ಚಿಕ್ಕಬಳ್ಳಾಪುರ: ಅನೋನ್ಯ ಸಂಸಾರಕ್ಕೆ ಕೊಳ್ಳಿ ಇಟ್ಟು, ಒಂದುವರೆ ವರ್ಷದ ಮೊಮ್ಮಗ ಹಾಗೂ ಸೊಸೆಯನ್ನು ಬೀದಿಗೆ ತಳ್ಳಿ, ತಮ್ಮ ಮಗನನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದ ಅತ್ತೆ ಮಾವನ ವಿರುದ್ದ ಸೊಸೆಯೊರ್ವಳು ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿದ್ದಳು. ಇದರಿಂದ ಅಲರ್ಟ್ ಆಗಿದ್ದ ಪೊಲೀಸರು, ಕೊನೆಗೆ ದೂರುದಾರ ಮಹಿಳೆಯ ಗಂಡ ಹಾಗೂ ಆಕೆಯ ಅತ್ತೆ ಮಾವನನ್ನು ಕರೆಸಿ ವಾರ್ಗಿಂಗ್ ಕೊಟ್ಟಿದ್ದೆ ತಡ, ಮತ್ತೆ ಗಂಡ ಹೆಂಡತಿ ತಮ್ಮ ಒಂದೂವರೆ ವರ್ಷದ ಮಗ ಹಾಗೂ ನ್ಯಾಯಮೂರ್ತಿಗಳ ಸಮ್ಮೂಖದಲ್ಲಿ ಮತ್ತೆ ಹಾರ ಬದಲಾಯಿಸಿಕೊಂಡು ಪರಸ್ಪರ ಸಿಹಿ ತಿನಿಸಿದ ಘಟನೆ ನಡೆಯಿತು. ಅಷ್ಟಕ್ಕೂ ದಂಪತಿ ನಡುವೆ ನಡೆದಿದ್ದಾದರೂ ಏನು? ಇಲ್ಲಿದೆ ನೋಡಿ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೈವಾರದ ನಿವಾಸಿ ಶಿಲ್ಪಾ ಹಾಗೂ ಸ್ವಗ್ರಾಮದ ದೂರದ ಸಂಬಂಧಿ ಸಂತೋಷ್ ಎನ್ನುವವರು ಪರಸ್ಪರ ಪ್ರೀತಿಸಿ ಎರಡು ವರ್ಷಗಳ ಹಿಂದೆ ಮದುವೆಯನ್ನು ಮಾಡಿಕೊಂಡಿದ್ದರು. ಇಬ್ಬರ ಪ್ರೀತಿಗೆ ಒಂದೂವರೆ ವರ್ಷದ ಮಗನೂ ಇದೆ. ಆದರೆ ತಮ್ಮ ಮಗ ತಮಗೆ ಬೇಡದವಳ ಜೊತೆ ಲವ್ ಮ್ಯಾರೇಜ್ ಮಾಡಿಕೊಂಡಿದ್ದಾನೆ ಎಂದು ಬೇಸರ ಮಾಡಿಕೊಂಡ ಆತನ ತಂದೆ ತಾಯಿ ಹಾಗೂ ಸಂಬಂಧಿಗಳು ವಾರದ ಹಿಂದೆ ಚಿಕ್ಕಬಳ್ಳಾಪುರದಲ್ಲಿ ವಾಸವಿದ್ದ ಮಗನ ಬಾಡಿಗೆ ಮನೆಗೆ ನುಗ್ಗಿ ಸೊಸೆ ಹಾಗೂ ಮಗುವನ್ನು ಬಿಟ್ಟು ತಮ್ಮ ಮಗ ಸಂತೋಷನನ್ನು ಎಳೆದುಕೊಂಡು ಹೋಗಿದ್ದರು. ಇದರಿಂದ ನೊಂದ ಶಿಲ್ಪಾ ನ್ಯಾಯಕ್ಕಾಗಿ ಟಿವಿ9 ಮೊರೆ ಹೋಗಿದ್ದಳು.
ಪ್ರೀತಿಸಿ ಕೈ ಹಿಡದ ಗಂಡನನ್ನು ಆತನ ಸಂಬಂಧಿಗಳು ಎಳೆದುಕೊಂಡು ಹೋಗಿದ್ದ ಕಾರಣ ಶಿಲ್ಪಾ ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಪೊಲೀಸರ ಮೊರೆ ಹೋಗಿದ್ದಳು. ಆದರೆ ಪೊಲೀಸರು ಶಿಲ್ಪಾಳ ದೂರು ಸ್ವೀಕರಿಸದೆ ಬಿಟ್ಟಿ ಸಲಹೆ ಕೊಟ್ಟು ಕಳುಹಿಸಿದ್ದರಯ. ಇದರಿಂದ ಕಂಗಲಾದ ಶಿಲ್ಪಾ ಟಿವಿ9 ಚಿಕ್ಕಬಳ್ಳಾಪುರ ಕಚೇರಿಗೆ ಆಗಮಿಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದಳು.
ಟಿವಿ9 ಚಿಕ್ಕಬಳ್ಳಾಪುರ ಜಿಲ್ಲಾ ಪ್ರತಿನಿಧಿ ಭೀಮಪ್ಪ ಪಾಟೀಲ ಹಾಗೂ ಯುವ ವಕೀಲರಾದ ಮಂಜುನಾಥ್, ಸೌಜನ್ಯ ಗಾಂಧಿ ನೊಂದ ಶಿಲ್ಪಾಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಮೂರ್ತಿಗಳಾದ ನ್ಯಾ. ಲಕ್ಷ್ಮಿಕಾಂತ್ ಜೆ ಮಿಷ್ಕಿನ್ ಬಳಿ ಕರೆದುಕೊಂಡು ಹೋಗಿ ದೂರು ಕೊಡಿಸಲಾಗಿತ್ತು. ತಕ್ಷಣ ನ್ಯಾಯಮೂರ್ತಿಗಳು ದೂರನ್ನು ಪರಿಶೀಲನೆ ಮಾಡಿದರು.
ನೊಂದ ಮಹಿಳೆಯ ದೂರನ್ನು ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶರವರಿಗೆ ಪತ್ರ ಬರೆದಿದ್ದರು. ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಅಧಿಕಾರಿಗಳು, ಶಿಲ್ಪಾಳನ್ನು ಕರೆಸಿ ದೂರ ಸ್ವೀಕರಿಸಿದ್ದರು. ಕೊನೆಗೆ ಶಿಲ್ಪಾಳ ಪತಿ ಸಂತೋಷ ಹಾಗೂ ಆತನ ಸಂಬಂಧಿಗಳನ್ನು ಠಾಣೆಗೆ ಕರೆಸಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು.
ಸಂತೋಷ ಹಾಗೂ ಶಿಲ್ಪಾ ಜೊತೆಯಾಗಿ ಇರುವುದು ಬೇಡ, ಸಂತೋಷಗೆ ಇನ್ನೊಂದು ಮದುವೆ ಮಾಡಬೇಕು ಎಂದುಕೊಂಡಿದ್ದ ಸಂತೋಷ ಸಂಬಂಧಿಗಳು, ಕೊನೆಗೆ ಕಾನೂನು ಕ್ರಮ್ಕಕೆ ಹೆದರಿ ಸುಮ್ಮನಾಗಿದ್ದಾರೆ. ಇನ್ನೂ ಶಿಲ್ಪಾ ನೀಡಿರುವ ದೂರನ್ನು ದಾಖಲಿಸುವುದು ಬೇಡ ಅವರಿಬ್ಬರು ಜೊತೆಯಾಗಿರಲಿ ಅಂತ ರಾಜಿ ಪಂಚಾಯತಿ ಮಾಡಿಕೊಂಡ ಕಾರಣ ಕಾನೂನು ಸೇವಾ ಪ್ರಾಧಿಕಾರದ ನ್ಯಾಯದೀಶರಾದ ಲಕ್ಷ್ಮಿಕಾಂತ್ ಜೆ ಮಿಷ್ಕಿನ್ ಸಮ್ಮೂಖದಲ್ಲಿ ಮತ್ತೆ ಶಿಲ್ಪಾ ಹಾಗೂ ಸಂತೋಷ ಪರಸ್ಪರ ಹಾರ ಬದಲಾಯಿಸಿಕೊಂಡು ಪರಸ್ಪರ ಸಿಹಿ ತಿನ್ನುವುದರ ಮೂಲಕ ಸಂತಸ ಹಂಚಿಕೊಂಡರು. (ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಫುರ)
Published On - 9:07 pm, Fri, 10 February 23