ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ; ರಾಜಕಾರಣಿಗಳ ಆಸೆಗೆ ಪಶ್ಚಿಮ ಘಟ್ಟ ಬಲಿ?
ನದಿ ಜೋಡಣೆ ಅಥವಾ ನದಿ ತಿರುವು ಯೋಜನೆಗಳ ಪರಿಕಲ್ಪನೆ ಹುಟ್ಟಿದ್ದೇ- ಆರ್ಥಿಕ ತಜ್ಞರು ಮತ್ತು ಸರಕಾರಿ ಅಧಿಕಾರಿಗಳ ಕಲಬರೆಕೆ ವಿಚಾರಧಾರೆಯಿಂದ. ಭೂ ಕುಸಿತ ಮತ್ತು ಅತಿ ವೃಷ್ಟಿಯಂತಹ ನೈಸರ್ಗಿಕ ವೈಪರಿತ್ಯದಿಂದ ನಲುಗಿರುವ ಪಶ್ಚಿಮ ಘಟ್ಟದಲ್ಲಿ ಬೇಡ್ತಿ ಮತ್ತು ಅಘನಾಶಿನಿ ನದಿತಿರುವು ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗಿರುವುದು ಅಲ್ಲಿಯ ಜನರ ಜೊತೆ ಸರಕಾರಕ್ಕೆ ಮುಂದೊಂದು ದಿನ ತಲೆ ನೋವಾಗುವುದು ಖಂಡಿತ.

ಶಿರಸಿಯ ಜಾತ್ರೆ ಮತ್ತು ನಿಂತುಹೋದ ಸಂಭ್ರಮ: ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿಯ ಮಾರಿಕಾಂಬಾ ಜಾತ್ರೆ ಇನ್ನೊಂದು ತಿಂಗಳೊಳಗೆ ಆರಂಭವಾಗಲಿದೆ. ಆದರೆ ಶಿರಸಿಯಲ್ಲಿ ಜಾತ್ರೆಯ ಸಂಭ್ರಮ ಮತ್ತು ಜೋಶ್ ಕಾಣುತ್ತಿಲ್ಲ. ಯಾಕೋ ಅವೆಲ್ಲ ಜನಮನದಿಂದ ದೂರವಾಗಿರುವಂತೆ ಕಾಣುತ್ತಿದೆ. ಎಲೆ ಚುಕ್ಕೆ ರೋಗದಿಂದ ಅಡಕೆ ಬೆಳೆ ಕೈಗೆ ಸಿಗದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟಕ್ಕೆ ಪರಿಹಾರ ನೀಡಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದಕ್ಕೆ ಬದಲಾಗಿ ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ಮುಂದಾಗಿ, ಈ ಭಾಗದ ಜನರ ಬದುಕಿಗೆ ಕೊಳ್ಳಿ ಇಡಲು ಮುಂದಾಗಿವೆ. ಜಾತ್ರೆಯ ಬಗ್ಗೆ ಜನರಲ್ಲಿ ಜೋಶ್ ಇಲ್ಲದಿರಲು ಇದು ಮೂಲ ಕಾರಣ.
ಅಭಿವೃದ್ಧಿಯ ಹೆಸರಿನಲ್ಲಿ ಕಡ್ಡಿಗೀರುವ ನೀರು
ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಡೆದ ಜಟಾಪಟಿಯ ಇತಿಹಾಸ ತುಂಬಾ ರೋಚಕವಾಗಿದೆ. ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕದಲ್ಲಿ ನಡೆದ ಹೋರಾಟಗಳ ಇತಿಹಾಸವನ್ನು ನೆನಪಿಸಿಕೊಂಡರೆ ಸಾಕು. ಪ್ರತಿಬಾರಿಯೂ, ‘ತಮಿಳುನಾಡಿಗೆ ಬಿಡಬೇಕಾದ ನೀರು’ ಎಂಬ ಮಾತು ಕೇಳಿದರೆ ಸಾಕು, ಕರ್ನಾಟಕದಲ್ಲಿ ಹೊತ್ತಿಕೊಂಡ ಬೆಂಕಿಯನ್ನು ನಾವೆಲ್ಲ ನೋಡಿದ್ದೇವೆ. ವಿಪರ್ಯಾಸವೆಂದರೆ, ಬೆಂಕಿ ನಂದಿಸಬೇಕಾದ ನೀರೇ ಬೆಂಕಿಯ ಕಿಡಿಯಾಗುತ್ತಿರುವುದು ಇತಿಹಾಸದ ವ್ಯಂಗ್ಯ. ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಜಾರಿಗೆ ಬಂದರೆ ಬೇರೆ ಯಾವುದೋ ರಾಜ್ಯಕ್ಕೆ ನೀರು ಹೋಗುವುದಿಲ್ಲ ಎಂಬ ವಾದದಲ್ಲಿ ಹುರುಳಿರುವುದು ನಿಜ. ವಾಸ್ತವದಲ್ಲಿ ಈ ಯೋಜನೆಗಳು ಪಕ್ಕದ ಜಿಲ್ಲೆಗೆ ನೀರು ಕೊಡುತ್ತವೆ. ಮೇಲ್ನೋಟಕ್ಕೆ, ನದಿ ತಿರುವು ಯೋಜನೆಗಳು ಉದಾತ್ತ ಧ್ಯೇಯ ಹೊಂದಿವೆ. ಆದರೆ, ಈ ಯೋಜನೆಗಳು ಜಾರಿಯಾದಲ್ಲಿ ಪಶ್ಚಿಮ ಘಟ್ಟದ ಕಾಡು, ಜಲವ್ಯವಸ್ಥೆ ಮತ್ತು ದೇಸಿ ಸಂಸ್ಕೃತಿಗೆ ಕೊಡಲಿಯೇಟು ನೀಡುವುದರಲ್ಲಿ ಸಂಶಯವಿಲ್ಲ. 2019 ರಲ್ಲಿ ಕರ್ನಾಟಕ ವಿಧಾನ ಸಭೆಗೆ ನೀಡಿದ ಉತ್ತರದಲ್ಲಿ ಸರಕಾರವೇ ಹೇಳಿದೆ-ಸರಕಾರದ ಹಲವಾರು ಯೋಜನೆಗಳಿಗೆ, ಉತ್ತರ ಕನ್ನಡ ಜಿಲ್ಲೆಯೊಂದೇ 1.25 ಲಕ್ಷ ಹೆಕ್ಟೇರ್ ಜಮೀನನ್ನು ಇಲ್ಲೀವರೆಗೆ ನೀಡಿದೆ. ಅದರಲ್ಲಿ ಅರಣ್ಯವೆಷ್ಟು ಎನ್ನುವ ವಿವರ ಈಗ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗಳನ್ನು ಪರಾಮರ್ಶಿಸಬೇಕು ಮತ್ತು ಉತ್ತರ ಕನ್ನಡ ಜಿಲ್ಲೆಯ ಜನ ಈ ಯೋಜನೆಗಳ ವಿರುದ್ಧ ಚಳುವಳಿ ಪ್ರಾರಂಬಿಸಿದ್ದು ಇದೇ ಕಾರಣಕ್ಕೆ. ಕಳೆದ ಭಾನುವಾರ ಶಿರಸಿಯಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಜನರು ಸೇರಿ ಶಾಂತಿಯುತವಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಶಾಂತಿಯುತ ಹೋರಾಟ ಮತ್ತು ಮಾಧ್ಯಮಗಳ ಮೌನ
ನದಿ ತಿರುವು ಯೋಜನೆ ವಿರೋಧಿ ಚಳುವಳಿ ಅತ್ಯಂತ ಶಾಂತಿಯುತವಾಗಿ ನಡೆಯುತ್ತಿದೆ. ಬಹುಶಃ ಇದೇ ಕಾರಣಕ್ಕಾಗಿ ಆಡಳಿತದಲ್ಲಿರುವವರು ಈ ಚಳುವಳಿಯನ್ನು ಗಂಭೀರವಾಗಿ ಪರಿಗಣಿಸದ ಅಪಾಯವೂ ಹೆಚ್ದೆಚಾಗಿದೆ. ಸೋಮವಾರದ ಕೆಲ ಇಂಗ್ಲಿಷ್ ದಿನಪತ್ರಿಕೆಗಳ ಬೆಂಗಳೂರು ಆವೃತ್ತಿಗಳನ್ನು ಗಮನಿಸಿದರೆ, ರವಿವಾರ ನಡೆದ ಈ ಬೃಹತ್ ಪ್ರತಿಭಟನಾ ರಾಲಿಯ ಕುರಿತು ಒಂದು ಸಾಲು ಸುದ್ದಿಯೂ ಕಾಣುವುದಿಲ್ಲ. ಒಂದೊಮ್ಮೆ ಈ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಘೋಷಣೆಗಳು ಕೇಳಿಬಂದಿದ್ದರೆ, ಇದೇ ಪತ್ರಿಕೆಗಳು ಮುಖಪುಟದಲ್ಲೇ ಸುದ್ದಿಯನ್ನು ಪ್ರಕಟಿಸುತ್ತಿದ್ದವೇನೋ? ಚಳುವಳಿಯ ತೀವ್ರತೆ ಸಂಪಾದಕರ ಗಮನಕ್ಕೂ ಬಾರದಿರುವಾಗ, ಆಡಳಿತ ನಡೆಸುವವರಿಗೆ ಅದು ತಲುಪುವುದು ಹೇಗೆ ಎಂಬ ಪ್ರಶ್ನೆ ಸಹಜ.
ಡಿಪಿಆರ್: ಪ್ರಶ್ನೆ ಕೇಳಬೇಕಾದ ಹಂತ
ತುಂಬಾ ಜನರಿಗೆ ಈ ಯೋಜನೆ ಎಲ್ಲಿವರೆಗೆ ಬಂದು ನಿಂತಿದೆ ಎನ್ನುವ ಕುರಿತಾಗಿ ಗೊಂದಲ ಇದ್ದಂತಿದೆ. ಬೇಡ್ತಿ ನದಿ ತಿರುವು ಯೋಜನೆಯ ಬಗ್ಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಒಪ್ಪಂದ ಮಾಡಿಕೊಂಡಿವೆ ಮತ್ತು ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಕೆಳಗೆ ಕೆಲಸ ಮಾಡುವ ಒಂದು ಸಂಸ್ಥೆ ಈ ಕೆಲಸವನ್ನು ಮಾಡಲಿದೆ. ಕೇಂದ್ರ ಸರ್ಕಾರದ ಏಜೆನ್ಸಿಯಿಂದ ತಯಾರಾಗುತ್ತಿರುವ ಡಿಪಿಆರ್ ಅನ್ನು ಹೇಗೆ ಪ್ರಶ್ನಿಸಬೇಕು ಎಂಬುದರ ಬಗ್ಗೆ ಜಿಲ್ಲೆಯ ಜನ ಗಂಭೀರ ಚರ್ಚೆ ನಡೆಸಬೇಕಾಗಿದೆ. ಶರಾವತಿ ನದಿ ತಿರುವು ಯೋಜನೆ, ಒಂದು ಹಂತ ಹಿಂದಿದೆ.
ಡಿಪಿಆರ್ ಎಲ್ಲಿ ತಯಾರಾಗುತ್ತದೆ? ಯಾರು ತಯಾರಿಸುತ್ತಾರೆ? ಅದರಲ್ಲಿ ನೆಲದ ನೀರಿನ ಹರಿವಿನ ವಾಸ್ತವದ ಮಾಹಿತಿ ಎಷ್ಟಿರಬಹುದು? ಅಧಿಕಾರಿಗಳು ನಿಜಕ್ಕೂ ಹಳ್ಳಿ ಹಳ್ಳಿಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಾರೆಯೇ, ಅಥವಾ ದೆಹಲಿಯಲ್ಲಿ ಕುಳಿತು ಉಪಗ್ರಹ ಚಿತ್ರಗಳು ಮತ್ತು ಗಣಿತ ಸೂತ್ರಗಳ ಆಧಾರದಲ್ಲಿ ಮುಳುಗಡೆ ಪ್ರದೇಶಗಳ ಲೆಕ್ಕಾಚಾರ ಮಾಡುತ್ತಾರೆಯೇ? ಈ ಪ್ರಕ್ರಿಯೆಯಲ್ಲಿರುವ ಆಗಬಹುದಾದ ಎಲ್ಲ ಎಡವಟ್ಟುಗಳನ್ನು ತಾರ್ಕಿಕವಾಗಿ, ಕಾನೂನು ಮಾರ್ಗದಲ್ಲಿ ಪ್ರಶ್ನಿಸಿ, ಡಿಪಿಆರ್ ಹಂತದಲ್ಲೇ ಯೋಜನೆಯನ್ನು ತಡೆಹಿಡಿಯುವ ಪ್ರಯತ್ನಕ್ಕೆ ಮೊದಲ ಆದ್ಯತೆ ಆಗಬೇಕು. ಮತ್ತು ಡಿಪಿಆರ್ ಮಾಡುವವರು ಜಿಲ್ಲೆಗೆ ಬಂದಿಲ್ಲ ಎಂದಾದರೇ ಆಗ ಅದನ್ನು ಪ್ರಶ್ನಿಸಲೇಬೇಕು.
ಒಮ್ಮೆ ಡಿಪಿಆರ್ ಮಾಡುವ ತಂಡ ಬರುವುದೇ ಆದಲ್ಲಿ, ಮೇ ತಿಂಗಳಿನಲ್ಲಿ ಅವರು ಕ್ಷೇತ್ರ ಪ್ರವಾಸಕ್ಕೆ ಬರಲಿ. ಬರುವ ಟೀಂನವರು ಮಿನಲರ್ ವಾಟರ್ ಬಾಟಲಿ ಹಿಡಿದುಕೊಂಡು ಈ ಎರಡು ನದಿ ನೀರಿನ ಪಾತ್ರವನ್ನು, ನೀರಿನ ಲಭ್ಯತೆಯನ್ನು ಪರಾಮರ್ಶೆ ಮಾಡಲಿ. ಜಿಲ್ಲೆಯ ಎಲ್ಲೆಡೆ ಅವರು ಓಡಾಡಿದರೆ ‘ದೂಧ್ ಕಾ ದೂಧ್, ಪಾನಿ ಕಾ ಪಾನಿ,’ ಆಗುವುದು ಖಂಡಿತ. ಪ್ರಾಯಶಃ ಮೇ ತಿಂಗಳಿನಲ್ಲಿ ಅವರು ಬಂದರೆ, ಅವರು ತರುವ ಮಿನರಲ್ ಬಾಟಲಿಗಳಲ್ಲಿ ಹೆಚ್ಚು ನೀರು ಸಿಗುತ್ತದೆಯೇ ಹೊರತು ಈ ನದಿಗಳಲ್ಲಲ್ಲ ಎಂಬ ಸತ್ಯಾಂಶ ಅವರ ಗಮನಕ್ಕೆ ಬರುತ್ತದೆ.
ಪತ್ರ ಚಳುವಳಿ: ಸಂಭಾಷಣೆಗೆ ದಾರಿ
ಬಹಳ ಜನರಿಗೆ, ಭಾನುವಾರದ ಸಭೆಯ ನಂತರ ಮುಂದೇನು ಎನ್ನುವ ಪ್ರಶ್ನೆ ಇದೆ. ಕಾರ್ಪೋರೇಟ್ ವಲಯ ಅಥವಾ ಅಮೇರಿಕವೋ ಯುರೋಪ್ನ ದೇಶಗಳ ಕೃಪಾಪೋಷಿತ ಚಳುವಳಿಗಲ್ಲಿ, ಸದಾ ಹಣ ಹರಿಯುತ್ತದೆ, ಹಾಗಾಗಿ ಅಲ್ಲಿ ಹೋರಾಟ ತನ್ನ ತೀವ್ರತೆ ಕಳೆದುಕೊಳ್ಳದಂತೆ ತಂತ್ರ ರೂಪಿಸಲಾಗುತ್ತದೆ. ಬೇಡ್ತಿ-ಅಘನಾಶಿನಿ ಚಳುವಳಿ ಜನರಿಂದ ಜನರಿಗಾಗಿ ಮಾಡುತ್ತಿರುವ ಚಳುವಳಿ. ಹಾಗಾಗಿ ಈ ಚಳುವಳಿಯ ತೀವ್ರತೆಯನ್ನು ಕಾಪಾಡುವ ಅಗತ್ಯ ಇದೆ. ಇದರ ಭಾಗವಾಗಿ ವಿವಿಧ ತರದ ತಂತ್ರಗಳನ್ನು ರೂಪಿಸಬಹುದು.
ಇಂದಿನ ಕಾಲದಲ್ಲಿ ಪತ್ರ ಬರೆಯುವ ಹೋರಾಟ ಹಳೆಯದಾಗಿ ಕಾಣಬಹುದು. ಆದರೆ ಅಹಿಂಸಾತ್ಮಕ ಹೋರಾಟದಲ್ಲಿ ಸಾರ್ವಜನಿಕರನ್ನು ಜಾಗೃತಗೊಳಿಸಲು ಇದು ಇನ್ನೂ ಒಂದು ಮಾರ್ಗ. ಈ ಉಪಕ್ರಮದಿಂದ ಬದಲಾವಣೆ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಪತ್ರ ಚಳುವಳಿಯ ಮೂಲಕ ಈ ಭಾಗದ ಜನರ ಮಿಡಿತ ಹೊರಜಗತ್ತಿಗೆ ತಲುಪಬಹುದು. ಅದೇ ರೀತಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್ ಮಾಡಿ, ಶಿಷ್ಟ ಭಾಷೆಯಲ್ಲಿ ಲಕ್ಷಾಂತರ ಮನವಿಗಳು ತಲುಪಿದರೆ, ಕನಿಷ್ಠ ಚರ್ಚೆಗೆ ದಾರಿ ತೆರೆದುಕೊಳ್ಳುವ ಸಾಧ್ಯತೆ ಇದೆ. ಮಾತಾಡದ ಪಶ್ಚಿಮ ಘಟ್ಟದ ಕಾಡಿನ ಧ್ವನಿ, ಈ ಮೂಲಕ ಹೊರಜಗತ್ತಿಗೆ ತಲುಪಬಹುದು.
ಖಾಸಗಿ ಸದಸ್ಯರ ವಿಧೇಯಕ: ರಾಜಕೀಯ ಸಂಕೇತ
ಪತ್ರ ಚಳುವಳಿಯಂತೆ ಇನ್ನೊಂದು ತಂತ್ರವನ್ನು ಜನ ತಮ್ಮ ಹೋರಾಟದ ಭಾಗವನ್ನಾಗಿ ಮಾಡಿಕೊಳ್ಳಬಹುದು: ಭವಿಷ್ಯದಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜಲ, ವಿದ್ಯುತ್ ಅಥವಾ ಇತರೆ ಮೆಗಾ ಯೋಜನೆಗಳನ್ನು ತರುವುದಿಲ್ಲ ಎಂಬ ಉದ್ದೇಶದೊಂದಿಗೆ, ಖಾಸಗಿ ಸದಸ್ಯರ ವಿಧೇಯಕವನ್ನು ವಿಧಾನಮಂಡಲ ಹಾಗೂ ಸಂಸತ್ತಿನಲ್ಲಿ ಮಂಡಿಸುವುದು. ಈ ಮೂಲಕ ಒಂದು ಸಂಕಥನವನ್ನು ರಾಷ್ಟ್ರ ಮಟ್ಟದಲ್ಲಿ ನಿರೂಪಿಸಲು ಸಾಧ್ಯವಾಗಬಹುದು. ಇದನ್ನು ಮಂಡಿಸುವ ಉದ್ದೇಶ, ಖಾಸಗೀ ವಿಧೇಯಕಕ್ಕೆ ಅನುಮತಿ ಸಿಗುತ್ತದೆ ಎಂಬ ನಿರೀಕ್ಷೆಯಿಂದಲ್ಲ. ಆದರೆ ಪಕ್ಷಭೇದ ಮರೆತು ಈ ವಿಷಯದ ಮೇಲೆ ಚರ್ಚೆ ನಡೆಯಲೆಂಬ ಉದ್ದೇಶದಿಂದ ಈ ಹೆಜ್ಜೆ ಮಹತ್ವ ಪಡೆದುಕೊಳ್ಳುತ್ತದೆ. ಇದರಿಂದ ಇಡೀ ರಾಜ್ಯದಲ್ಲಿ ಚರ್ಚೆ ಆರಂಭವಾಗಿ, ಜನಬೆಂಬಲ ವಿಸ್ತರಿಸುವ ಸಾಧ್ಯತೆ ಇದೆ.
“ಸ್ವಾಮೀಜಿ ಹಿಂದೆ ನಾವಿದ್ದೇವೆ ” ಎಂಬ ರಾಜಕೀಯ ನಾಯಕರ ಘೋಷವಾಕ್ಯ
‘ಚಳುವಳಿಯ ನೇತೃತ್ವ ವಹಿಸಿರುವ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ಹಿಂದೆ ನಾವಿದ್ದೇವೆ,’ ಎಂದು ಎಲ್ಲ ಜನಪ್ರತಿನಿಧಿಗಳು ಹೇಳಿರುವುದು, ಅವರ ರಾಜಕೀಯದ ಭವಿಷ್ಯ ಕಾಪಾಡಲು ತೆಗೆದುಕೊಂಡ ನಿಲುವು. ಆದರೆ ಅದು ಕಾರ್ಯರೂಪಕ್ಕೆ ಬರುವ ಭರವಸೆ ಅಲ್ಲ. ಒಂದು ಕ್ಷಣ ಹೀಗೆ ವಿಚಾರ ಮಾಡೋಣ: ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲವೆಂಬೆ ಕಾರಣವಿಟ್ಟುಕೊಂಡು, ಎಲ್ಲ ಜನಪ್ರತಿನಿಧಿಗಳು ರಾಜೀನಾಮೆ ನೀಡಬೇಕೆಂದು ಸ್ವಾಮೀಜಿಗಳು ಸೂಚಿಸಿದರೆ ಆಗ ಜನ ಪ್ರತಿನಿಧಿಗಳು ಅದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಬಲ್ಲರೇ? ಅವರು ಆ ಹೆಜ್ಜೆ ಇಡಲಾರರು ಎಂಬುದು ಎಲ್ಲರಿಗೂ ತಿಳಿದ ಸತ್ಯ. ಪಕ್ಷದ ಹೈಕಮಾಂಡ್ ಅದಕ್ಕೆ ಅವಕಾಶ ನೀಡುವುದಿಲ್ಲ. ಆದ್ದರಿಂದ “ಸ್ವಾಮೀಜಿ ಹೇಳಿದ್ದನ್ನು ಮಾಡುತ್ತೇವೆ” ಎನ್ನುವ ಮಾತು ಹೊಣೆಗಾರಿಕೆಯನ್ನು ಮುಂದೂಡುವ ತಂತ್ರ ಮಾತ್ರ.
ಸ್ಥಳೀಯ ಜನಪ್ರತಿನಿಧಿಗಳು ಮತ್ತು ನಂಬಿಕೆಯ ಬಿಕ್ಕಟ್ಟು
80ರ ದಶಕದಿಂದಲೇ ಬೇಡ್ತಿ ಹಾಗೂ ನಂತರ ಬೇಡ್ತಿ–ಅಘನಾಶಿನಿ ನದಿಗಳ ಮೇಲೆ ಅಭಿವೃದ್ಧಿಯ ಹೆಸರಿನ ತೂಗುಗತ್ತಿ ಅಡ್ಡಾಡುತ್ತಲೇ ಇದೆ. ಗುಂಡೂರಾವ್ ಹಾಗೂ ಬಂಗಾರಪ್ಪ ಅವರ ಕಾಲದಲ್ಲಿ ಜನರ ಧ್ವನಿಗೆ ಮನ್ನಣೆ ನೀಡಿ ಯೋಜನೆಗಳನ್ನು ಕೈಬಿಟ್ಟಿದ್ದು ಈಗ ಇತಿಹಾಸ. ಇಂದಿನ ಪರಿಸ್ಥಿತಿ ಬೇರೆಯೇ. ಜನರ ಒತ್ತಾಯಕ್ಕೆ ಮನ್ನಣೆ ಸಿಗುತ್ತದೆ ಎಂಬ ನಂಬಿಕೆ ಕ್ಷೀಣಿಸುತ್ತಿದೆ. ಚುನಾವಣೆಯ ವೇಳೆ ಜನರ ಸಂಕಷ್ಟಕ್ಕೆ ಸ್ಪಂದಿಸುವೆವು ಎಂದು ಹೇಳಿ, ಅಧಿಕಾರಕ್ಕೆ ಬಂದ ಬಳಿಕ ಅದೇ ಜನರ ಮಾತನ್ನು ಕಡೆಗಣಿಸುವ ರಾಜಕಾರಣಿಗಳ ನಡತೆ, ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುತ್ತಿದೆ. ನವೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯದ ಕುರಿತು ಗಟ್ಟಿ ಧ್ವನಿ ಎತ್ತಬಹುದಾಗಿದ್ದರೂ, ಉತ್ತರ ಕನ್ನಡದ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಿರುವುದು, ಜನರಲ್ಲಿ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅಥವಾ ದೆಹಲಿಯಲ್ಲಿ ಆದ ಡಿಪಿಆರ್ ಒಪ್ಪಂದಕ್ಕೆ ಯಾರೋಬ್ಬರೂ ತೀವ್ರವಾಗಿ ವಿರೋಧಿಸಲಿಲ್ಲ. ಇದನ್ನು ನೋಡಿದಾಗ, ಜನ ಪ್ರತಿನಿಧಿಗಳ ಇಬ್ಬಂದಿತನ ಗೊತ್ತಾಗುತ್ತದೆ. ಉತ್ತರ ಕನ್ನಡದ ಜನ ಮತ್ತು ಅಲ್ಲಿನ ಜನ ಪ್ರತಿನಿಧಿಗಳ ನಡುವಿರುವ ಕಂದಕಕ್ಕೆ ಇನ್ನೂ ಹಲವಾರು ಕಾರಣಗಳಿದ್ದರೂ, ಸಮಯಕ್ಕೆ ಸರಿಯಾಗಿ ದನಿ ಎತ್ತದೆ, ಊರಲ್ಲಿ ಹುಲಿಯಾಗಿ ಬೆಂಗಳೂರು ಮತ್ತು ದೆಹಲಿಯಲ್ಲಿ ಲೆಕ್ಕಕ್ಕೂ ಇಲ್ಲದ ಆಟಕ್ಕೂ ಇಲ್ಲದ ಪ್ರತಿನಿಧಿಗಳಾಗಿ ಅವರು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ಜನ ನಾಯಕತ್ವದ ಜವಾಬ್ದಾರಿ
ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಭವಿ ರಾಜಕಾರಣಿ. ಒಂದು ಪತ್ರ ನೀಡಿ ಫೋಟೋಗೆ ನಿಲ್ಲುವುದು ಕರ್ತವ್ಯಪಾಲನೆ ಅಲ್ಲ ಎಂಬುದೂ ಅವರಿಗೆ ತಿಳಿದಿದೆ. ಕೇಂದ್ರದ ಹಿರಿಯ ಮಂತ್ರಿಗಳೊಂದಿಗೆ ಗಂಭೀರ ಚರ್ಚೆ ನಡೆಸಿ, ನೆಲದ ವಾಸ್ತವ ಅರಿಯುವ ತಂಡವನ್ನು (fact finding committee) ಕಳುಹಿಸುವಂತೆ ಮಾಡಬೇಕಾದ್ದು ಅವರ ಜವಾಬ್ದಾರಿ. ಅದೇ ರೀತಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ನಡತೆಯೂ ಪ್ರಶ್ನೆಗೆ ಒಳಪಟ್ಟಿದೆ. ಡಿಪಿಆರ್‌ಗೆ ಒಪ್ಪಿಗೆ ನೀಡಿದ ಪ್ರಕ್ರಿಯೆಯಲ್ಲಿ ತಮ್ಮ ಸರಕಾರದ ಪಾತ್ರ ಏನು ಎಂಬುದನ್ನು ಅವರು ಸ್ಪಷ್ಟಪಡಿಸಬೇಕಿದೆ. ಇಲ್ಲದಿದ್ದರೆ, ಇದು ಜಿಲ್ಲೆಯ ಜನರ ಪರವಾಗಿ ಮಾಡುವ ಹೋರಾಟಕ್ಕಿಂತ, ಒಂದು ರಾಜಕೀಯ ನಿರ್ವಹಣೆಯಂತೆ ಕಾಣುತ್ತದೆ.
ಬೊಮ್ಮಾಯಿ ಮತ್ತು ನದಿ ತಿರುವಿನ ರಾಜಕೀಯ
ಹಾಗೆ ನೋಡಿದರೆ, ನದಿ ತಿರುವು ಯೋಜನೆಗಳಿಗೆ ಚಾಲನೆ ಸಿಗಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮುಖ ರೂವಾರಿಯಾಗಿ ಕಾಣಿಸುತ್ತಾರೆ. ಒಬ್ಬ ರಾಜಕಾರಣಿಯ ವೈಯಕ್ತಿಕ ರಾಜಕೀಯದ ಲೆಕ್ಕಾಚಾರಕ್ಕೆ ಇಡೀ ಪಶ್ಚಿಮ ಘಟ್ಟವೇ ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾಗುತ್ತಿರುವುದು ಗಂಭೀರ ವಿಚಾರ. ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಗೆಲುವು ಸಾಧಿಸಿದ ಬೊಮ್ಮಾಯಿಯವರು, ಉಪಚುನಾವಣೆಯಲ್ಲಿ ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬರಲು ವಿಫಲರಾದ ಕ್ಷಣದಲ್ಲೇ, ತಮ್ಮ ರಾಜಕೀಯ ಪ್ರಭಾವ ಕ್ಷೀಣಿಸುತ್ತಿದೆ ಎಂಬುದನ್ನು ಅರಿತುಕೊಂಡರು. ಅಂದಿನಿಂದಲೇ, ತಮ್ಮ ರಾಜಕೀಯ ಕುಸಿತಕ್ಕೆ ಪರಿಹಾರ ಹುಡುಕುವ ಪ್ರಯತ್ನವನ್ನು ಅವರು ಪ್ರಾರಂಭಿಸಿದ್ದಾರೆ ಮತ್ತು ನದಿ ತಿರುವು ಯೋಜನೆ ಕೂಡ ಅದರದೇ ಭಾಗ ಎಂಬುದು ಸ್ಪಷ್ಟವಾಗುತ್ತದೆ.
2020ರ ಬಜೆಟ್‌ನಲ್ಲಿ ಉಲ್ಲೇಖವಾಗಿದ್ದ ನದಿ ತಿರುವು ಯೋಜನೆಯ ಪ್ರಸ್ತಾವಕ್ಕೆ ಮರುಜೀವ ನೀಡುವ ಅವರ ಪ್ರಯತ್ನ ಕಾಣುತ್ತಿದೆ. ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುವ ನಾಯಕರು ತಮ್ಮ ಕನಸುಗಳನ್ನು ನನಸು ಮಾಡಲು ಹಲವಾರು ರಾಜಕೀಯ ಪಟ್ಟು ಹಾಕುತ್ತಾರೆ. ಇದು ಹೊಸದಲ್ಲ. ಸಮಾಜ ಕೂಡ ಕೆಲವೊಂದು ಮಟ್ಟಿಗೆ ಇಂತಹ ಪಟ್ಟಿನಿಂದ ಸಮಾಜಕ್ಕೆ ಆದ ಕಷ್ಟ ಸಹಿಸಿಕೊಂಡು ಉದಯೋನ್ಮುಖ ರಾಜಕೀಯ ನಾಯಕರುಗಳಿಗೆ ಅಭಯ ಹಸ್ತ ನೀಡಿ ಬೆಳೆಸಿದ ಇತಿಹಾಸ ನಮ್ಮಲ್ಲಿದೆ. ಆದರೆ ರಾಜಕೀಯವಾಗಿ ಸೋಲಿನ ಹಂತ ತಲುಪಿದ ನಾಯಕರು, ತಮ್ಮ ಅಸ್ತಂಗತದ ಭಯದಲ್ಲಿ ಕೈಗೊಳ್ಳುವ ಅಸಂಗತ ನಿರ್ಧಾರಗಳಿಗೆ ಇಡೀ ಸಮಾಜವೇ ಭಾರೀ ಬೆಲೆ ತೆರಬೇಕಾದ ಉದಾಹರಣೆಗಳನ್ನು ನಾವು ಈ ಹಿಂದೆ ಸಾಕಷ್ಟು ನೋಡಿದ್ದೇವೆ. ಇಲಿ ಕೂಡ ಅಂತದೇ ಮಾದರಿಯೊಂದು ಪುನರಾವರ್ತನೆಯಾಗುತ್ತಿರುವ ಲಕ್ಷಣ ಕಾಣುತ್ತಿದೆ.
2020ರ ಬಜೆಟ್‌ನಲ್ಲಿ ಉಲ್ಲೇಖಗೊಂಡಿದ್ದ ನದಿ ತಿರುವು ಯೋಜನೆಗೆ ಈಗ ಮರುಹುಟ್ಟು ನೀಡುವ ಮೂಲಕ, ತಮ್ಮ ಮುಳುಗುತ್ತಿರುವ ರಾಜಕೀಯ ದೋಣಿಯನ್ನು ದಡ ಸೇರಿಸುವುದಷ್ಟೇ ಅಲ್ಲ, ಈ ಭಾಗದಲ್ಲಿ ಮತ್ತೆ ಜನನಾಯಕನಾಗಿ ಮರುಪ್ರವೇಶಿಸುವ ರಾಜಕೀಯ ತಂತ್ರವನ್ನು ಬೊಮ್ಮಾಯಿ ಹೂಡಿದ್ದಾರೆ. ಈ ಪ್ರಯತ್ನಕ್ಕೆ ಅಪ್ರತ್ಯಕ್ಷವಾಗಿ ನೆರವಾಗುತ್ತಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಇವರಿಬ್ಬರ ನಡುವೆ ವೈಯಕ್ತಿಕ ನಿಕಟತೆ ಇದೆ ಎಂಬ ಮಾತು ಹೊಸದೇನಲ್ಲ.
ತಮ್ಮ ಹುಟ್ಟೂರಾದ ಧಾರವಾಡವನ್ನು ಬಿಟ್ಟು, ಕರ್ಮಭೂಮಿಯಾಗಿ ಹಾವೇರಿಯನ್ನು ಆಯ್ಕೆ ಮಾಡಿಕೊಂಡು, ಪಕ್ಕದ ಗದಗ ಹಾಗೂ ರಾಯಚೂರು ಜಿಲ್ಲೆಗಳ ಜನರಿಗೆ ನೀರು ಒದಗಿಸಿದ ಹರಿಕಾರ ಎಂಬ ಕೀರ್ತಿಯನ್ನು ಸಂಪಾದಿಸಬೇಕೆಂಬ ಕನಸು ಬೊಮ್ಮಾಯಿಯವರದ್ದಾಗಿರಬಹುದು. ಈ ಮೂಲಕ ನಾಲ್ಕೈದು ಜಿಲ್ಲೆಗಳ ರಾಜಕೀಯ ಹಿಡಿತವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡು, ಫೀನಿಕ್ಸ್ ಹಕ್ಕಿಯಂತೆ ಮತ್ತೆ ರಾಜಕೀಯದಲ್ಲಿ ಮೇಲೆದ್ದು ಬರುವ ಅವರ ಆಶಯವೂ ಅಸಹಜವಲ್ಲ. ಆ ಕನಸಿನಲ್ಲಿ ತಪ್ಪೇನೂ ಇಲ್ಲ. ಆದರೆ ಆ ಕನಸನ್ನು ಸಾಕಾರಗೊಳಿಸಲು ನದಿ ತಿರುವು ಯೋಜನೆಯಂತಹ ಪರಿಸರ ವಿನಾಶಕಾರಿ ಮಾರ್ಗವನ್ನು ಆಯ್ಕೆ ಮಾಡಿರುವುದು ಅತ್ಯಂತ ಆತಂಕಕಾರಿ.
ಪಶ್ಚಿಮ ಘಟ್ಟದ ನದಿಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ (quantity) ಮತ್ತು ಪರಿಮಾಣ (volume) ಕುರಿತು ತಪ್ಪು ಅಥವಾ ಅಪೂರ್ಣ ಮಾಹಿತಿಯನ್ನು ನೀಡುವ ಮೂಲಕ, ಈಗಾಗಲೇ ಬಯಲುಸೀಮೆಯ ಜಿಲ್ಲೆಗಳ ಕೆಲ ರೈತ ಮುಖಂಡರನ್ನು ಎತ್ತಿಕಟ್ಟಿರುವಂತೆ ಕಾಣುತ್ತದೆ. ಇದೇ ತಪ್ಪು ಮಾಹಿತಿಯನ್ನು ಆಧಾರ ಮಾಡಿಕೊಂಡು, ಬಿಜೆಪಿ ಹೈಕಮಾಂಡ್‌ಗೆ ಈ ಭಾಗದಲ್ಲಿ ಪಕ್ಷವನ್ನು ವಿಸ್ತರಿಸುವ ಭ್ರಮಾತ್ಮಕ ಕನಸನ್ನು ಮಾರಿದ್ದರೂ ಆಶ್ಚರ್ಯಪಡಬೇಕಾಗಿಲ್ಲ. ರಾಯಚೂರು ಲೋಕಸಭಾ ಕ್ಷೇತ್ರ ಈಗ ಕಾಂಗ್ರೆಸ್ ಪಾಲಾಗಿದೆ ಎಂಬ ವಾಸ್ತವವನ್ನು ಮನಗಂಡ ಹೈ ಕಮಾಂಡ್, ಬೊಮ್ಮಾಯಿಯವರ ಜನಪರ ರಾಜಕೀಯ ತಂತ್ರದಲ್ಲಿ ಸತ್ಯಾಂಶವಿದೆಯೆಂದು ನಂಬಿರಬಹುದು.
ಇಂತಹ ಬಣ್ಣದ ಮಾತುಗಳು ಮತ್ತು ಅತಿರಂಜಿತ ನಿರೀಕ್ಷೆಗಳ ಆಧಾರದ ಮೇಲೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ನದಿ ತಿರುವು ಯೋಜನೆಗೆ ಕೈ ಹಾಕಿದರೆ, ಮುಂದಿನ ದಿನಗಳಲ್ಲಿ ಕೈ ಸುಟ್ಟುಕೊಳ್ಳುವುದು ಖಚಿತ. ಬೇಸಿಗೆಯಲ್ಲಿ ನೀರೇ ಸಿಗದ ಪೂರ್ವಾಭಿಮುಖ ನದಿ ನೀರನ್ನು ಪಶ್ಚಿಮಕ್ಕೆ ತಿರುಗಿಸಿ ಮೂರ್ನಾಲ್ಕು ಜಿಲ್ಲೆಗೆ ನೀರುಣಿಸುವುದು ಕನಸಿನ ಮಾತೇ ಸರಿ. ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದ್ದರೂ, ಅವರ ಆಡಳಿತ ಕಾಲದಲ್ಲಿ ರಾಜಕೀಯ ಅಥವಾ ಆಡಳಿತಾತ್ಮಕ ಚಹರೆಯಲ್ಲಿ ಗಮನಾರ್ಹ ಬದಲಾವಣೆಯನ್ನು ರಾಜ್ಯ ಕಂಡಿರಲಿಲ್ಲ. ಅಷ್ಟೇ ಅಲ್ಲ, 2023ರ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿಯವರ ನೇತೃತ್ವದಲ್ಲಿ 100ಕ್ಕಿಂತ ಹೆಚ್ಚು ಸ್ಥಾನಗಳು ಬರುತ್ತವೆ ಎಂಬ ವಾತಾವರಣವನ್ನು ಸೃಷ್ಟಿಸಿ, ನಂತರ ಭಾರೀ ಸೋಲು ಎದುರಾದಾಗ, ಅದಕ್ಕೆ ಕಾಂಗ್ರೆಸ್‌ನ ಐದು ಗ್ಯಾರಂಟಿಗಳೇ ಕಾರಣವೆಂದು ಹೈಕಮಾಂಡ್‌ಗೆ ವರದಿ ಸಲ್ಲಿಸಿ ಹೊಣೆ ತಪ್ಪಿಸಿಕೊಂಡಿರುವುದೂ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಇಂತಹ ಕಾರ್ಯಕ್ಷಮತೆಯ ದಾಖಲೆಯಿರುವ ನಾಯಕರ ಮಾತಿಗೆ ಬಿಜೆಪಿ ಹೈಕಮಾಂಡ್ ಹೆಚ್ಚಿನ ಮಹತ್ವ ನೀಡಿರುವುದು ನಿಜಕ್ಕೂ ವಿಪರ್ಯಾಸಕರವಾಗಿದೆ.
ಯಾಕೆಂದರೆ, ಈ ಯೋಜನೆ ಜಾರಿಯಾಗಿ ನಿರೀಕ್ಷಿಸಿದಷ್ಟು ನೀರು ಲಭ್ಯವಾಗದೆ, ಜನರ ಕನಸುಗಳು ಭಗ್ನವಾದರೆ, ಜನರ ಆಕ್ರೋಶ ಬೊಮ್ಮಾಯಿಯವರ ಮೇಲೆ ಮಾತ್ರ ಸೀಮಿತವಾಗುವುದಿಲ್ಲ. ಅದರ ಹೊರೆ ನೇರವಾಗಿ ಬಿಜೆಪಿಯ ಮೇಲೆಯೇ ಬೀಳುತ್ತದೆ. ಈ ಸತ್ಯವನ್ನು ಬಿಜೆಪಿಯ ಕೇಂದ್ರ ನಾಯಕತ್ವ ಈ ಸಮಯದಲ್ಲಿ ಅರಿತರೆ ಒಳಿತು.
Published On - 4:31 pm, Tue, 13 January 26
