Retrospective Tax: ವಿವಿಧ ಕಂಪೆನಿಗಳ ಜತೆಗಿನ ತೆರಿಗೆ ವ್ಯಾಜ್ಯ ಬಗೆಹರಿಸಿಕೊಳ್ಳುವ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು

Retrospective Tax: ವಿವಿಧ ಕಂಪೆನಿಗಳ ಜತೆಗಿನ ತೆರಿಗೆ ವ್ಯಾಜ್ಯ ಬಗೆಹರಿಸಿಕೊಳ್ಳುವ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)

ವಿವಿಧ ಕಂಪೆನಿಗಳ ಜತೆಗಿನ ತೆರಿಗೆ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ತೆರಿಗೆ ಕಾನೂನಿಗೆ ತಿದ್ದುಪಡಿ ತಂದು ಲೋಕಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ.

TV9kannada Web Team

| Edited By: Srinivas Mata

Aug 06, 2021 | 3:01 PM

ನವದೆಹಲಿ: ಕೇಂದ್ರ ಸರ್ಕಾರವು ಮುಂದಿಟ್ಟಿರುವ ಹಿಂದಿನ ತೆರಿಗೆ ಬೇಡಿಕೆಗಳ ಕುರಿತು ಕೇರ್ನ್ ಎನರ್ಜಿ ಪಿಎಲ್‌ಸಿ, ವೊಡಾಫೋನ್ ಗ್ರೂಪ್ ಪಿಎಲ್‌ಸಿ ಮತ್ತು ಇತರ 15 ಕಂಪೆನಿಗಳ ಜತೆಗಿನ ವಿವಾದಗಳನ್ನು ಬಗೆಹರಿಸಿಕೊಳ್ಳಲು ನೆರವಾಗುವ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ, 2021ಕ್ಕೆ ಲೋಕಸಭೆಯು ಶುಕ್ರವಾರ ಅಂಗೀಕಾರ ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿದ್ದುಪಡಿಯ ಅಗತ್ಯದ ಬಗ್ಗೆ ಸಂಕ್ಷಿಪ್ತ ಹೇಳಿಕೆ ನೀಡಿದ ನಂತರ, ವಿರೋಧ ಪಕ್ಷಗಳ ಗದ್ದಲದ ನಡುವೆ ಮಸೂದೆಯನ್ನು ಅನುಮೋದಿಸಲಾಯಿತು. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಹಣಕಾಸು ಸಚಿವ- ದಿವಂಗತ ಅರುಣ್ ಜೇಟ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಆಲೋಚನೆ ಇದಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ಈ ಪ್ರಕರಣಗಳು ವಿವಿದ ಕಡೆಗಳಲ್ಲಿ ನ್ಯಾಯಾಂಗ ವ್ಯಾಪ್ತಿಗೆ ಬರುತ್ತವೆ. ಅಂಥ ಸನ್ನಿವೇಶದಲ್ಲಿ ಸರ್ಕಾರವು ಶಾಸನಾತ್ಮಕ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಮತ್ತು ನ್ಯಾಯಾಲಯಗಳಲ್ಲಿ ಅವುಗಳ ತಾರ್ಕಿಕ ತೀರ್ಮಾನಕ್ಕಾಗಿ ಕಾಯಬೇಕಾಯಿತು ಎಂದು ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದ್ದಾರೆ.

“ನಾವು ಆ ಭರವಸೆಯನ್ನು ಪೂರೈಸಲು ಕಾನೂನನ್ನು ತಿದ್ದುಪಡಿ ಮಾಡುತ್ತಿದ್ದೇವೆ,” ಎಂದು ಸೀತಾರಾಮನ್ ಹೇಳಿದ್ದಾರೆ. 2012ರ ಹಣಕಾಸು ಕಾಯ್ದೆ ನಿಬಂಧನೆಯು ಭಾರತೀಯ ಆಸ್ತಿಗಳನ್ನು ಒಳಗೊಂಡಂಥ ಸಾಗರದಾಚೆಯ ವಹಿವಾಟುಗಳನ್ನು ಮಾಡಲು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕಾನೂನಿನ ಬದಲಾವಣೆಗೆ ಮುನ್ನ ಜಾರಿಗೊಳಿಸಿದವು, ಭಾರತದಲ್ಲಿ ತೆರಿಗೆ ವಿಧಿಸುವುದನ್ನೂ ಒಳಗೊಂಡಂತೆ ವಿವಿಧ “ಸುದೀರ್ಘ ವ್ಯಾಜ್ಯದ ವಿಷಯ”ಗಳನ್ನು ಅವರು ಪ್ರಸ್ತಾವ ಮಾಡಿದ್ದಾರೆ.

ಪೂರ್ವಾನ್ವಯವಾಗಿ ತರುವುದರಲ್ಲಿ ನಂಬಿಕೆ ಇಲ್ಲ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮೋದಿ ಸರ್ಕಾರವು ಈ ಕಾನೂನನ್ನು ಪೂರ್ವಾನ್ವಯವಾಗಿ ತರುವುದರಲ್ಲಿ ನಂಬಿಕೆ ಇಲ್ಲ ಎಂದು ಹೇಳಿತ್ತು. ತಾತ್ವಿಕವಾಗಿ, ಮೋದಿ ಆಡಳಿತವು ವಂಚನೆ-ವಿರೋಧಿ ನಿಬಂಧನೆಯನ್ನು ಪೂರ್ವಾನ್ವಯವಾಗಿ ಬಳಸುವುದನ್ನು ಒಪ್ಪಲಿಲ್ಲ. ಆದರೆ ಪ್ರಕರಣ ನಡೆಯುತ್ತಿದ್ದಾಗ ತಿದ್ದುಪಡಿ ಕಡೆಗೆ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ. ಕಳೆದ ಸೆಪ್ಟೆಂಬರ್​ನಲ್ಲಿ ವೊಡಾಫೋನ್ ಪಿಎಲ್‌ಸಿಯೊಂದಿಗಿನ ವಿವಾದದ ಸಂದರ್ಭದಲ್ಲಿ ಮಧ್ಯಸ್ಥಿಕೆ ಕಡೆಯಿಂದ ತೀರ್ಮಾನ ಆಯಿತು. ಮತ್ತು ಡಿಸೆಂಬರ್​ನಲ್ಲಿ ಕೇರ್ನ್ ಎನರ್ಜಿ ಪಿಎಲ್‌ಸಿ ಬಗ್ಗೆ ತೀರ್ಮಾನ ಆಯಿತು. ಈ ಎರಡೂ ಪ್ರಕರಣಗಳಲ್ಲಿ ಭಾರತ ಸರ್ಕಾರಕ್ಕೆ ಹಿನ್ನಡೆ ಆಯಿತು.

ಹೊಸ ಮಸೂದೆಯು 17 ವಿವಾದಗಳಲ್ಲಿ ಪ್ರಸ್ತಾಪಿಸಲಾದ ತೆರಿಗೆ ಬೇಡಿಕೆಗಳನ್ನು ರದ್ದುಗೊಳಿಸುತ್ತದೆ. ತೆರಿಗೆ ಕ್ಲೇಮ್‌ಗಳನ್ನು ಕೈಬಿಡುವ ಷರತ್ತುಗಳಲ್ಲಿ ಬಾಕಿ ಇರುವ ದಾವೆಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ವಿವಾದಿತ ಪಾರ್ಟಿಗಳ ಕಡೆಯಿಂದ ವೆಚ್ಚ, ಹಾನಿ, ಬಡ್ಡಿ ಇತ್ಯಾದಿಗಳ ಕ್ಲೇಮ್ ಅನ್ನು ಕೈಬಿಡುವುದು ಸೇರಿವೆ. ವಿವಾದಗಳ ಸೌಹಾರ್ದಯುತ ಇತ್ಯರ್ಥಕ್ಕಾಗಿ ಈ ಪ್ರಕರಣಗಳಲ್ಲಿ ಪಾವತಿಸಿದ ಮೊತ್ತವನ್ನು ಯಾವುದೇ ಬಡ್ಡಿ ಇಲ್ಲದೆ ಸರ್ಕಾರವು ಮರುಪಾವತಿಸುತ್ತದೆ.

ಏನಿದು ವಿವಾದ, ಎಲ್ಲಿಂದ ಶುರುವಾಯಿತು? ಈ ವ್ಯಾಜ್ಯವು 2012ರಿಂದ ಶುರುವಾಗಿದೆ. ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವು ವೊಡಾಫೋನ್ ಮತ್ತು ಕೇರ್ನ್​ನಂಥ ಕೆಲವು ಕಂಪೆನಿಗಳಿಗೆ ಅದರ ಹಿಂದಿನ ವರ್ಷಗಳ ಕ್ಯಾಪಿಟಲ್ ಗೇಯ್ನ್ಸ್ (ಆಸ್ತಿಗಳ ಮಾರಾಟದಿಂದ ಬರುವ ಲಾಭವನ್ನು ಕ್ಯಾಪಿಟಲ್ ಗೇಯ್ನ್ಸ್ ಎನ್ನಲಾಗುತ್ತದೆ) ತೆರಿಗೆ ಹೇರುವುದಕ್ಕೆ ನಿರ್ಧರಿಸಿತು. ಈ ನಿರ್ಧಾರದ ವಿರುದ್ಧ ಪ್ರಕರಣವನ್ನು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೋರ್ಟ್​ಗೆ ಒಯ್ದು, ಆ ಕಂಪೆನಿಗಳು ಗೆಲ್ಲುವಂತಾದವು.

ಈ ಪ್ರಕರಣಗಳಿಂದ ವಿರುದ್ಧ ವಿದೇಶಿ ಹೂಡಿಕೆದಾರರು ಹುಯಿಲೆಬ್ಬಿಸುವಂತೆ ಆಯಿತು ಹಾಗೂ ಮಾಜಿ ಪ್ರಧಾನಿ ಮನ್​ಮೋಹನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯೂ ಆಯಿತು. 2014ರಲ್ಲಿ ಕಾಂಗ್ರೆಸ್​ ನೇತೃತ್ವದ ಸಮ್ಮಿಶ್ರ ಸರ್ಕಾರ ಸೋತು, ನರೇಂದ್ರ ಮೋದಿ ನೇತೃತ್ವದಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂತು. ಆ ನಂತರದಲ್ಲಿ, ನಾವು ಈ ಹಿಂದಿನ ತೆರಿಗೆಗಳನ್ನು ಈಗ ಹಾಕಲ್ಲ ಎಂದು ಮೋದಿ ಸರ್ಕಾರವು ಹೇಳಿಕೊಂಡು ಬಂದಿತು. ಆದರೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ವರ್ಷಗಳಿಂದ ಬಡಿದಾಡುತ್ತಾ ಬಂತು. ಕಳೆದ ತಿಂಗಳು (ಜುಲೈನಲ್ಲಿ) ಕೇರ್ನ್ ಎನರ್ಜಿ ಹೇಳಿದಂತೆ, ಅದರ ಅರ್ಜಿಯನ್ನು ಪ್ಯಾರಿಸ್ ಕೋರ್ಟ್ ಒಪ್ಪಿದೆ. ಆದ್ದರಿಂದ ಭಾರತ ಸರ್ಕಾರಕ್ಕೆ ಸೇರಿದಂಥ ಅಲ್ಲಿರುವ 20 ಮಿಲಿಯನ್ ಯುರೋ ಮೌಲ್ಯದ ಆಸ್ತಿಯನ್ನು ತಡೆಹಿಡಿಯಲಾಗಿದೆ. ತನ್ನ ಪ್ರಯತ್ನಕ್ಕೆ ಇದು ಅತಿದೊಡ್ಡ ವಿಜಯ ಎಂದು ಹೇಳಿಕೊಂಡ ಕೇರ್ನ್, ಸುದೀರ್ಘವಾದ ತೆರಿಗೆ ವ್ಯಾಜ್ಯದಲ್ಲಿ ಭಾರತೀಯ ಸರ್ಕಾರ ಬಿಲಿಯನ್ ಡಾಲರ್ ಹಾನಿ ಪಾವತಿಸಬೇಕು ಎಂದು ಹೇಳಿಕೊಂಡು ಬಂತು.

ಕೇರ್ನ್ ಕಂಪೆನಿಗೆ ಪಾವತಿಸಬೇಕಾದ ಮೊತ್ತ ಫ್ರೆಂಚ್ ಟ್ರಿಬ್ಯುನಲ್ ಆದೇಶ ಹೊರಡಿಸಿ, ಕೇಂದ್ರ ಸ್ಥಾನಗಳಲ್ಲೇ ಇರುವ ಭಾರತೀಯ ಸರ್ಕಾರಕ್ಕೆ ಸೇರಿದ ಆಸ್ತಿಗಳನ್ನು ತಡೆ ಹಿಡಿಯಬೇಕು. ಇದನ್ನು ಕೇರ್ನ್​ ಕಂಪೆನಿಗೆ ಭಾರತ ಸರ್ಕಾರ ನೀಡಬೇಕಾದ ಮೊತ್ತಕ್ಕೆ ಗ್ಯಾರಂಟಿ ಎಂಬಂತೆ ಅಂದುಕೊಳ್ಳಬೇಕು ಎಂದಿದ್ದಾಗಿ ಹೇಳಲಾಗಿದೆ. ಅಂದಹಾಗೆ ಇದೇ ರೀತಿಯಲ್ಲಿ ಭಾರತದ ವಿರುದ್ಧವಾಗಿ ಕೇರ್ನ್​ನಿಂದ ಅಮೆರಿಕ, ಬ್ರಿಟನ್, ನೆದರ್ಲೆಂಡ್ಸ್, ಸಿಂಗಾಪೂರ್ ಹಾಗೂ ಕೆನಡಾದಲ್ಲೂ ಕ್ಲೇಮ್ ನೋಂದಣಿ ಮಾಡಲಾಗಿದೆ. ಅಮೆರಿಕದಲ್ಲಿ ಏರ್​ ಇಂಡಿಯಾಗೆ ಸೇರಿದ ಆಸ್ತಿಯನ್ನು ವಶಕ್ಕೆ ಪಡೆಯುವ ಯತ್ನ ನಡೆದಿದೆ.

ಕೇರ್ನ್ ಕಂಪೆನಿಯು ಭಾರತದಲ್ಲಿ ತೈಲ ಹಾಗೂ ಅನಿಲ ಕಾರ್ಯಾಚರಣೆಯನ್ನು ಭಾರತದಲ್ಲಿ ನಡೆಸುತ್ತದೆ. ಅದಕ್ಕೆ ಹಾನಿಯ ಪರಿಹಾರವಾಗಿ 120 ಕೋಟಿ ಅಮೆರಿಕನ್ ಡಾಲರ್, ಜತೆಗೆ ಬಡ್ಡಿ ಹಾಗೂ ವೆಚ್ಚವನ್ನು ನೀಡಬೇಕು ಎಂದು ಹೇಗ್​ನಲ್ಲಿನ ಮಧ್ಯಸ್ಥಿಕೆ ಕೋರ್ಟ್​ ಕಳೆದ ಡಿಸೆಂಬರ್​ನಲ್ಲಿ ಆದೇಶ ಮಾಡಿತ್ತು. ಅದಕ್ಕೆ ಮುನ್ನ ಭಾರತ ಸರ್ಕಾರವು ವಿವಿಧ ಹಳೇ ತೆರಿಗೆಗಳ ವ್ಯಾಜ್ಯವನ್ನು ಬಡಿದಾಡುತ್ತಾ ಬಂದಿತ್ತು. ಕೇರ್ನ್​ ಕಂಪೆನಿಗೆ ಒಟ್ಟು 170 ಕೋಟಿ ಅಮೆರಿಕನ್ ಡಾಲರ್​ ಮೊತ್ತ ಬರಬೇಕಾಗಿದೆ ಎಂದಿದೆ.

ವೊಡಾಫೋನ್ ವಿರುದ್ಧವೂ ಇಂಥದ್ದೇ ಪ್ರಕರಣ ಇನ್ನು ಕಳೆದ ವರ್ಷದ ಸೆಪ್ಟೆಂಬರ್​ನಲ್ಲಿ ಇಂಥದ್ದೇ ಪ್ರಕರಣವನ್ನು ಭಾರತದ ವಿರುದ್ಧ ವೊಡಾಫೋನ್​ ಹೇಗ್​ನಲ್ಲಿ ಜಯಿಸಿದೆ. ಅದು 200 ಕೋಟಿ ಅಮೆರಿಕನ್ ಡಾಲರ್​ನ ತೆರಿಗೆ ಕ್ಲೇಮ್. ಭಾರತ ಮತ್ತು ನೆದರ್ಲೆಂಡ್ಸ್​ ಮಧ್ಯದ ಹೂಡಿಕೆ ಒಪ್ಪಂದದ ಉಲ್ಲಂಘನೆ ಆಗಿದೆ ಎಂದು ಟ್ರಿಬ್ಯುನಲ್ ಆದೇಶ ನೀಡಿತ್ತು. ಆದರೆ ಭಾರತ ಮಾತ್ರ ಈ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಿದೆ. ಇದರಿಂದಾಗಿ ಹೂಡಿಕೆದಾರರ ವಿಶ್ವಾಸ ಕುಸಿಯುತ್ತಿದ್ದು, ಹಿನ್ನಡೆ ಆಗುತ್ತಿದೆ.

ಈ ವಾರ ಶತ ಕೋಟ್ಯಧಿಪತಿ ಹಾಗೂ ವೊಡಾಫೋನ್ ಇಂಡಿಯಾದ ಜಂಟಿ ಸಹಭಾಗಿತ್ವದ ವೊಡಾಫೋನ್ ಐಡಿಯಾ ಕಾರ್ಯ ನಿರ್ವಾಹಕೇತರ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಹುದ್ದೆ ತ್ಯಜಿಸಿದ್ದಾರೆ. ಸರ್ಕಾರಕ್ಕೆ ಇರುವ ದೊಡ್ಡ ಮೊತ್ತದ ಬಾಕಿ ತೀರಿಸಿ, ಉಳಿಯುವ ಕಷ್ಟ ಆಗಬಹುದು ಎಂಬ ಕಾರಣಕ್ಕೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಹಿಂದಿನ ತೆರಿಗೆ ನೀತಿಗಳಿಗೆ ಸಂಬಂದಿಸಿದಂತೆ ಕೇಳಿಬರುತ್ತಿರುವ ಟೀಕೆ ಹಾಗೂ ನವೀಕೃತ ಸ್ಕ್ರೂಟನಿ ಹಿನ್ನೆಲೆಯಲ್ಲಿ ಕುಮಾರ ಮಂಗಲಂ ಬಿರ್ಲಾ ಜೂನ್​ನಲ್ಲಿ ಆದಿತ್ಯ ಬಿರ್ಲಾ ಸಮೂಹವು ವೊಡಾಫೋನ್​ನಲ್ಲಿ ಹೊಂದಿರುವ ಶೇ 27ರಷ್ಟು ಪಾಲನ್ನು ಮಾರಾಟ ಮಾಡುವುದಾಗಿ ಘೋಷಿಸಿದ್ದರು.

ಹಿಂದಿನ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ವೊಡಾಫೋನ್ ಹಾಗೂ ಕೇರ್ನ್​ ಮಾತ್ರ ಭಾರತ ಸರ್ಕಾರದ ಪಾಲಿನ ಸವಾಲಲ್ಲ. ಇದರ ಜತೆಗೆ Deutsche Telekom ಮತ್ತು ನಿಸ್ಸಾನ್ ಮೋಟಾರ್ ಕಂಪೆನಿಗಳು ಹಿಂದಿನ ತೆರಿಗೆಯಿಂದ ಪಾವತಿ ವ್ಯಾಜ್ಯದ ತನಕ ಸಮಸ್ಯೆಗಳಿವೆ.

ಇದನ್ನೂ ಓದಿ: Tv9 Kannada Digital Explainer: ವಿದೇಶದಲ್ಲಿರುವ ಭಾರತದ ಆಸ್ತಿಗಳ ವಶಕ್ಕೆ ಕೇರ್ನ್ ಎನರ್ಜಿ ಮುಂದಾಗಿರುವುದು ಏಕೆ?

ಇದನ್ನೂ ಓದಿ: Cairn Energy: ಫ್ರಾನ್ಸ್​ನಲ್ಲಿರುವ ಭಾರತ ಸರ್ಕಾರದ 12714 ಕೋಟಿ ರೂ. ಆಸ್ತಿ ಕೇರ್ನ್ ಎನರ್ಜಿ ವಶಕ್ಕೆ

(Lok Sabha Passes Amended Bill Of Tax Law To Settle Tax Dispute With Various Companies)

Follow us on

Related Stories

Most Read Stories

Click on your DTH Provider to Add TV9 Kannada