- Kannada News Photo gallery Bengaluru LalBagh Flower Show 2024: This year sees almost 9.07 lakh visitors over last 12 days, Kannada news
ಲಾಲ್ ಬಾಗ್ ಫ್ಲವರ್ ಶೋ: ಕಳೆದೆರಡು ವರ್ಷಕ್ಕಿಂತ ಕಡಿಮೆ ಜನ ಭೇಟಿ! ಅಧಿಕಾರಿಗಳು ಕೊಟ್ಟ ಕಾರಣ ಇಲ್ಲಿದೆ
ಬೆಂಗಳೂರು, ಆಗಸ್ಟ್ 20: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಲಾಲ್ಬಾಗ್ನಲ್ಲಿ ಆಯೋಜಿಸಿದ್ದ ಪುಷ್ಪ ಪ್ರದರ್ಶನವನ್ನು ಕಳೆದ 12 ದಿನಗಳಲ್ಲಿ ಸುಮಾರು 9.07 ಲಕ್ಷ ಜನ ವೀಕ್ಷಿಸಿದ್ದಾರೆ. ಈ ವರ್ಷ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳನ್ನು ಆಧರಿಸಿದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
Updated on: Aug 20, 2024 | 7:39 AM

ಫ್ಲವರ್ ಶೋದಿಂದಾಗಿ ತೋಟಗಾರಿಕಾ ಇಲಾಖೆಗೆ ಟಿಕೆಟ್ ಮೂಲಕ 3.04 ಕೋಟಿ ರೂ., ಸ್ಟಾಲ್‌ಗಳ ಮೂಲಕ 40 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಒಟ್ಟು 3.44 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಆದಾಗ್ಯೂ, ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಫ್ಲವರ್ ಶೋಗೆ ಭೇಟಿ ನೀಡಿದವರ ಸಂಖ್ಯೆಯಲ್ಲಿ ಈ ವರ್ಷ ತುಸು ಕಡಿಮೆಯಾಗಿದೆ. 2022 ರಲ್ಲಿ ಡಾ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಿದ ಫಲಪುಷ್ಪ ಪ್ರದರ್ಶನದ ಸಮಯದಲ್ಲಿ, ಲಾಲ್‌ಬಾಗ್‌ನ ಇತಿಹಾಸದಲ್ಲೇ ಅತಿ ಹೆಚ್ಚು ಜನ ವೀಕ್ಷಿಸಿದ್ದರು. ಆ ವರ್ಷ 11 ಲಕ್ಷ ಮಂದಿ ವೀಕ್ಷಿಸಿದ್ದರು.

2023ರಲ್ಲಿ ಕೆಂಗಲ್ ಹನುಮಂತಯ್ಯನವರ ಥೀಮ್ನಲ್ಲಿ ಏರ್ಪಡಿಸಿದ್ದ ಪುಷ್ಪ ಪ್ರದರ್ಶನಕ್ಕೆ ಸುಮಾರು 10.5 ಲಕ್ಷ ಮಂದಿ ಭೇಟಿ ನೀಡಿದ್ದರು.

ನಗರದಲ್ಲಿ ಮೋಡ ಕವಿದ ವಾತಾವರಣ, ಮಳೆ ಇದ್ದುದರಿಂದ ಈ ವರ್ಷ ಜನಸಂದಣಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ಲವರ್ ಶೋ ನಡೆದ ಒಟ್ಟು ದಿನಗಳ ಪೈಕಿ ಕನಿಷ್ಠ ಮೂರು ದಿನಗಳ ಕಾಲ ಭಾರೀ ಮಳೆ ಮತ್ತು ಮೋಡ ಕವಿದ ವಾತಾವರಣವಿತ್ತು. ಆದ್ದರಿಂದ, ಆ ದಿನಗಳಲ್ಲಿ ಕಡಿಮೆ ಜನ ಬಂದಿದ್ದರು. ಆದರೆ, ಒಟ್ಟು ಲೆಕ್ಕದಲ್ಲಿ ಆಗಮಿಸಿದವರ ಸಂಖ್ಯೆ ಅಷ್ಟಾಗಿ ಕಡಿಮೆಯಾಗಿಲ್ಲ, ಪ್ರದರ್ಶನ ಯಶಸ್ವಿಯಾಗಿದೆ ಎಂದು ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನ ಜಂಟಿ ನಿರ್ದೇಶಕ ಡಾ. ಎಂ ಜಗದೀಶ ತಿಳಿಸಿದ್ದಾರೆ.




