- Kannada News Photo gallery Asian Hockey Federation announced schedule for the Men's Asian Champions Trophy 2024
ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ; ಈ ದಿನದಂದು ಭಾರತ- ಪಾಕ್ ಮುಖಾಮುಖಿ
Men’s Hockey Asian Champions Trophy 2024: ಚೀನಾದಲ್ಲಿ ನಡೆಯಲಿರುವ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಅದರಂತೆ ಸೆಪ್ಟೆಂಬರ್ 8 ರಿಂದ ಆರಂಭವಾಗಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಪ್ಟೆಂಬರ್ 17 ರಂದು ಮುಕ್ತಾಯಗೊಳ್ಳಲಿದೆ. ಈ ಬಾರಿಯ ಟೂರ್ನಿಯಲ್ಲಿ ಏಷ್ಯಾದ ಒಟ್ಟು 6 ತಂಡಗಳು ಭಾಗವಹಿಸುತ್ತಿವೆ.
Updated on:Aug 12, 2024 | 5:59 PM

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಮಣಿಸಿದ ಭಾರತ ಹಾಕಿ ತಂಡ ಕಂಚಿನ ಪದಕವನ್ನು ಗೆದ್ದುಕೊಂಡಿತು. ಇದರೊಂದಿಗೆ ಸತತ ಎರಡು ಒಲಿಂಪಿಕ್ಸ್ಗಳಲ್ಲಿ ಪದಕ ಗೆದ್ದ ಸಾಧನೆಯನ್ನು ಭಾರತ ಹಾಕಿ ತಂಡ ಮಾಡಿತ್ತು. ಇದೀಗ ಒಲಿಂಪಿಕ್ಸ್ನಿಂದ ದೇಶಕ್ಕೆ ವಾಪಸ್ಸಾಗಿರುವ ಭಾರತ ಹಾಕಿ ತಂಡ ಮುಂದಿನ ತಿಂಗಳಿಂದ ಮತ್ತೆ ಅಖಾಡಕ್ಕಿಳಿಯಲು ತಯಾರಿ ನಡೆಸುತ್ತಿದೆ.

ವಾಸ್ತವವಾಗಿ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಅದರಂತೆ ಸೆಪ್ಟೆಂಬರ್ 8 ರಿಂದ ಆರಂಭವಾಗಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಪ್ಟೆಂಬರ್ 17 ರಂದು ಮುಕ್ತಾಯಗೊಳ್ಳಲಿದೆ. ಈ ಬಾರಿಯ ಟೂರ್ನಿಯಲ್ಲಿ ಏಷ್ಯಾದ ಒಟ್ಟು 6 ತಂಡಗಳು ಭಾಗವಹಿಸುತ್ತಿವೆ.

ಮೇಲೆ ಹೇಳಿದಂತೆ ಈ ಟೂರ್ನಿಯಲ್ಲಿ 6 ತಂಡಗಳು ಬಾಗವಹಿಸುತ್ತಿದ್ದು, ಈ 6 ತಂಡಗಳ ಪೈಕಿ ಭಾರತ, ಪಾಕಿಸ್ತಾನ, ಆತಿಥೇಯ ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳು ಸೇರಿವೆ. ಸೆಪ್ಟೆಂಬರ್ 8 ರಿಂದ ಈ ಟೂರ್ನಿ ಆರಂಭವಾದರೂ, ಟೂರ್ನಿಯ ಹೈವೋಲ್ಟೇಜ್ ಪಂದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ ಸೆಪ್ಟೆಂಬರ್ 14 ರಂದು ನಡೆಯಲಿದೆ.

ಇನ್ನು ವೇಳಾಪಟ್ಟಿಯ ಪ್ರಕಾರ ಚೀನಾದ ಹುಲುನ್‌ಬುಯರ್‌ನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದ್ದು, ಸೆಪ್ಟೆಂಬರ್ 8 ರಂದು ದಕ್ಷಿಣ ಕೊರಿಯಾ ಮತ್ತು ಜಪಾನ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಅದೇ ದಿನ ಭಾರತ ಹಾಕಿ ತಂಡ ಚೀನಾ ತಂಡವನ್ನು ಎದುರಿಸಲಿದೆ. ಆ ಬಳಿಕ ಭಾರತ ತಂಡ ಸೆಪ್ಟೆಂಬರ್ 9 ರಂದು ಜಪಾನ್, ಸೆಪ್ಟೆಂಬರ್ 11 ರಂದು ಮಲೇಷ್ಯಾ, ಸೆಪ್ಟೆಂಬರ್ 12 ರಂದು ದಕ್ಷಿಣ ಕೊರಿಯಾ ಮತ್ತು ನಂತರ ಸೆಪ್ಟೆಂಬರ್ 14 ರಂದು ಪಾಕಿಸ್ತಾನವನ್ನು ಎದುರಿಸಲಿದೆ.

ಲೀಗ್ ಹಂತದಲ್ಲಿ ಎಲ್ಲಾ ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು, ಲೀಗ್ ಸುತ್ತಿನ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ. ಸೆಮಿಫೈನಲ್ನಲ್ಲಿ ಗೆದ್ದ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲ್ಲಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದಿತ್ತು. ಇದಲ್ಲದೆ ಈ ಟೂರ್ನಿಯಲ್ಲಿ ಭಾರತ ಹಾಲಿ ಚಾಂಪಿಯನ್ ಆಗಿರುವುದರಿಂದ ತಂಡ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಸಲುವಾಗಿ ಅಖಾಡಕ್ಕಿಳಿಯಲಿದೆ.

ಇದಕ್ಕೆ ಪೂರಕವಾಗಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ 6 ತಂಡಗಳ ಪೈಕಿ ಭಾರತ ಒಂದೇ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿತ್ತು. ಹೀಗಾಗಿ ಈ ಬಾರಿಯೂ ಭಾರತವೇ ಚಾಂಪಿಯನ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಇನ್ನು ಈ ಟೂರ್ನಿಯಲ್ಲಿ ಭಾರತ ಇದುವರೆಗೆ ನಾಲ್ಕು ಬಾರಿ ಚಾಂಪಿಯನ್ ಆಗಿದ್ದು, ಇದೀಗ ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಭಾರತ ತಂಡ ಮುಂದಿನ ಟೂರ್ನಿಯಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
Published On - 5:57 pm, Mon, 12 August 24




