ನಟ ಡಾಲಿ ಧನಂಜಯ್ ಅವರು ‘ಡಾಲಿ ಪಿಕ್ಚರ್ಸ್’ ಮೂಲಕ ನಿರ್ಮಿಸುತ್ತಿರುವ ‘ಟಗರು ಪಲ್ಯ’ ಚಿತ್ರದಲ್ಲಿ ‘7 ಸ್ಟಾರ್ ಸುಲ್ತಾನ್’ ಎಂಬ ಟಗರು ನಟಿಸಿದೆ. ಇದಕ್ಕೆ ರಾಜ್ಯಾದ್ಯಂತ ಅಭಿಮಾನಿಗಳು ಇದ್ದಾರೆ.
ಬಾಗಲಕೋಟೆಯ ಸುತಗುಂಡಾರ ಗ್ರಾಮದ ಯುನೀಸ್ ಗಡೇದ್ ಅವರು ಎರಡೂವರೆ ವರ್ಷದ ಹಿಂದೆ ‘7 ಸ್ಟಾರ್ ಸುಲ್ತಾನ್’ ಟಗರನ್ನು 1.88 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದರು. ಬಳಿಕ ಇದನ್ನು ಟಗರು ಕಾಳಗಕ್ಕೆ ಇಳಿಸಿದ್ದರು.
‘7 ಸ್ಟಾರ್ ಸುಲ್ತಾನ್’ ಹೆಸರಿನ ಈ ಟಗರನ್ನು ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಕುರುಬಾನಿ ನೀಡಲು ಅದರ ಮಾಲೀಕರು ತೀರ್ಮಾನಿಸಿದ್ದರು. ಆದರೆ ಇದನ್ನು ಕುರುಬಾನಿ ಕೊಡಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು.
ಕುರುಬಾನಿ ವಿರುದ್ಧ ದೊಡ್ಡ ಅಭಿಯಾನವೇ ಶುರುವಾಗಿತ್ತು. ‘ಟಗರು ಪಲ್ಯ’ ಚಿತ್ರತಂಡದವರು ಕೂಡ ಮಾಲೀಕರಿಗೆ ಕುರುಬಾನಿ ಕೊಡದಂತೆ ಸಲಹೆ ನೀಡಿದ್ದರು. ಅವರ ಮನವಿಗೆ ಈಗ ಫಲ ಸಿಕ್ಕಿದೆ. ಮಾಲೀಕರು ಮನಸ್ಸು ಬದಲಾಯಿಸಿದ್ದಾರೆ.
ನಾಗಭೂಷಣ್ ಹಾಗೂ ‘ನೆನಪಿರಲಿ’ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ನಟಿಸುತ್ತಿರುವ ‘ಟಗರು ಪಲ್ಯ’ ಸಿನಿಮಾ ಈಗಾಗಲೇ ನಿರೀಕ್ಷೆ ಮೂಡಿಸಿದೆ. ಉಮೇಶ್ ಕೆ. ಕೃಪ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.
ಅಮೃತಾ ಪ್ರೇಮ್ಗೆ ಇದು ಮೊದಲ ಸಿನಿಮಾ. ‘ಟಗರು ಪಲ್ಯ’ ಮೂಲಕ ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮಂಡ್ಯದ ಹಳ್ಳಿಗಳಲ್ಲಿ ನಡೆಯುವ ಆಚರಣೆಗಳ ಸುತ್ತ ಈ ಚಿತ್ರದ ಕಥೆ ಸಾಗಲಿದೆ.
‘ಟಗರು ಪಲ್ಯ’ ಸಿನಿಮಾದಲ್ಲಿ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ಅನೇಕರು ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸದ್ಯ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.