AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ರಕ್ಷಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ಬ್ಯಾಂಕ್​ಗಳಲ್ಲಿ ಹಣ ಠೇವಣಿ ಇಡುವ ಸಣ್ಣ ಠೇವಣಿದಾರರ ಹಿತಾಸಕ್ತಿ ರಕ್ಷಿಸುವ ಮಹತ್ವದ ಮಸೂದೆಯೊಂದಕ್ಕೆ ಇಂದು ಲೋಕಸಭೆ ಒಪ್ಪಿಗೆ ನೀಡಿದೆ.

ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ರಕ್ಷಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ
ಈ ತಿಂಗಳು, ಅಂದರೆ ಸೆಪ್ಟೆಂಬರ್​ನಲ್ಲಿ ಪೂರ್ಣಗೊಳಿಸಬೇಕಾದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಐದು ಜವಾಬ್ದಾರಿಗಳು ಇಲ್ಲಿವೆ. ಒಂದು ವೇಳೆ ಈ ಗಡುವನ್ನು ಮೀರಿದಲ್ಲಿ ದಂಡ ಪಾವತಿಸಬೇಕಾದ ಸನ್ನಿವೇಶ ಉದ್ಭವಿಸಬಹುದು. ಯಾವುದು ಆ 5 ಜವಾಬ್ದಾರಿಗಳು ಎಂಬ ವಿವರ ನಿಮ್ಮೆದುರು ಇದೆ.
S Chandramohan
| Edited By: |

Updated on: Aug 09, 2021 | 11:08 PM

Share

ಬ್ಯಾಂಕ್​ಗಳಲ್ಲಿ ಹಣ ಠೇವಣಿ ಇಡುವ ಸಣ್ಣ ಠೇವಣಿದಾರರ ಹಿತಾಸಕ್ತಿ ರಕ್ಷಿಸುವ ಮಹತ್ವದ ಮಸೂದೆಯೊಂದಕ್ಕೆ ಇಂದು ಲೋಕಸಭೆ ಒಪ್ಪಿಗೆ ನೀಡಿದೆ. ಡಿಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್(ತಿದ್ದುಪಡಿ) ಮಸೂದೆ (ಡಿಐಸಿಜಿಸಿ) 2021ಕ್ಕೆ ಲೋಕಸಭೆ ಇಂದು ಒಪ್ಪಿಗೆ ನೀಡಿದೆ. ಈ ಮಸೂದೆಯು ಕಾಯಿದೆಯಾಗಿ ಜಾರಿಯಾಗುವುದರಿಂದ ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ರಕ್ಷಣೆಯಾಗಲಿದೆ. ಬ್ಯಾಂಕ್​ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಾಗಿಲು ಮುಚ್ಚಿದರೂ, ಠೇವಣಿದಾರರ ಹಣ ಸುರಕ್ಷಿತವಾಗಿ ಅವರರ ಕೈ ಸೇರಲಿದೆ.

ನಮ್ಮ ದೇಶದಲ್ಲಿ ಇತ್ತೀಚೆಗೆ ಸಹಕಾರ ವಲಯದ ಬ್ಯಾಂಕ್​ಗಳು ಅವ್ಯವಹಾರ, ಆರ್ಥಿಕ ನಷ್ಟ, ನಿಯಮಗಳ ಉಲಂಘನೆ ಸೇರಿದಂತೆ ಹಲವು ಕಾರಣಗಳಿಂದ ದಿಢೀರನೆ ಬಾಗಿಲು ಮುಚ್ಚುತ್ತಿವೆ. ಕಷ್ಟಪಟ್ಟು ದುಡಿದು ಠೇವಣಿ ಇಟ್ಟ ಜನಸಾಮಾನ್ಯರು, ಬಡವರು ತಮ್ಮ ಹಣ ವಾಪಸ್ ಸಿಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಕೆಲವರು ಆತ್ಮಹತ್ಯೆಯ ಹಾದಿಯನ್ನು ಹಿಡಿದಿದ್ದಾರೆ. ಇದಕ್ಕೆ ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಅಪರೇಟಿವ್ ಬ್ಯಾಂಕ್ ಉತ್ತಮ ಉದಾಹರಣೆ. ನಮ್ಮ ಕರ್ನಾಟಕದಲ್ಲೂ ಕೂಡ ಬೆಂಗಳೂರಿನ ಗುರು ರಾಘವೇಂದ್ರ ಕೋ ಅಪರೇಟಿವ್ ಬ್ಯಾಂಕ್ ಅವ್ಯವಹಾರದ ಕಾರಣಕ್ಕಾಗಿ ನಿರ್ಬಂಧಗಳನ್ನು ಎದುರಿಸುತ್ತಿದೆ. ಬ್ಯಾಂಕ್​ನಲ್ಲಿ ಠೇವಣಿ ಇರಿಸಿದ್ದ ಜನರು ಹಣ ವಾಪಸ್ ಸಿಗದೆ ಇನ್ನೂ ಪರದಾಡುತ್ತಿದ್ದಾರೆ. ಬ್ಯಾಂಕ್ ಅಡಿಟ್ ನಡೆದರೂ, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ತಿಂಗಳು ಬೆಂಗಳೂರಿಗೆ ಬಂದಾಗ, ಅವರನ್ನ ಭೇಟಿಯಾಗಿ ಬ್ಯಾಂಕ್ ಠೇವಣಿದಾರರರು ತಮ್ಮ ಸಂಕಷ್ಟ ತೋಡಿಕೊಂಡಿದ್ದರು.

ಹೀಗಾಗಿ ಇಂಥ ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ರಕ್ಷಿಸಲು ಈಗ ಕೇಂದ್ರ ಸರ್ಕಾರ ಮಸೂದೆಯೊಂದನ್ನು ಸಿದ್ದಪಡಿಸಿ ಲೋಕಸಭೆಯಲ್ಲಿ ಮಂಡಿಸಿತ್ತು. ಡಿಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್(DICGC) ತಿದ್ದುಪಡಿ ಮಸೂದೆಯನ್ನ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ಲೋಕಸಭೆಯಲ್ಲಿ ಗದ್ದಲದ ಮಧ್ಯೆಯೂ ಈ ಮಸೂದೆಗೆ ಅಂಗೀಕಾರ ಸಿಕ್ಕಿದೆ. ಈ ಮಸೂದೆ ಕಾಯಿದೆಯಾಗಿ ಜಾರಿಯಾದ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್​ಗಳ ಗ್ರಾಹಕರ ಹಿತಾಸಕ್ತಿ ರಕ್ಷಣೆಯಾಗಲಿದೆ. ಬ್ಯಾಂಕ್​ನಲ್ಲಿ ಠೇವಣಿ ಇಟ್ಟ ಹಣ ಸುರಕ್ಷಿತವಾಗಿ ವಾಪಸ್ ಠೇವಣಿದಾರರ ಕೈ ಸೇರಲಿದೆ. ಈ ಮಸೂದೆ ಕಾಯಿದೆಯಾಗಿ ಜಾರಿಯಾಗುವುದರಿಂದ ಮೂರು ರೀತಿಯಲ್ಲಿ ಠೇವಣಿದಾರರಿಗೆ ಸಹಾಯವಾಗಲಿದೆ.

ಠೇವಣಿದಾರರಿಗೆ ಹೇಗೆ ಸಹಾಯವಾಗಲಿದೆ? ಮೊದಲನೇಯದಾಗಿ ಯಾವುದೇ ವಾಣಿಜ್ಯ ಬ್ಯಾಂಕ್ ಅಥವಾ ಸಹಕಾರ ಬ್ಯಾಂಕ್ ಆರ್ಥಿಕ ಚಟುವಟಿಕೆ ನಡೆಸದಂತೆ ರಿಸರ್ವ್ ಬ್ಯಾಂಕ್ ನಿರ್ಬಂಧಿಸಿದಾಗ, ಡಿಪಾಸಿಟ್ ಇನ್ಷುರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ಅಂಥ ಬ್ಯಾಂಕ್‌ಗಳ ಠೇವಣಿದಾರರಿಗೆ ತಲಾ ₹5 ಲಕ್ಷ ರೂಪಾಯಿ ಠೇವಣಿ ವಿಮೆಯನ್ನು ನೀಡಲಿದೆ. ಈ ಮೊದಲು ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕ್‌ನ ನಗದೀಕರಣಕ್ಕೆ ಆದೇಶ ನೀಡಿದ್ದ ಬಳಿಕವಷ್ಟೇ ಇನ್ಸೂರೆನ್ಸ್ ಹಣ ನೀಡಲು ಅವಕಾಶ ಇತ್ತು. ಇದರಿಂದ ವರ್ಷಗಳೇ ಕಳೆದರೂ, ಬ್ಯಾಂಕ್ ಠೇವಣಿದಾರರಿಗೆ ತಮ್ಮ ಹಣ ವಾಪಸ್ ಸಿಗುತ್ತಿರಲಿಲ್ಲ. ಈಗ ಬ್ಯಾಂಕ್ ಆರ್ಥಿಕ ಚಟುವಟಿಕೆ ನಡೆಸದಂತೆ ನಿರ್ಬಂಧ ವಿಧಿಸಿದ 90 ದಿನಗಳಲ್ಲಿ ₹5 ಲಕ್ಷ ರೂಪಾಯಿ ವಿಮಾ ಹಣವನ್ನು ಬ್ಯಾಂಕ್ ಠೇವಣಿದಾರರಿಗೆ ಡಿಐಸಿಜಿಸಿ ನೀಡಬೇಕಾಗುತ್ತೆ. ತಿದ್ದುಪಡಿ ಪ್ರಕಾರ, 90 ದಿನಗಳಲ್ಲಿ ಠೇವಣಿದಾರರಿಗೆ ಇನ್ಸೂರೆನ್ಸ್ ಹಣವನ್ನು ನೀಡಬೇಕಾಗುತ್ತೆ.

ಆರ್‌ಬಿಐಗೂ ಲಾಭ ಬ್ಯಾಂಕ್​ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ, ಆರ್‌ಬಿಐ ಒತ್ತಡಕ್ಕೆ ಒಳಗಾಗುವುದನ್ನು ಈ ಮಸೂದೆ ತಪ್ಪಿಸುತ್ತೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್​ಗಳ ಆರ್ಥಿಕ ಚಟುವಟಿಕೆ ನಡೆಸದಂತೆ ನಿರ್ಬಂಧ ವಿಧಿಸಿದ ಬಳಿಕ ಆರ್‌ಬಿಐಗೆ ಒಂದೆಡೆ ಠೇವಣಿದಾರರಿಂದ ತಮ್ಮ ಹಣ ವಾಪಸ್ ನೀಡುವಂತೆ ಒತ್ತಡ ಇರುತ್ತೆ. ಇದರಿಂದಾಗಿ ರಿಸರ್ವ್ ಬ್ಯಾಂಕ್, ಬ್ಯಾಂಕ್ ಅನ್ನು ಸಂಕಷ್ಟದಿಂದ ಪಾರು ಮಾಡಲು ಯಾವುದಾದರೊಂದು ತೀರ್ಮಾನವನ್ನು ಆದಷ್ಟು ಬೇಗನೇ ತೆಗೆದುಕೊಳ್ಳಬೇಕಾಗುತ್ತೆ. ಯೆಸ್ ಬ್ಯಾಂಕ್ ವಿಚಾರದಲ್ಲೂ ರಿಸರ್ವ್ ಬ್ಯಾಂಕ್ ಒತ್ತಡಕ್ಕೆ ಒಳಗಾಗಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕ್​ಗಳ ರಕ್ಷಣೆಗೆ ಹಾಗೂ ಪುನಶ್ಚೇತನಕ್ಕೆ ರಿಸರ್ವ್ ಬ್ಯಾಂಕ್ ತರಾತುರಿಯಲ್ಲಿ ಯಾವುದಾದರೊಂದು ಪ್ಯಾಕೇಜ್ ಘೋಷಿಸಬೇಕಾಗಿತ್ತು. ಆಗ ಅಂಥ ಪರಿಸ್ಥಿತಿ ಉದ್ಭವವಾಗಲ್ಲ ಎಂದು ಕೇಂದ್ರದ ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ತಿದ್ದುಪಡಿ ಮಸೂದೆಯಿಂದ ರಿಸರ್ವ್ ಬ್ಯಾಂಕ್​ಗೆ ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕ್‌ನ ನಗದು ನೀಡಿಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತೆ. ಇದರ ಜೊತೆಗೆ DICGC ಬ್ಯಾಲೆನ್ಸ್ ಶೀಟ್ ಕೂಡ ಸದೃಢವಾಗುತ್ತೆ. ಹೇಗೆಂದರೇ, ಈಗ ನೂರು ರೂಪಾಯಿ ಠೇವಣಿಗೆ 15 ಪೈಸೆ ಮಾತ್ರ ವಿಮಾ ಪ್ರೀಮಿಯಂ ಆಗಿ ಸಂಗ್ರಹಿಸಲು ಅವಕಾಶ ಇದೆ. ಈ ಮಿತಿಯನ್ನು ತೆಗೆದು ಹಾಕುವುದರಿಂದ ಡಿಐಸಿಜಿಸಿ ಹೆಚ್ಚಿನ ಇನ್ಸೂರೆನ್ಸ್ ಪ್ರೀಮಿಯಂ ಅನ್ನು ಸಂಗ್ರಹಿಸಲು ಅವಕಾಶ ಸಿಗುತ್ತೆ.

ಮೂರನೆಯದಾಗಿ ಕೇಂದ್ರ ಸರ್ಕಾರ ಕಳೆದ ವರ್ಷವೇ ಬ್ಯಾಂಕ್​ಗಳ ವೈಯಕ್ತಿಕ ಠೇವಣಿದಾರರ ಠೇವಣಿ ವಿಮಾ ಮೊತ್ತವನ್ನು ₹ 1 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಿದೆ. ಇದಕ್ಕೆ ಈಗ ಡಿಐಸಿಜಿಸಿಯಿಂದ ಮತ್ತಷ್ಟು ಬಲ ಸಿಕ್ಕಿದೆ. ಭಾರತದಲ್ಲಿ ಶೇ 98ರಷ್ಟು ಠೇವಣಿದಾರರು ಬ್ಯಾಂಕ್​ಗಳಲ್ಲಿ ₹ 5 ಲಕ್ಷಕ್ಕಿಂತ ಕಡಿಮೆ ಹಣ ಠೇವಣಿ ಇಟ್ಟಿದ್ದಾರೆ. ಈ ಹೊಸ ತಿದ್ದುಪಡಿ ಮಸೂದೆಯಿಂದ ಬಹುತೇಕ ಠೇವಣಿದಾರರ ಹಿತಾಸಕ್ತಿ ರಕ್ಷಣೆಯಾಗಲಿದೆ.

ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಅಪರೇಟೀವ್ ಬ್ಯಾಂಕ್ ಸೇರಿದಂತೆ ಕೆಲ ಬ್ಯಾಂಕ್​ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬಳಿಕ ಕೇಂದ್ರ ಸರ್ಕಾರ ಈ ಮಸೂದೆ ಸಿದ್ದಪಡಿಸಿ ಸಂಸತ್‌ನ ಉಭಯ ಸದನಗಳ ಒಪ್ಪಿಗೆ ಪಡೆದಿದೆ. ಕಳೆದ ವಾರವೇ ಈ ಮಸೂದೆಗೆ ರಾಜ್ಯಸಭೆಯ ಒಪ್ಪಿಗೆಯೂ ಸಿಕ್ಕಿದೆ. ಈ ಮಸೂದೆಯಿಂದ ಪಂಜಾಬ್‌ ಮತ್ತು ಮಹಾರಾಷ್ಟ್ರ ಕೋ ಅಪರೇಟೀವ್ ಬ್ಯಾಂಕ್ ಸೇರಿದಂತೆ 23 ಕೋ ಅಪರೇಟೀವ್ ಬ್ಯಾಂಕ್ ಠೇವಣಿದಾರರಿಗೆ ಅನುಕೂಲವಾಗಲಿದೆ ಎಂದು ಕಳೆದ ವಾರ ರಾಜ್ಯಸಭೆಯಲ್ಲಿ ಮಾತನಾಡುತ್ತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಈಗ ಮಸೂದೆ ಕಾನೂನು ಆಗಿ ಜಾರಿಯಾಗಲು ರಾಷ್ಟ್ರಪತಿಗಳು ಅಂಕಿತ ಹಾಕಬೇಕು. ಆದಾದ ಬಳಿಕ ಗೆಜೆಟ್ ಅಧಿಸೂಚನೆ ಹೊರಡಿಸಲಾಗುತ್ತೆ. ಬಳಿಕ ಕೇಂದ್ರದ ಹಣಕಾಸು ಇಲಾಖೆಯು ಮಸೂದೆ ಕಾಯಿದೆಯಾಗಿ ಜಾರಿಯಾಗಲು ನಿಯಮ ರೂಪಿಸಬೇಕು. ನಿಯಮ ರೂಪಿಸಿದ ಬಳಿಕ ಈ ಮಸೂದೆಯು ಕಾಯಿದೆಯಾಗಿ ಜಾರಿಯಾಗಲಿದೆ. ಆದಾದ ಬಳಿಕ ವಾಣಿಜ್ಯ ಹಾಗೂ ಸಹಕಾರ ವಲಯದ ಬ್ಯಾಂಕ್​ಗಳ ಠೇವಣಿದಾರರಿಗೆ ಬ್ಯಾಂಕ್​ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಾಗಿಲು ಮುಚ್ಚಿದರೂ, 90 ದಿನಗಳೊಳಗಾಗಿ 5 ಲಕ್ಷ ರೂಪಾಯಿವರೆಗೂ ಠೇವಣಿ ವಿಮೆ ಹಣ ಸಿಗಲಿದೆ. ಬ್ಯಾಂಕ್ ಠೇವಣಿದಾರರು ನೆಮ್ಮದಿಯ ನಿಟ್ಟುಸಿರುಬಿಡಬಹುದು.

(Parliament Passes Deposit Insurance and Credit Gurantee Bill to Protect Investors Safety)

ಇದನ್ನೂ ಓದಿ: Retrospective Tax: ಪೂರ್ವಾನ್ವಯ ತೆರಿಗೆ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರ

ಇದನ್ನೂ ಓದಿ: ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆಯೇ ದಿವಾಳಿ ಸಂಹಿತೆಯ ಮಸೂದೆ-2021 ಅಂಗೀಕಾರ