ್ಪ ಮುರಿದು ದುರ್ಬಲರಿಗೆ ಹೆಚ್ಚುವರಿಯಾಗಿ ಸೇರಿಸಿ ಕೊಡುತ್ತಿದ್ದಳು.” ಇದರ ಜತೆಗೆ ದೇವರಾಜ ಅರಸು ಅವರು ಪ್ರಬಲ ಜಾತಿಗಳಲ್ಲಿ ಒಂದಾದ ಒಕ್ಕಲಿಗರನ್ನು ಕೆಣಕಿರಲಿಲ್ಲ. ಅವರನ್ನು ಹಿಂದುಳಿದ ಸಮುದಾಯದ ವ್ಯಾಪ್ತಿಗೆ ತಂದು ತಮ್ಮ ಜತೆಯಲ್ಲೇ ಇಟ್ಟುಕೊಂಡಿದ್ದರು.

ಇದನ್ನೂ ಓದಿ: CM Ibrahim: ರಾಜ್ಯದ ರಾಜಕಾರಣ ಗಂಭೀರ ಸ್ಥಿತಿಯಲ್ಲಿ ಸಾಗುತ್ತಿರುವಾಗ ಅದಕ್ಕೊಂದು ಮನರಂಜನೆಯ ತಿರುವು ನೀಡಿದ್ದು ಸಿ.ಎಂ .ಇಬ್ರಾಹಿಂ..!

ಒಕ್ಕಲಿಗರಿಗೂ ಕೂಡ ತಮ್ಮ ಬಳಿಯಿದ್ದ ರಾಜ್ಯದ ಅಧಿಕಾರದ ಸೂತ್ರವನ್ನು 1956 ರಲ್ಲಿ ರಾಜ್ಯ ಏಕೀಕರಣ ಆಗುತ್ತಿದ್ದಂತೆಯೇ ತಮ್ಮಿಂದ ಕಸಿದುಕೊಂಡಿದ್ದ ಲಿಂಗಾಯತರನ್ನು ಪಳಗಿಸಲು ದೇವರಾಜ ಅರಸು ಅಂತವರ ಸಖ್ಯ ಅವಶ್ಯವಾಗಿ ಬೇಕಿತ್ತು. ಆದರೆ ಈಗ ಒಕ್ಕಲಿಗರೇ ಕಾಂತರಾಜು ಆಯೋಗದ ಸಮೀಕ್ಷೆ ಅಂಗೀಕಾರದ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವುದು ವಿಶೇಷ. ವೆಂಕಟಸ್ವಾಮಿ ಆಯೋಗದ ವರದಿ ವಿರುದ್ಧ ಮಂಡ್ಯದಲ್ಲಿ ಮೈಸೂರು -ಬೆಂಗಳೂರು ಹೆದ್ದಾರಿಯನ್ನು ಬಂದ್ ಮಾಡಿದ್ದ ಮತ್ತು ಚಿನ್ನಪ್ಪ ರೆಡ್ಡಿ ಆಯೋಗದ ವರದಿ ವಿರುದ್ಧ ವಿಧಾನಸೌಧದ ಮುಂದೆ ಕಬ್ಬನ್ ಪಾರ್ಕಿನಲ್ಲಿ ಲಕ್ಷಾಂತರ ಜನರು ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಎಚ್.ಡಿ. ದೇವೇ ಗೌಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಒಂದು (ಟ್ರ್ಯಾಕ್ ರೆಕಾರ್ಡ್ )ಪರಂಪರೆಯೇ ಒಕ್ಕಲಿಗರಿಗೆ ಇದೆ.

ಕಬ್ಬನ್ ಪಾರ್ಕ್ ಸಮಾವೇಶವೇ ಒಕ್ಕಲಿಗರ ರಾಜಕೀಯ ಪುನರುತ್ಥಾನಕ್ಕೆ ನಾಂದಿಯಾಯಿತು .1956 ರ ಏಕೀಕರಣದ ನಂತರ 1994 ರಲ್ಲಿ ದೇವೇಗೌಡರು ಮೊದಲ ಒಕ್ಕಲಿಗ ಮುಖ್ಯಮಂತ್ರಿಯಾದರು. ಇದರ ಜತೆಗೆ ಸಿದ್ದರಾಮಯ್ಯನವರ ರಾಜಕೀಯ ವಿರೋಧಿಗಳು ಕೂಡ ಜಾತಿ ಸಮೀಕ್ಷೆಯನ್ನೇ ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಹವಣಿಸುತ್ತಿದ್ದಾರೆ. JDS ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ “ಸಿದ್ದರಾಮಯ್ಯನವರು ಸಮಾಜವನ್ನು ಒಡೆಯಲು ಮತ್ತು ಜಾತಿಯ ವಿಷ ಬೀಜವನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ “ಎಂದು ಈಗಾಗಲೇ ಟೀಕಾ ಪ್ರಹಾರ ಮಾಡಿದ್ದಾರೆ.

ಸಮೀಕ್ಷೆಯ ಅಂಗೀಕಾರದ ವಿರುದ್ಧ ಒಕ್ಕಲಿಗರ ಸಂಘ ಮತ್ತು ಲಿಂಗಾಯತ ವೀರಶೈವ ಮಹಾಸಭಾ ಜಂಟಿ ಹೋರಾಟದ ಎಚ್ಚರಿಕೆಯನ್ನು ನೀಡಿವೆ.ಈ ಸಂಘಟನೆಗಳು ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕೇವಲ ಕಾಂತರಾಜು ಆಯೋಗದ ವರದಿಯನ್ನು ಮಾತ್ರ ವಿರೋಧಿಸುತ್ತಿವೆ. ಅದು ಲೋಪದೋಷಗಳಿಂದ ಕೂಡಿದ್ದು ತಮ್ಮ ಸಮುದಾಯಗಳ ಯುವಕರಿಗೆ ಶಾಶ್ವತವಾದ ಅನ್ಯಾಯವಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಿವೆ. “ಈ ಸಮೀಕ್ಷೆ ವಿವಾದಾತ್ಮಕವಾಗಿದೆ .ನಮ್ಮ ಮಾಹಿತಿ ಪ್ರಕಾರ ಉಪ ಜಾತಿಗಳನ್ನು ಮೂಲ ಜಾತಿಗಳಿಂದ ವಿಂಗಡಿಸಿ ಜನಸಂಖ್ಯೆಯ ಸ್ವರೂಪವನ್ನು ಏರುಪೇರು ಮಾಡಲಾಗಿದೆ. ಈ ಸಮೀಕ್ಷೆ ವೈಜ್ಞಾನಿಕವಾಗಿಲ್ಲ ಮತ್ತು ಪಾರದರ್ಶಕವಾಗಿಲ್ಲ. ಉಪಜಾತಿಗಳ ಜನರಲ್ಲಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು ಸಾಕಷ್ಟು ಕಾಲಾವಕಾಶ ನೀಡಿಲ್ಲ. ಗಣತಿದಾರರು ಖುದ್ದಾಗಿ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆಯೇ ಹೊರತು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಸಾಧನಗಳನ್ನು ಬಳಸಿಲ್ಲ. ಗಣತಿದಾರರು ಎಲ್ಲಾ ಮನೆಗಳಿಗೆ ಭೇಟಿ ನೀಡಿಲ್ಲ.ಒಂದು ಅಂದಾಜಿನ ಪ್ರಕಾರ ಸುಮಾರು ಶೇ.60 ರಷ್ಟು ಮನೆಗಳಿಗೆ ಮಾತ್ರ ಭೇಟಿ ನೀಡಿರಬಹುದು.ಈ ಸಮೀಕ್ಷೆಯ ಹಿಂದೆ ಜಾತಿಗಳನ್ನು ವಿಭಜನೆ ಮಾಡುವ ಹುನ್ನಾರವಿದೆ ಮತ್ತು ದುರುದ್ದೇಶದಿಂದ ಕೂಡಿದೆ ಹಾಗೂ ರಾಜಕೀಯಪ್ರೇರಿತವಾಗಿದೆ.ಇದಕ್ಕೆ ಇಂಬು ನೀಡುವಂತೆ ಆ ಸಮೀಕ್ಷೆಯಲ್ಲಿನ ಜಾತಿವಾರು ಸಂಖ್ಯೆಯನ್ನು ಮಾತ್ರ ಮಾಧ್ಯಮಗಳಿಗೆ ಸೋರಿಕೆ ಮಾಡಿ ಗೊಂದಲವನ್ನು ಸೃಷ್ಟಿಸಲಾಗಿದೆ. ಆದ್ದರಿಂದ ವೈಜ್ಞಾನಿಕವಾದ ,ಪಾರದರ್ಶಕವಾದ ಮತ್ತು ಆಧುನಿಕ ತಂತ್ರಜ್ಞಾನ ಮತ್ತು ಆಧಾರ್ ಆಧಾರಿತ ಮತ್ತೊಂದು ಸಮೀಕ್ಷೆ ನಡೆಯಲಿ “ಎಂದು ಈ ಸಂಘಟನೆಗಳು ಒತ್ತಾಯಿಸುತ್ತಿವೆ.

ಅಹಿಂದ ಸಂಘಟನೆಗಳು ಸಮೀಕ್ಷೆಯ ಅಂಗೀಕಾರಕ್ಕೆ ಪಟ್ಟು ಹಿಡಿದಿವೆ.ಜಾತಿ ವ್ಯವಸ್ಥೆಯಿಂದಾಗಿ ಶತ ಶತ ಮಾನಗಳಿಂದ ಶೋಷಣೆಗೆ ಒಳಗಾಗಿರುವತಮಗೆ ಈ ಸಮೀಕ್ಷೆಯಿಂದ ವಿಮೋಚನೆ ದೊರೆಯಲಿದೆ ಎನ್ನುವ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ.ಸಮೀಕ್ಷೆ ಸಮರ್ಪಕವಾಗಿದೆ.ಅದು ಬಿಡುಗಡೆಯಾಗುವ ಮೊದಲೇ ಹೀಗೆ ಅಪಸ್ವರ ಸರಿಯಲ್ಲ ಎಂದು ಆಯೋಗದ ಮುಖ್ಯಸ್ಥರಾಗಿದ್ದ ಕಾಂತರಾಜು ಅವರೇ ಸ್ಪಷ್ಟಪಡಿಸಿದ್ದಾರೆ.

ಶೀಘ್ರವೇ ಚಿತ್ರದುರ್ಗದಲ್ಲಿ ಒಂದು ಬೃಹತ್ ಪ್ರತಿಭಟನಾ ಸಭೆ ನಡೆಸುವುದಾಗಿಯೂ ಹಿಂದುಳಿದ ವರ್ಗಗಳ ಸಂಘಟನೆಗಳು ಎಚ್ಚರಿಸಿವೆ.ಒಟ್ಟಾರೆ ,ಕುರುಕ್ಷೇತ್ರದಲ್ಲಿ ಎರಡೂ ಪಾಳಯದವರು ಪರಸ್ಪರ ಎದುರುಗೊಳ್ಳುವ ಮೊದಲು ಆಯಕಟ್ಟಿನ ಸ್ಥಳಗಳಿಗಾಗಿ ಹೊಂಚು ಹಾಕುತ್ತಿರುವಂತೆ ಭಾಸವಾಗುತ್ತಿದೆ. ಈ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಸಂಘರ್ಷ ತೀವ್ರವಾದಷ್ಟೂ ಅಹಿಂದ ವೋಟ್ ಬ್ಯಾಂಕ್ ಮತ್ತಷ್ಟು ಭದ್ರವಾದೀತು. ಆದರೆ ಜಾತಿ ಸಂಘರ್ಷವನ್ನು ತಪ್ಪಿಸಿ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಔದಾರ್ಯದ,ಮುಕ್ತ ಮನಸ್ಸಿನ ಮತ್ತು ಮುತ್ಸದ್ದಿತನದ ನಡವಳಿಕೆ ಯಿಂದ ಮಾತ್ರ ಸಾಧ್ಯ.

ಲೇಖಕರು: ರುದ್ರಪ್ಪ ಸಿ

ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ