ಡ್ರೋನ್‌ಗಳ ಮೂಲಕ ಅಂಗಾಂಗ ರವಾನೆಯ ಕ್ರಾಂತಿಕಾರಿ ಬದಲಾವಣೆ

ಸಂಶೋಧಕರು ಇತ್ತೀಚೆಗೆ ರೋಬೋಟಿಕ್ಸ್ ವಿಜ್ಞಾನದಲ್ಲಿ ಡ್ರೋನ್‌ಗಳ ಬಳಕೆಯ ಕುರಿತು ಬರೆದಿದ್ದಾರೆ. ಹಲವು ಬಾರಿ ಅಭ್ಯಾಸಗಳನ್ನು ನಡೆಸಿದ ಬಳಿಕ, ಅವರ ಡ್ರೋನ್ ದಾನಿಯೊಬ್ಬರ ಶ್ವಾಸಕೋಶವನ್ನು ಟೊರಾಂಟೋ ವೆಸ್ಟರ್ನ್ ಹಾಸ್ಪಿಟಲ್‌ನ ಮಹಡಿಯಿಂದ ಟೊರಾಂಟೋ ಜನರಲ್ ಹಾಸ್ಪಿಟಲ್‌ನ ಮಹಡಿಗೆ ಐದು ನಿಮಿಷಗಳ ಅವಧಿಯಲ್ಲಿ ಯಶಸ್ವಿಯಾಗಿ ತಲುಪಿಸಿ, ಅಂಗಾಂಗ ಕಸಿ ಯಶಸ್ವಿಯಾಗಿ ನೆರವೇರುವಂತೆ ಮಾಡಿತು.

ಡ್ರೋನ್‌ಗಳ ಮೂಲಕ ಅಂಗಾಂಗ ರವಾನೆಯ ಕ್ರಾಂತಿಕಾರಿ ಬದಲಾವಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಮದನ್​ ಕುಮಾರ್​

Updated on:May 19, 2023 | 7:46 PM

ಅಂಗಾಂಗ ಕಸಿಯ ಹಿಂದಿನ ವಿಜ್ಞಾನ ದಿನೇ ದಿನೇ ಅಭಿವೃದ್ಧಿ ಸಾಧಿಸುತ್ತಾ ಬಂದಿದೆ. ಆದರೆ ಅಂಗಾಂಗ ಕಸಿಯಲ್ಲಿ ಇಂದಿಗೂ ತಲೆದೋರುವ ಸಮಸ್ಯೆಯೆಂದರೆ ಅಂಗಾಂಗವನ್ನು ಸಾಗಿಸಲು ವಿಮಾನದ ವ್ಯವಸ್ಥೆ ಪಡೆಯುವುದು ಮತ್ತು ವಾಹನ ದಟ್ಟಣೆಯ ಮಧ್ಯೆಯೂ ಅಂಗಾಂಗ ಉತ್ತಮ ಸ್ಥಿತಿಯಲ್ಲಿರುವಾಗಲೇ ತಲುಪಿಸುವುದು.

ಸಂಶೋಧಕರು ಇತ್ತೀಚೆಗೆ ರೋಬೋಟಿಕ್ಸ್ ವಿಜ್ಞಾನದಲ್ಲಿ ಡ್ರೋನ್‌ಗಳ ಬಳಕೆಯ ಕುರಿತು ಬರೆದಿದ್ದಾರೆ. ಹಲವು ಬಾರಿ ಅಭ್ಯಾಸಗಳನ್ನು ನಡೆಸಿದ ಬಳಿಕ, ಅವರ ಡ್ರೋನ್ ದಾನಿಯೊಬ್ಬರ ಶ್ವಾಸಕೋಶವನ್ನು ಟೊರಾಂಟೋ ವೆಸ್ಟರ್ನ್ ಹಾಸ್ಪಿಟಲ್‌ನ ಮಹಡಿಯಿಂದ ಟೊರಾಂಟೋ ಜನರಲ್ ಹಾಸ್ಪಿಟಲ್‌ನ ಮಹಡಿಗೆ ಐದು ನಿಮಿಷಗಳ ಅವಧಿಯಲ್ಲಿ ಯಶಸ್ವಿಯಾಗಿ ತಲುಪಿಸಿ, ಅಂಗಾಂಗ ಕಸಿ ಯಶಸ್ವಿಯಾಗಿ ನೆರವೇರುವಂತೆ ಮಾಡಿತು. ರಸ್ತೆ ಮಾರ್ಗದ ಮೂಲಕ ಸಾಗಾಟ ನಡೆಸುವುದಾದರೆ ಕನಿಷ್ಠ 25 ನಿಮಿಷ ತೆಗೆದುಕೊಳ್ಳುತ್ತದೆ.

“ಮಂಜುಗಡ್ಡೆಯಲ್ಲಿ ಕಡಿಮೆ ಅವಧಿಯ ಸಹಿಷ್ಣುತೆ ಹೊಂದಿರುವ ಹೃದಯ ಹಾಗೂ ಶ್ವಾಸಕೋಶದಂತಹ ಅಂಗಗಳ ಸಾಗಾಣಿಕೆ ನಡೆಸಲು ಡ್ರೋನ್ ಒಂದು ಉತ್ತಮ ಪರಿಹಾರವಾಗಿದೆ” ಎನ್ನುತ್ತಾರೆ ಮೆಡಿಕಲ್ ಯುನಿವರ್ಸಿಟಿ ಆಫ್ ಸೌತ್ ಕೆರೊಲಿನಾದ ಕಸಿ ಶಸ್ತ್ರಚಿಕಿತ್ಸಕರಾದ ಜೋಸೆಫ್ ಸ್ಕಾಲಿಯಾ. ಅವರು ಈ ಅಧ್ಯಯನದ ಅಂಗವಾಗಿರದಿದ್ದರೂ, 2019ರಲ್ಲಿ ಅವರ ನೇತೃತ್ವದ ತಂಡ ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ನಲ್ಲಿ ಡ್ರೋನ್ ಮೂಲಕ ಮೂತ್ರಪಿಂಡದ ಸಾಗಾಣಿಕೆ ನಡೆಸಿ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿತ್ತು. ಮೂತ್ರಪಿಂಡವನ್ನು 24 ಗಂಟೆಗಳ ತನಕ ಮಂಜುಗಡ್ಡೆಯಲ್ಲಿ ಸಂಗ್ರಹಿಸಿ ಇಡಬಹುದಾಗಿದೆ. ಆದರೆ ಹೃದಯ ಮತ್ತು ಶ್ವಾಸಕೋಶಗಳನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೆ, ಅದರ ಅರ್ಧದಷ್ಟು ಸಮಯ ಮಾತ್ರವೇ ಮಂಜುಗಡ್ಡೆಯಲ್ಲಿ ಸಂಗ್ರಹಿಸಿ ಇಡಬಹುದು.

ಟೊರಾಂಟೋ ಜನರಲ್ ಹಾಸ್ಪಿಟಲ್ ಆ್ಯಂಡ್ ಯುನಿದರ್ ಬಯೋಇಲೆಕ್ಟ್ರಾನಿಕ್ಸ್ ಸಂಸ್ಥೆಗಳ ಸಂಶೋಧಕರು ಒಂದು ವಾಣಿಜ್ಯಿಕ ಡ್ರೋನಿನ ಲ್ಯಾಂಡಿಂಗ್ ಗೇರನ್ನು ಬದಲಾಯಿಸಿ, ಹಗುರವಾದ ಕಾರ್ಬನ್ ಫೈಬರ್ ಕಂಟೇನರ್ ಅಳವಡಿಸಿ, ದೊಡ್ಡದಾದ ಮತ್ತು ದುರ್ಬಲವಾದ ಅಂಗಗಳನ್ನು ಇಡುವಂತೆ ವ್ಯವಸ್ಥೆ ಮಾಡಿತು.

ಡ್ರೋನಿನ ಜಿಪಿಎಸ್ ಜೊತೆ ರೇಡಿಯೋ ತರಂಗಗಳು ಅಡ್ಡಿಪಡಿಸದಂತೆ ಈ ತಂಡ ಡ್ರೋನಿನ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತು. ಒಂದು ವೇಳೆ ಏನಾದರೂ ಅವಘಡ ಸಂಭವಿಸಿದರೆ ಸ್ವಯಂಚಾಲಿತವಾಗಿ ಕಾರ್ಯಾಚರಿಸುವ ಪ್ಯಾರಾಶೂಟ್ ಒಂದನ್ನು ಅಳವಡಿಸಿತು.

ಇದನ್ನೂ ಓದಿ: DRDO Laboratory Director: ಆತಂಕದ ಕಾರ್ಮೋಡ ಮೂಡಿಸಿದ ಡಿಆರ್‌ಡಿಓ ಪ್ರಯೋಗಾಲಯ ನಿರ್ದೇಶಕರ ಬಂಧನ: ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಗಳ ಪೂರೈಕೆ?

ಯಶಸ್ವಿ ಪರೀಕ್ಷಾ ಹಾರಾಟದ ಬಳಿಕ, ಸಂಶೋಧಕರು ವೈಮಾನಿಕ ಅಧಿಕಾರಿಗಳೊಡನೆ ಸಹಯೋಗ ಹೊಂದಿ, ವಾಣಿಜ್ಯಿಕ ವಾಯು ಮಾರ್ಗದ ಮಧ್ಯೆ ಡ್ರೋನ್ ಮಾರ್ಗವನ್ನೂ ಅಭಿವೃದ್ಧಿ ಪಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಸಾಕಷ್ಟು ಅಡೆತಡೆಗಳೂ ಇವೆ. ಹೆಚ್ಚಿನ ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ನಾಗರಿಕರು ಅವರ ಕಣ್ಣಿನ ಅಳತೆಯಲ್ಲಿ ಡ್ರೋನ್‌ಗಳ ಹಾರಾಟ ನಡೆಸಲು ಅಷ್ಟು ಸುಲಭವಾಗಿ ಅನುಮತಿ ನೀಡುವುದಿಲ್ಲ.

ಟೊರಾಂಟೋ ಜನರಲ್ ಆಸ್ಪತ್ರೆಯಲ್ಲಿ ಶ್ವಾಸಕೋಶ ದಾನ ಯೋಜನೆ ನಡೆಸುತ್ತಿರುವ ಶಾಫ್ ಕೇಶವ್‌ಜೀ ಅವರು ಭವಿಷ್ಯದ ದಿನಗಳಲ್ಲಿ ಡ್ರೋನ್‌ಗಳು ಅಂಗಾಂಗ ಕಸಿ ನಡೆಸಲು ದೂರದ ಪ್ರದೇಶಗಳಿಗೂ ಒಯ್ಯಬಲ್ಲವು ಎಂದಿದ್ದಾರೆ. ಆದರೆ ಈಗ, ಅವರು ವಿಮಾನ ನಿಲ್ದಾಣದಿಂದ ಆಸ್ಪತ್ರೆಯ ಹಾದಿಗೆ ಗಮನ ಹರಿಸಿದ್ದು, ರಸ್ತೆ ಮಾರ್ಗದಲ್ಲಿ 40 ನಿಮಿಷ ತೆಗೆದುಕೊಳ್ಳುವ ಈ ಪ್ರಯಾಣ ಡ್ರೋನ್ ಮೂಲಕ ಕೇವಲ 8 ನಿಮಿಷಗಳಲ್ಲಿ ತಲುಪುತ್ತದೆ. ಅವರು ಇಂತಹ ಮೊದಲ ಹಾರಾಟ ಈ ಬೇಸಿಗೆಯಲ್ಲೇ ನೆರವೇರಬಹುದು ಎಂದಿದ್ದಾರೆ. ಈ ಯೋಜನೆಯನ್ನು “ದ ಲಾಸ್ಟ್ ಮೈಲ್ ಮಾಡೆಲ್” ಎಂದು ಕರೆಯಲಾಗಿದೆ.

Girish Linganna

ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Published On - 7:45 pm, Fri, 19 May 23