Ballari Kanaka Durgamma Sidi Bandi Jatre: ಗಣಿನಾಡಲ್ಲಿ ಕನಕ ದುರ್ಗಮ್ಮನಿಗೆ ಎತ್ತುಗಳ ಸಿಡಿಬಂಡಿ ಸಂಭ್ರಮ, ದೇವಿಗೆ ಜೀವಂತ ಕೋಳಿಗಳ ಸಮರ್ಪಣೆ
ಲಕ್ಷ ಲಕ್ಷ ಜನ...ಕಣ್ಣು ಹಾಯಿಸಿದಲ್ಲೆಲ್ಲಾ ಭಕ್ತಸಾಗರ. ಈ ಅಸಂಖ್ಯಾತ ಜನಸ್ತೋಮದ ನಡುವೆ ಅಲ್ಲಿ ಅದ್ಧೂರಿ ಜಾತ್ರೆ ನಡೆದಿತ್ತು. ಬಿಸಿಲ ಝಳ ಕಡಿಮೆಯಾಗಿ ಸಂಜೆಯ ತಂಪು ಆವರಿಸುತ್ತಿದ್ದಂತೆ ಸಿಡಿಬಂಡಿ ಉತ್ಸವ ಸಾಗಿತ್ತು.
Updated on: Mar 01, 2023 | 11:16 AM

ಜಾತ್ರೆ ಅಂದ್ರೆ ಅಲ್ಲಿ ರಥವನ್ನ ಎಳೆಯುತ್ತಾರೆ. ಆದ್ರೆ ಈ ಜಾತ್ರೆಯಲ್ಲಿ ಮಾತ್ರ ಭಕ್ತರು ತೇರು ಎಳೆಯಲ್ಲ, ಬದಲಾಗಿ ಎತ್ತುಗಳ ಸಿಡಿ ಬಂಡಿ ಉತ್ಸವ ನಡೆಯುತ್ತೆ. ಭಕ್ತರು ಸಹ ಜಾತ್ರೆಯಲ್ಲಿ ಬಾಳೆಹಣ್ಣು ಉತ್ತತ್ತಿ ಎಸೆಯಲ್ಲ, ಬದಲಾಗಿ ಸಿಡಿ ಬಂಡಿಗೆ ಕೋಳಿ ತೂರಿ ಹರಕೆ ತೀರಿಸುತ್ತಾರೆ. ಇತಂಹ ವಿಶಿಷ್ಟ ಜಾತ್ರೆ ನಡೆಯೋದು ಗಣಿ ನಾಡು ಬಳ್ಳಾರಿಯಲ್ಲಿ.

ಲಕ್ಷ ಲಕ್ಷ ಜನ...ಕಣ್ಣು ಹಾಯಿಸಿದಲ್ಲೆಲ್ಲಾ ಭಕ್ತಸಾಗರ. ಈ ಅಸಂಖ್ಯಾತ ಜನಸ್ತೋಮದ ನಡುವೆ ಅಲ್ಲಿ ಅದ್ಧೂರಿ ಜಾತ್ರೆ ನಡೆದಿತ್ತು. ಬಿಸಿಲ ಝಳ ಕಡಿಮೆಯಾಗಿ ಸಂಜೆಯ ತಂಪು ಆವರಿಸುತ್ತಿದ್ದಂತೆ ಸಿಡಿಬಂಡಿ ಉತ್ಸವ ಸಾಗಿತ್ತು.

ಬಂಗಾರದ ಆಭರಣಗಳಿಂದಲೇ ದೇವಿ ಫಳಫಳ ಹೊಳೆಯುತ್ತಿದ್ರೆ, ಲಕ್ಷ ಲಕ್ಷ ಭಕ್ತರು ಅದಿದೇವತೆ ದರ್ಶನ ಪಡೆದು ಕಣ್ತುಂಬಿಕೊಂಡ್ರು. ಗಣಿನಾಡು ಬಳ್ಳಾರಿ ನಗರದಲ್ಲೇ ನೆಲಸಿರೋ ಶಕ್ತಿದೇವಿ ಕನಕ ದುರ್ಗಮ್ಮನ ಸನ್ನಿಧಿಯಲ್ಲಿ ಫೆ.31ರಂದು ಹಬ್ಬದ ಸಂಭ್ರಮ, ಸಿಡಿಬಂಡಿಯ ಸಡಗರ.

ಎಲ್ಲಾ ಜಾತ್ರೆಗಳಂತೆ ರಥ ಎಳೆಯೋ ಪದ್ಧತಿ ಇಲ್ಲಿಲ್ಲ. ಇಲ್ಲಿ ಸಿಡಿಬಂಡಿಯನ್ನೇ ಎಳೆದು ಉತ್ಸವ ಆಚರಿಸಲಾಗುತ್ತೆ. ಇನ್ನು ಉತ್ಸವಕ್ಕೆ ಬಳ್ಳಾರಿ ಮಾತ್ರವಲ್ಲದೆ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿದ್ರು. ಸಜ್ಜನ ಗಾಣಿಗ ಸಮುದಾಯದವರು ವಿಶೇಷವಾಗಿ ಅಲಂಕರಿಸಿದ್ದ ಸಿಡಿ ಬಂಡಿಯನ್ನ ದೇವಸ್ಥಾನದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಸಿಡಿ ಉತ್ಸವ ಆಚರಿಸಲಾಯಿತು.

ಇನ್ನು ಹಿಂದೆ ಈ ಸಿಡಿಬಂಡಿಗೆ ಮಹಿಳೆಯರನ್ನೇ ಕಟ್ಟಿ ಉತ್ಸವ ಆಚರಿಸಲಾಗ್ತಿತ್ತು. ಆದ್ರೆ ಮಾನವ ಹಕ್ಕು ಉಲ್ಲಂಘನೆ ಕಾನೂನು ಬಂದ ಬಳಿಕ ಅದನ್ನ ನಿಲ್ಲಿಸಲಾಗಿದೆ. ಅದ್ರ ಬದಲು ಸಿಡಿಬಂಡಿಗೆ ಗೊಂಬೆಯನ್ನೇ ಕಟ್ಟಿ ಸಿಡಿಬಂಡಿಯನ್ನ ಎಳೆಯಲಾಗುತ್ತೆ .

ಭಕ್ತರು ಜೀವಂತ ಕೋಳಿಗಳನ್ನೇ ದೇವಿಯ ಬಂಡಿಗೆ ಎಸೆಯುತ್ತಾರೆ. ಹೀಗೆ ಕೋಳಿ ಸಮರ್ಪಿಸಿದ್ರೆ, ತಮ್ಮ ಇಷ್ಟಾರ್ಥಗಳು ಸಿದ್ದಿಸುತ್ತವೆ ಅನ್ನೋದು ಭಕ್ತರ ನಂಬಿಕೆ.

ಇನ್ನು ವಿಶೇಷವೆಂದರೆ ಕನಕ ದುರ್ಗಮ್ಮ ಸಿಡಿಬಂಡಿ ಜಾತ್ರೆಯಲ್ಲಿ ದಿ. ಪುನೀತ್ ರಾಜ್ಕುಮಾರ್ ಅವರ ಫೋಟೋವನ್ನೂ ಪ್ರದರ್ಶಿಸಲಾಯಿತು. ಅಭಿಮಾನಿಗಳು ಜಾತ್ರೆಯಲ್ಲಿ ಪುನೀತ್ ಫೋಟೋ ಹಿಡಿದು ದೇವಿಗೆ ನಮಿಸಿದರು.

ನಂಬಿದವರ ಕೈಬಿಡದ ಕನಕದುರ್ಗಮ್ಮಗೆ ಪ್ರತಿವರ್ಷ ಬೇಸಿಗೆ ಸಮಯದಲ್ಲೇ ಜಾತ್ರೆ ನಡೆಯುತ್ತೆ. ಅದ್ರಂತೆ ಈ ಬಾರಿಯೂ ಅದ್ಧೂರಿ ಉತ್ಸವ ನಡೆದ್ರೆ, ಬಂದಿದ್ದ ಭಕ್ತರಿಗೆ ಅನ್ನಪ್ರಸಾದದ ಜತೆ ಮಜ್ಜಿಗೆ, ಪಾನಕದ ವ್ಯವಸ್ಥೆಯನ್ನೂ ಮಾಡಲಾಗಿತ್ತು . ವರದಿ: ವೀರೇಶ್ ದಾನಿ, ಟಿವಿ9 ಬಳ್ಳಾರಿ



















