Retrospective Tax: ಪೂರ್ವಾನ್ವಯ ತೆರಿಗೆ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರ
ಪೂರ್ವಾನ್ವಯ ತೆರಿಗೆ ತಿದ್ದುಪಡಿ ಮಸೂದೆಗೆ ಇಂದು (ಆಗಸ್ಟ್ 9, 2021) ರಾಜ್ಯಸಭೆಯಲ್ಲೂ ಅನುಮೋದನೆ ಸಿಕ್ಕಿದೆ. ಈ ಮೂಲಕ ವಿವಿಧ ಕಂಪೆನಿಗಳ ಜತೆಗೆ ಇರುವ ತೆರಿಗೆ ವ್ಯಾಜ್ಯ ಬಗೆಹರಿಸಿಕೊಳ್ಳುವುದಕ್ಕೆ ಸರ್ಕಾರಕ್ಕೆ ಅನುಕೂಲ ಆಗಿದೆ.
ತೆರಿಗೆ ತಿದ್ದುಪಡಿ ಮಸೂದೆಗೆ ಆಗಸ್ಟ್ 9ನೇ ತಾರೀಕಿನ ಸೋಮವಾರ ರಾಜ್ಯಸಭೆಯಲ್ಲೂ ಅಂಗೀಕಾರ ಆಗಿದೆ. ಇದರ ಫಲಿತಾಂಶ ಆಗಿ, ಪೂರ್ವಾನ್ವಯ ತೆರಿಗೆ ರದ್ದಾಗಿದೆ ಎಂದು ಸಿಎನ್ಬಿಸಿ-ಟಿವಿ18 ವರದಿ ಮಾಡಿದೆ. ಆಗಸ್ಟ್ 5ನೇ ತಾರೀಕಿನಂದು ಲೋಕಸಭೆಯಲ್ಲಿ ಈ ತಿದ್ದುಪಡಿ ಮಸೂದೆಗೆ ಅನುಮೋದನೆ ಸಿಕ್ಕಿತ್ತು. 2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಈ ಪೂರ್ವಾನ್ವಯ ತೆರಿಗೆ ಜಾರಿಗೆ ತರಲಾಗಿತ್ತು. ಈ ರೀತಿ ತೆರಿಗೆ ಹಾಕುವುದನ್ನು ವಿರೋಧಿಸಿ, ಕೇರ್ನ್ ಎನರ್ಜಿ, ವೊಡಾಫೋನ್ ಸೇರಿದಂತೆ ಕೆಲವು ಕಂಪೆನಿಗಳು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯಗಳ ಮೆಟ್ಟಿಲೇರಿ, ಅವುಗಳಿಗೆ ತೆರಿಗೆ ಮರುಪಾವತಿ ಮಾಡಬೇಕು ಎಂದು ಭಾರತ ಸರ್ಕಾರಕ್ಕೆ ಆ ಮಧ್ಯಸ್ಥಿಕೆ ಕೋರ್ಟ್ಗಳು ಆದೇಶ ನೀಡಿದ್ದವು.
ಟೆಲಿಕಾಂ ಆಪರೇಟರ್ ವೊಡಾಫೋನ್, ಎನರ್ಜಿ ಕಂಪೆನಿಯಾದ ಕೇರ್ನ್ಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ವ್ಯಾಜ್ಯದಲ್ಲಿ ಭಾರತ ಸರ್ಕಾರಕ್ಕೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ಈಗಿನ ಪ್ರಸ್ತಾವ ಮಾಡಲಾಗಿತ್ತು. 2012ರ ಮೇ ತಿಂಗಳ ಮುಂಚೆ ಪರೋಕ್ಷವಾಗಿ ಭಾರತೀಯ ಆಸ್ತಿಗಳನ್ನು ವರ್ಗಾವಣೆ ಮಾಡಿದ್ದರಿಂದ ಸಂಗ್ರಹವಾದ ತೆರಿಗೆಗಳನ್ನು ಮನ್ನಾ ಮಾಡಲಾಗುತ್ತದೆ. ಆದರೆ ಅದಕ್ಕಾಗಿ ಕೆಲವು ನಿರ್ದಿಷ್ಟ ಷರತ್ತುಗಳನ್ನು ಪೂರ್ತಿ ಮಾಡಬೇಕಾಗುತ್ತದೆ. ಜತೆಗೆ ಬಾಕಿ ಇರುವ ವ್ಯಾಜ್ಯಗಳನ್ನು ವಿಥ್ಡ್ರಾ ಮಾಡಲಾಗುತ್ತದೆ. ಮತ್ತು ಯಾವುದೇ ಹಾನಿಯನ್ನು ಕ್ಲೇಮ್ ಫೈಲ್ ಮಾಡುವುದಿಲ್ಲ ಎಂದು ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಈ ಪ್ರಕರಣಗಳಿಂದ ಭಾರತ ಸರ್ಕಾರದ ವಿರುದ್ಧ ವಿದೇಶಿ ಹೂಡಿಕೆದಾರರು ಹುಯಿಲೆಬ್ಬಿಸುವಂತೆ ಆಯಿತು ಹಾಗೂ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯೂ ಆಯಿತು. 2014ರಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಸೋತು, ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂತು. ಆ ನಂತರದಲ್ಲಿ, ನಾವು ಈ ಹಿಂದಿನ ತೆರಿಗೆಗಳನ್ನು ಈಗ ಹಾಕಲ್ಲ ಎಂದು ಮೋದಿ ಸರ್ಕಾರವು ಹೇಳಿಕೊಂಡು ಬಂದಿತು. ಆದರೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ವರ್ಷಗಳಿಂದ ಬಡಿದಾಡುತ್ತಾ ಬಂತು. ಕಳೆದ ತಿಂಗಳು (ಜುಲೈನಲ್ಲಿ) ಕೇರ್ನ್ ಎನರ್ಜಿ ಹೇಳಿದಂತೆ, ಅದರ ಅರ್ಜಿಯನ್ನು ಪ್ಯಾರಿಸ್ ಕೋರ್ಟ್ ಒಪ್ಪಿದೆ. ಆದ್ದರಿಂದ ಭಾರತ ಸರ್ಕಾರಕ್ಕೆ ಸೇರಿದಂಥ ಅಲ್ಲಿರುವ 20 ಮಿಲಿಯನ್ ಯುರೋ ಮೌಲ್ಯದ ಆಸ್ತಿಯನ್ನು ತಡೆಹಿಡಿಯಲಾಗಿದೆ. ತನ್ನ ಪ್ರಯತ್ನಕ್ಕೆ ಇದು ಅತಿದೊಡ್ಡ ವಿಜಯ ಎಂದು ಹೇಳಿಕೊಂಡ ಕೇರ್ನ್, ಸುದೀರ್ಘವಾದ ತೆರಿಗೆ ವ್ಯಾಜ್ಯದಲ್ಲಿ ಭಾರತೀಯ ಸರ್ಕಾರ ಬಿಲಿಯನ್ ಡಾಲರ್ ಹಾನಿ ಪಾವತಿಸಬೇಕು ಎಂದು ಹೇಳಿಕೊಂಡು ಬಂತು.
ಕೇರ್ನ್ ಕಂಪೆನಿಗೆ ಪಾವತಿಸಬೇಕಾದ ಮೊತ್ತ ಫ್ರೆಂಚ್ ಟ್ರಿಬ್ಯುನಲ್ ಆದೇಶ ಹೊರಡಿಸಿ, ಕೇಂದ್ರ ಸ್ಥಾನಗಳಲ್ಲೇ ಇರುವ ಭಾರತೀಯ ಸರ್ಕಾರಕ್ಕೆ ಸೇರಿದ ಆಸ್ತಿಗಳನ್ನು ತಡೆ ಹಿಡಿಯಬೇಕು. ಇದನ್ನು ಕೇರ್ನ್ ಕಂಪೆನಿಗೆ ಭಾರತ ಸರ್ಕಾರ ನೀಡಬೇಕಾದ ಮೊತ್ತಕ್ಕೆ ಗ್ಯಾರಂಟಿ ಎಂಬಂತೆ ಅಂದುಕೊಳ್ಳಬೇಕು ಎಂದಿದ್ದಾಗಿ ಹೇಳಲಾಗಿದೆ. ಅಂದಹಾಗೆ ಇದೇ ರೀತಿಯಲ್ಲಿ ಭಾರತದ ವಿರುದ್ಧವಾಗಿ ಕೇರ್ನ್ನಿಂದ ಅಮೆರಿಕ, ಬ್ರಿಟನ್, ನೆದರ್ಲೆಂಡ್ಸ್, ಸಿಂಗಾಪೂರ್ ಹಾಗೂ ಕೆನಡಾದಲ್ಲೂ ಕ್ಲೇಮ್ ನೋಂದಣಿ ಮಾಡಲಾಗಿದೆ. ಅಮೆರಿಕದಲ್ಲಿ ಏರ್ ಇಂಡಿಯಾಗೆ ಸೇರಿದ ಆಸ್ತಿಯನ್ನು ವಶಕ್ಕೆ ಪಡೆಯುವ ಯತ್ನ ನಡೆದಿತ್ತು.
ಕೇರ್ನ್ ಕಂಪೆನಿಯು ಭಾರತದಲ್ಲಿ ತೈಲ ಹಾಗೂ ಅನಿಲ ಕಾರ್ಯಾಚರಣೆಯನ್ನು ಭಾರತದಲ್ಲಿ ನಡೆಸುತ್ತದೆ. ಅದಕ್ಕೆ ಹಾನಿಯ ಪರಿಹಾರವಾಗಿ 120 ಕೋಟಿ ಅಮೆರಿಕನ್ ಡಾಲರ್, ಜತೆಗೆ ಬಡ್ಡಿ ಹಾಗೂ ವೆಚ್ಚವನ್ನು ನೀಡಬೇಕು ಎಂದು ಹೇಗ್ನಲ್ಲಿನ ಮಧ್ಯಸ್ಥಿಕೆ ಕೋರ್ಟ್ ಕಳೆದ ಡಿಸೆಂಬರ್ನಲ್ಲಿ ಆದೇಶ ಮಾಡಿತ್ತು. ಅದಕ್ಕೆ ಮುನ್ನ ಭಾರತ ಸರ್ಕಾರವು ವಿವಿಧ ಹಳೇ ತೆರಿಗೆಗಳ ವ್ಯಾಜ್ಯವನ್ನು ಬಡಿದಾಡುತ್ತಾ ಬಂದಿತ್ತು. ಕೇರ್ನ್ ಕಂಪೆನಿಗೆ ಒಟ್ಟು 170 ಕೋಟಿ ಅಮೆರಿಕನ್ ಡಾಲರ್ ಮೊತ್ತ ಬರಬೇಕಾಗಿದೆ ಎಂದಿದೆ.
ಭಾರತವು ಯು.ಕೆ. ಮೂಲದ ಕೇರ್ನ್ ಎನರ್ಜಿ ಕಂಪೆನಿಗೆ 100 ಕೋಟಿ ಅಮೆರಿಕನ್ ಡಾಲರ್ ಹಿಂತಿರುಗಿಸುವ ನಿರೀಕ್ಷೆ ಇದೆ. ತೆರಿಗೆ ಕಾನೂನು (Retrospective Tax) ತಿದ್ದುಪಡಿ ತಂದ ಮೇಲೆ ಈ ಬೆಳವಣಿಗೆ ಸಾಧ್ಯತೆ ಇದೆ. ವಿಶ್ಲೇಷಕರು ಹೇಳುವಂತೆ, ಈ ಕಾನೂನು ಪ್ರಕ್ರಿಯೆಯು ಕೇರ್ನ್ ಜತೆಗಿನ ಅಂತರರಾಷ್ಟ್ರೀಯ ತೆರಿಗೆ ಕದನವನ್ನು ಇತ್ಯರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. 120 ಕೋಟಿ ಡಾಲರ್ ಅನ್ನು ಕಂಪೆನಿಗಳಿಂದ ಈಗ ರದ್ದು ಮಾಡಿರುವ ತೆರಿಗೆ ನಿಯಮಗಳಿಂದ ವಸೂಲಿ ಮಾಡಲಾಗಿದೆ. ಬಾಕಿ ಇರುವ ವ್ಯಾಜ್ಯವನ್ನು ಕೈ ಬಿಡುವುದಕ್ಕೆ ಒಪ್ಪಿಕೊಂಡಲ್ಲಿ, ಜತೆಗೆ ಬಡ್ಡಿ ಮತ್ತು ದಂಡವನ್ನು ಬಿಟ್ಟಲ್ಲಿ ತೆರಿಗೆ ಪ್ರಾವಿಷನ್ ಮರುಪಾವತಿಸಲಾಗುತ್ತದೆ. 100 ಕೋಟಿ ಡಾಲರ್ನಷ್ಟು ಕೇರ್ನ್ಗೆ ಮತ್ತು 270 ಮಿಲಿಯನ್ ಡಾಲರ್ ವೊಡಾಫೋನ್ ಸೇರಿದಂತೆ ಇತರ ಕಂಪೆನಿಗಳಿಗೆ ಹೋಗುತ್ತದೆ.
ಇದನ್ನೂ ಓದಿ: Retrospective Tax: ವಿವಿಧ ಕಂಪೆನಿಗಳ ಜತೆಗಿನ ತೆರಿಗೆ ವ್ಯಾಜ್ಯ ಬಗೆಹರಿಸಿಕೊಳ್ಳುವ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು
ಇದನ್ನೂ ಓದಿ: Retrospective Tax: ಹಿಂದಿನ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಸ್ತಾವದ ಮಹತ್ವ ಏನು? ವಿವರಣೆ ಇಲ್ಲಿದೆ
(Tax Amendment Bill To Scrap Retrospective Tax Approved In Rajya Sabha)
Published On - 5:57 pm, Mon, 9 August 21