
ಸಿನಿಮಾ ‘ಆದಿಪುರುಷ್’ ಬಿಡುಗಡೆಗೆ ಇನ್ನು 10 ದಿನಗಳು ಬಾಕಿ ಇವೆ. ಪ್ರಭಾಸ್ ಅಭಿನಯದ ಈ ಸಿನಿಮಾಗೆ ಓಂ ರಾವತ್ ನಿರ್ದೇಶನ ಇದೆ. ರಾಮಾಯಣಕ್ಕೆ ಆಧುನಿಕ ಸ್ಪರ್ಶ ನೀಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ರಾಮನ ಪಾತ್ರದಲ್ಲಿ ಪ್ರಭಾಸ್ ಮತ್ತು ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ನಟಿಸಿದ್ದಾರೆ. ಚಿತ್ರ ಜೂನ್ 16 ರಂದು ಬಿಡುಗಡೆಯಾಗಲಿದೆ.

ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಚಿತ್ರತಂಡ ಇಂದು (ಜೂನ್ 6) ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ಮೈದಾನದಲ್ಲಿ ಅದ್ದೂರಿ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿದೆ. ಹಿಂದೆಂದೂ ನಡೆಯದ ರೀತಿಯಲ್ಲಿ ಈ ಸಮಾರಂಭ ನಡೆಯಲಿದೆ.

ಪ್ರಭಾಸ್ ಅವರ ಕಟೌಟ್ಗಳು ತಿರುಪತಿಯಲ್ಲಿ ತಲೆ ಎತ್ತಿವೆ. ಲಕ್ಷಾಂತರ ಮಂದಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಈ ಮೊದಲು ‘ಬಾಹುಬಲಿ 2’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಇಲ್ಲಿಯೇ ನಡೆದಿತ್ತು. ಅದಕ್ಕಿಂತ ದೊಡ್ಡದಾಗಿ ‘ಆದಿಪುರುಷ್’ ಕಾರ್ಯಕ್ರಮ ನಡೆಯಲಿದೆ.

ಪುರಾಣಗಳ ಪ್ರಕಾರ ರಾಮ ಮತ್ತು ವೆಂಕಟೇಶ್ವರ ಸ್ವಾಮಿ ವಿಷ್ಣುವಿನ ಎರಡು ಅವತಾರಗಳು. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು, ಅಯೋಧ್ಯೆ ಮತ್ತು ತಿರುಪತಿ ನಡುವೆ ಆಧ್ಯಾತ್ಮಿಕ ಸಂಪರ್ಕ ಸೃಷ್ಟಿಸುವ ರೀತಿಯಲ್ಲಿ ಒಂದು ಸೆಟ್ ನಿರ್ಮಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ 100 ನರ್ತಕರು ಮತ್ತು 100 ಗಾಯಕರು ರಾಮಾಯಣಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡಲಿದ್ದಾರೆ. ಲಕ್ಷಾಂತರ ಜನರು ಆಗಮಿಸುತ್ತಿರುವುದರಿಂದ ಬಿಗಿ ಭದ್ರತೆ ಆಯೋಜಿಸಲಾಗಿದೆ. ಶ್ರೀ ಚಿನ್ನ ಜೀಯರ್ ಸ್ವಾಮಿ ಮುಖ್ಯ ಅತಿಥಿ ಆಗಿ ಆಗಮಿಸುತ್ತಿದ್ದಾರೆ.