Xiaomi: ಅಂತಾರಾಷ್ಟ್ರೀಯ ಯುದ್ಧದ ಪ್ರಾಯೋಜಕ ಎಂಬ ಆರೋಪ ಎದುರಿಸುತ್ತಿರುವ ಶವೋಮಿ: ರಷ್ಯಾದಲ್ಲಿ ಸ್ಮಾರ್ಟ್ ಫೋನ್ ಮಾರಾಟದಿಂದ ಸಮಸ್ಯೆ ಎದುರಿಸುತ್ತಿರುವ ಸಂಸ್ಥೆ
ರಷ್ಯಾ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿದ ಬಳಿಕವೂ ಶವೋಮಿ ರಷ್ಯಾದಲ್ಲಿ ವ್ಯಾಪಾರ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.
ಚೀನಾ ಮೂಲದ ಸ್ಮಾರ್ಟ್ ಫೋನ್ ಉತ್ಪಾದನಾ ಸಂಸ್ಥೆಯಾದ ಶವೋಮಿ (Xiaomi), ಅದರ ಸ್ಥಾಪಕ ಹಾಗೂ ಸಿಇಓ ಲೀ ಜುನ್ ಹಾಗೂ ಸಂಸ್ಥೆಯ ಇತರ ಹಿರಿಯ ಅಧಿಕಾರಿಗಳ ಮೇಲೆ ಉಕ್ರೇನ್ ಅಂತಾರಾಷ್ಟ್ರೀಯ ಯುದ್ಧವನ್ನು ಪ್ರಾಯೋಜಿಸುತ್ತಿರುವ ಆರೋಪ ಹೊರಿಸಿದೆ. ರಷ್ಯಾ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿದ ಬಳಿಕವೂ ಶವೋಮಿ ರಷ್ಯಾದಲ್ಲಿ ವ್ಯಾಪಾರ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.
1.ಉಕ್ರೇನ್ ಅಧಿಕಾರಿಗಳ ಪ್ರಕಾರ, ಚೀನಾ ಮೂಲದ ಮೊಬೈಲ್ ನಿರ್ಮಾಣ ಸಂಸ್ಥೆಯಾದ ಶವೋಮಿ ರಷ್ಯಾ ಉಕ್ರೇನ್ ಮೇಲೆ ಫೆಬ್ರವರಿ 2022ರಲ್ಲಿ ದಾಳಿ ನಡೆಸಿದ ಬಳಿಕವೂ ರಷ್ಯಾದಲ್ಲಿ ಮೊಬೈಲ್ ಮಾರಾಟ ನಡೆಸುತ್ತಿದೆ.
2. ಜಾಗತಿಕ ರಾಜಕಾರಣದ ಪರಿಣಾಮವಾಗಿ, ಆ್ಯಪಲ್ ಮತ್ತು ಸ್ಯಾಮ್‌ಸಂಗ್ ಸಂಸ್ಥೆಗಳು ರಷ್ಯಾದಿಂದ ಹೊರನಡೆದ ಬಳಿಕ, ರಷ್ಯಾದಲ್ಲಿ ಚೀನಾದ ಸ್ಮಾರ್ಟ್ ಫೋನ್‌ಗಳ ಮಾರಾಟ ಹೆಚ್ಚಳ ಕಂಡಿದೆ.
ಉಕ್ರೇನಿನ ನ್ಯಾಷನಲ್ ಏಜೆನ್ಸಿ ಆನ್ ಕರಪ್ಷನ್ ಪ್ರಿವೆನ್ಷನ್ (ಎನ್ಎಸಿಪಿ) ಗುರುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಉಕ್ರೇನ್ ಮೇಲೆ ಸಂಪೂರ್ಣ ಆಕ್ರಮಣ ನಡೆಸಿದ ಬಳಿಕವೂ ಸಂಸ್ಥೆಯೊಂದು ರಷ್ಯಾದಲ್ಲಿ ಉದ್ಯಮ ಮುಂದುವರಿಸಿದೆ ಎಂದು ಆರೋಪಿಸಿದೆ. ಈ ಕಂಪನಿ ಉಗ್ರ ಸಂಘಟನೆ ಎಂದೇ ಗುರುತಿಸಲಾದ ರಷ್ಯಾದಲ್ಲಿ ಅತಿಹೆಚ್ಚು ಸ್ಮಾರ್ಟ್ ಫೋನ್ ಮಾರಾಟಗಾರ ಎಂದು ಹೆಸರು ಪಡೆದಿದೆ. ಎನ್ಎಸಿಪಿ ಶವೋಮಿ ಕಾರ್ಪ್‌ಗೆ ರಷ್ಯಾದ ಮಿಲಿಟರಿ ಆಕ್ರಮಣಕಾರಿ ನೀತಿಗೆ ಬೆಂಬಲ ಸೂಚಿಸುತ್ತಿರುವ ಆರೋಪ ಮಾಡಿದ್ದು, ಸಂಸ್ಥೆ ನಡೆಸಿರುವ ವ್ಯವಹಾರಕ್ಕಾಗಿ, ಯುದ್ಧದಲ್ಲಿನ ಪಾತ್ರಕ್ಕಾಗಿ, ಕಾನೂನಾತ್ಮಕ ಹಾಗೂ ಖ್ಯಾತಿ ಕಳೆಯುವಂತಹ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಶವೋಮಿ ಯುದ್ಧಕ್ಕೆ ತಾನು ಬೆಂಬಲವಾಗುವಂತೆ ನಡೆದುಕೊಂಡಿದ್ದೇನೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ್ದು, ತಾನು ವ್ಯವಹಾರ ನಡೆಸುವ ಎಲ್ಲ ಪ್ರಾಂತ್ಯಗಳಲ್ಲೂ ಕಾನೂನುಬದ್ಧವಾಗಿ ನಡೆದುಕೊಂಡಿದ್ದೇನೆ ಎಂದಿದೆ.
ಶವೋಮಿ ಸಂಸ್ಥೆ ತಾನು ವೈಯಕ್ತಿಕ ಹಾಗೂ ಔದ್ಯಮಿಕ ಉಪಯೋಗಗಳಿಗೆ ಅಗತ್ಯವಾದ ಇಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದಕನಾಗಿದ್ದು, ಪ್ರತಿಯೊಬ್ಬರಿಗೂ ಸಂವಹನ ಉಪಕರಣಗಳು ಮತ್ತು ಆನ್‌ಲೈನ್ ಮಾಹಿತಿಗೆ ಮುಕ್ತ ಅವಕಾಶ ಇರಬೇಕು ಎಂದು ನಂಬುವುದಾಗಿ ಹೇಳಿದೆ. ತನ್ನ ಗುರಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಜನರ ಜೀವನವನ್ನು ಉತ್ತಮಪಡಿಸುವುದಾಗಿದೆ ಎಂದಿದೆ. ಫೆಬ್ರವರಿ 2022ರಲ್ಲಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ದಾಳಿ ಸಂಘಟಿಸಿದ ಬಳಿಕ, ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ರಷ್ಯಾದಿಂದ ಹೊರನಡೆದವು. ಈ ದಾಳಿ ನಡೆದ ಒಂದು ವಾರದೊಳಗೆ ಆ್ಯಪಲ್ ಮತ್ತು ಸ್ಯಾಮ್‌ಸಂಗ್ ಇಲೆಕ್ಟ್ರಾನಿಕ್ಸ್ ಸಂಸ್ಥೆಗಳು ರಷ್ಯಾದಲ್ಲಿ ತಮ್ಮ ಸ್ಮಾರ್ಟ್ ಫೋನ್ ಹಾಗೂ ಇತರ ಇಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗಿಳಿಸಿದವು.
ಈ ರೀತಿಯ ಸಂಸ್ಥೆಗಳು ರಷ್ಯಾದಿಂದ ತೆರಳಿದ ಬಳಿಕ, ಗ್ರಾಹಕರು ಬಳಸುವ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸಾಕಷ್ಟು ಅವಕಾಶಗಳು ಸೃಷ್ಟಿಯಾದವು. ರಷ್ಯಾದ ಕರೆನ್ಸಿ ಅಪಾರ ಕುಸಿತ ಕಂಡ ಬಳಿಕ ರಷ್ಯಾದ ಜನತೆ ಅಗತ್ಯ ಇಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಲು ಧಾವಿಸಿದರು. ಇದರ ಪರಿಣಾಮವಾಗಿ, ಚೀನಾದ ಸ್ಮಾರ್ಟ್ ಫೋನ್ ಸಂಸ್ಥೆಗಳಾದ ಹುವಾವೇ ಟೆಕ್ನಾಲಜೀಸ್ ಕೋ, ಒಪ್ಪೋ ಹಾಗೂ ವಿವೋಗಳ ಉತ್ಪನ್ನಗಳ ಮಾರಾಟ ಹೆಚ್ಚಳ ಕಂಡಿತು. ಸಿಎನ್ಎನ್ ವರದಿ ಕೌಂಟರ್ ಪಾಯಿಂಟ್ ರಿಸರ್ಚ್ ಸಂಸ್ಥೆಯ ಮಾಹಿತಿಯನ್ನು ಉಲ್ಲೇಖಿಸಿದ್ದು, ಶವೋಮಿ ರಷ್ಯಾದಲ್ಲಿ ಕಳೆದ ವರ್ಷದ ಅಂತ್ಯದ ವೇಳೆಗೆ 50%ಕ್ಕೂ ಹೆಚ್ಚು ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. 2021ನೇ ಇಸವಿಯ ಮೂರನೇ ತ್ರೈಮಾಸಿಕದಲ್ಲಿ ಶವೋಮಿ 26% ಮಾರುಕಟ್ಟೆ ಪಾಲು ಹೊಂದಿದ್ದರೆ, ಸ್ಯಾಮ್‌ಸಂಗ್ 34% ಪಾಲು ಹೊಂದಿತ್ತು ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಡಿಸಿ ಹೇಳಿದೆ.
ಇದನ್ನೂ ಓದಿ:Expert Opinion: ಭಾರತದ ವಿದ್ಯುತ್ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಒದಗಿಸಿದ ಸೋಲಾರ್, ಪವನ ವಿದ್ಯುತ್ ಉಪಕ್ರಮ
ಉಕ್ರೇನ್ ಯುದ್ಧದ ಪ್ರಾಯೋಜಕರ ಪಟ್ಟಿಯಲ್ಲಿ 22 ಸಂಸ್ಥೆಗಳಿದ್ದು, ಆ ಪಟ್ಟಿಯಲ್ಲಿ ಶವೋಮಿ ಸಹ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಚೈನಾ ಸ್ಟೇಟ್ ಕನ್ಸ್‌ಟ್ರಕ್ಷನ್ ಇಂಜಿನಿಯರಿಂಗ್ ಕಾರ್ಪ್ ಹಾಗೂ ಪ್ರಾಕ್ಟರ್ ಎಂಡ್ ಗ್ಯಾಂಬಲ್ ಸಂಸ್ಥೆಗಳೂ ಸೇರಿವೆ. ಆದರೆ ಈ ಪಟ್ಟಿಯಲ್ಲಿರುವ ಚೀನಾದ ಏಕೈಕ ಸ್ಮಾರ್ಟ್ ಫೋನ್ ಉತ್ಪಾದಕ ಸಂಸ್ಥೆ ಶವೋಮಿ ಆಗಿದೆ. ನ್ಯಾಷನಲ್ ಆ್ಯಂಟಿ ಕರಪ್ಷನ್ ಪೋರ್ಟಲ್ (ಎನ್ಎಸಿಪಿ) ವೆಬ್‌ಸೈಟ್ ಪ್ರಕಾರ, ಈ ಪಟ್ಟಿಯಲ್ಲಿ ಹೆಸರಿಸಲಾದ ಸಂಸ್ಥೆಗಳನ್ನು ಅಮೆರಿಕಾ ಮತ್ತು ಯುಕೆ ಮೂಲದ, ರಿಫಿನಿಟಿವ್ ಎಂಬ ವರ್ಲ್ಡ್ ಚೆಕ್ ಡೇಟಾಬೇಸ್‌ಗೆ ಸೇರಿಸಲಾಗುವುದು. ಈ ಡೇಟಾಬೇಸ್ ಅನ್ನು ಜಗತ್ತಿನಾದ್ಯಂತ ಇರುವ ಹಣಕಾಸು ಸಂಸ್ಥೆಗಳು ಅಪಾಯಕಾರಿ ಎನಿಸುವ ವ್ಯಕ್ತಿಗಳ ಮತ್ತು ಸಂಸ್ಥೆಗಳ ವ್ಯವಹಾರವನ್ನು ತಿಳಿಯಲು ಬಳಸುತ್ತವೆ.
ಈಗಾಗಲೇ ಹಲವಾರು ಪಾಶ್ಚಾತ್ಯ ರಾಷ್ಟ್ರಗಳ ತಾಂತ್ರಿಕ ಸಂಸ್ಥೆಗಳು ರಷ್ಯಾದಲ್ಲಿ ತಮ್ಮ ಉತ್ಪನ್ನಗಳ ಮಾರಾಟದ ಮೇಲೆ ಮಿತಿಯನ್ನು ಹೇರಿದ್ದು, ಚೀನಾದ ಸಂಸ್ಥೆಗಳು ಅಂತಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದಕ್ಕೆ ರಷ್ಯಾದ ಮೇಲೆ ಅಮೆರಿಕಾ ಹೇರಿದ ನಿರ್ಬಂಧಗಳನ್ನು ಚೀನಾ ಒಪ್ಪಿಕೊಳ್ಳದಿರುವುದೂ ಕಾರಣವಾಗಿದೆ. ಕೌಂಟರ್ ಪಾಯಿಂಟ್ ರಿಸರ್ಚ್ ಸಂಸ್ಥೆಯಲ್ಲಿ ವಿಶ್ಲೇಷಕರಾಗಿರುವ ಇವಾನ್ ಲ್ಯಾಮ್ ಅವರ ಪ್ರಕಾರ, ಚೀನಾದ ಪ್ರಮುಖ ಬ್ರ್ಯಾಂಡ್ ಆಗಿರುವ ಶವೋಮಿ ಪಶ್ಚಿಮ ಯುರೋಪ್‌ನಲ್ಲಿ ತನ್ನ ಮಾರಾಟವನ್ನು ಹೆಚ್ಚಿಸಬೇಕು ಎಂದುಕೊಂಡರೆ, ಅದಕ್ಕಾಗಿ ಅವರು ರಷ್ಯಾದಲ್ಲಿ ವ್ಯವಹಾರ ನಡೆಸುವ, ಅಲ್ಲಿ ಕಾರ್ಯಾಚರಣೆ ವಿಸ್ತರಿಸುವುದರಲ್ಲಿನ ಅಪಾಯವನ್ನೂ ಗಮನಿಸಬೇಕಾಗುತ್ತದೆ. ಯಾಕೆಂದರೆ, ಪಶ್ಚಿಮ ಯುರೋಪಿನ ಜನತೆ ಉಕ್ರೇನ್ ಮೇಲಿನ ದಾಳಿಯನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ. ಲ್ಯಾಮ್ ಅವರು ಈ ಅಭಿಪ್ರಾಯಗಳನ್ನು ವರ್ಷದ ಹಿಂದೆಯೇ ವ್ಯಕ್ತಪಡಿಸಿದ್ದರು.
ಗುರುವಾರದಂದು ಫಿಚ್ ರೇಟಿಂಗ್ ಸಂಸ್ಥೆ ಒಂದು ಸಂಶೋಧನಾ ವರದಿಯನ್ನು ಪ್ರಕಟಿಸಿದ್ದು, ಯುರೋಪ್‌ನಲ್ಲಿ ಯುದ್ಧ ವಿರೋಧಿ ಮನಸ್ಥಿತಿ ಇದ್ದರೂ, ಆನ್‌ಲೈನ್ ಮಾರಾಟ ವ್ಯವಸ್ಥೆಗಳ ಕಾರಣದಿಂದ, ಶವೋಮಿ ಸಂಸ್ಥೆಯ ಮಾರುಕಟ್ಟೆ ಇನ್ನಷ್ಟು ವಿಸ್ತರಿಸಲಿದೆ ಎನ್ನಲಾಗಿದೆ. ಐಡಿಸಿ ವರದಿಯ ಪ್ರಕಾರ, ಶವೋಮಿ ಕಳೆದ ವರ್ಷ ಬಹುತೇಕ 13% ಮಾರುಕಟ್ಟೆ ವ್ಯಾಪ್ತಿ ಹೊಂದಿದ್ದು, ಜಾಗತಿಕವಾಗಿ ಮೂರನೇ ಅತಿದೊಡ್ಡ ಸ್ಮಾರ್ಟ್ ಫೋನ್ ಮಾರಾಟಗಾರ ಸಂಸ್ಥೆ ಎನಿಸಿಕೊಂಡಿತ್ತು.
ಲೇಖನ- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:46 am, Mon, 17 April 23