- Kannada News Photo gallery Chitradurga special different jatre slippers banned in village during fair
Chitradurga: 32 ವರ್ಷಗಳ ಬಳಿಕ ಕೋಟೆನಾಡಲ್ಲಿ ವಿಶೇಷ ಜಾತ್ರೆ ಸಂಭ್ರಮ, ಇಡೀ ಊರಲ್ಲಿ ಪಾದರಕ್ಷೆ ನಿಷೇಧ
ಕೋಟೆನಾಡು ಚಿತ್ರದುರ್ಗ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ 32 ವರ್ಷಗಳ ಬಳಿಕ ಗ್ರಾಮ ದೇವತೆಯರ ಉತ್ಸವ ನಡೆಯುತ್ತಿದೆ. ಈ ಉತ್ಸವದ ವಿಶೇಷ ಅಂದ್ರೆ ಸರಗಾ. ಅಂದ್ರೆ ಇಡೀ ಗ್ರಾಮದ ಸೀಮೆಗೆ ವಿಶೇಷ ಗಂಗಾಜಲ ಚಿಮುಕಿಸಿ ಸರಗಾ ಹಾಕಲಾಗುತ್ತದೆ.
Updated on:Jan 20, 2023 | 8:13 AM

ದೇವಸ್ಥಾನಗಳಿಗೆ ಹೋಗುವಾಗ ಚಪ್ಪಲಿ ಧರಿಸುವಂತಿಲ್ಲ. ದೇವರ ಸನ್ನಿಧಿಗೆ ಹೋಗುವಾಗ ಪಾದರಕ್ಷೆ ಹಾಕುವಂತಿಲ್ಲ ನಿಜ. ಆದ್ರೆ ಅದೊಂದು ಊರಿಗೆ ಎಂಟ್ರಿಯಾಗಬೇಕು ಅಂದ್ರೆ ಚಪ್ಪಲಿಯನ್ನ ಬಿಟ್ಟೇ ಹೋಗ್ಬೇಕು. ಆ ಊರಿನ ರಸ್ತೆ ಮೂಲಕ ಮುಂದಿನ ಊರಿಗೆ ಹೋಗಬೇಕು ಅಂದ್ರೂ ಚಪ್ಪಲಿಯನ್ನ ಕೈಯಲ್ಲೇ ಹಿಡಿಯ ಬೇಕು.

ಮೂರು ದಶಕಗಳ ಬಳಿಕ ಗ್ರಾಮ ದೇವತೆಯ ಜಾತ್ರೆ ನಡೆಯುತ್ತಿದೆ. ಇಡೀ ಊರು ಸಂಭ್ರಮದಲ್ಲಿದೆ. ಹೀಗೆ ಸಂಭ್ರಮದ ನಡುವೆ ಇಲ್ಲೊಂದು ವಿಶೇಷ ಆಚರಣೆಯೂ ನಡೆಯುತ್ತಿದೆ. ಕೋಟೆನಾಡು ಚಿತ್ರದುರ್ಗ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ 32 ವರ್ಷಗಳ ಬಳಿಕ ಗ್ರಾಮ ದೇವತೆಯರ ಉತ್ಸವ ನಡೆಯುತ್ತಿದೆ.

ಗ್ರಾಮದ ದುರ್ಗಾಂಬಾ, ಮಾರಿಕಾಂಬಾ ಹಾಗೂ ಬಸಾಯ ಪಟ್ಟಣಂ ದೇವಿಯರ ಉತ್ಸವವನ್ನ ಗ್ರಾಮಸ್ಥರು ಆಯೋಜಿಸಿದ್ದಾರೆ. ಮೊದಲ ದಿನ ಗಂಗಾಪೂಜೆ, ಉತ್ಸವ ಮೂರ್ತಿಗಳ ಮೆರವಣಿಗೆ, ವಿಶೇಷ ಪೂಜಾ ಆಚರಣೆ ನಡೆದಿದೆ.

ಇನ್ನು ಈ ಉತ್ಸವದ ವಿಶೇಷ ಅಂದ್ರೆ ಸರಗಾ. ಅಂದ್ರೆ ಇಡೀ ಗ್ರಾಮದ ಸೀಮೆಗೆ ವಿಶೇಷ ಗಂಗಾಜಲ ಚಿಮುಕಿಸಿ ಸರಗಾ ಹಾಕಲಾಗುತ್ತದೆ. ಗ್ರಾಮಕ್ಕೆ ಗ್ರಾಮವನ್ನೇ ಶುದ್ಧಗೊಳಿಸಿ ಒಂದೇ ಮನೆಯಂತೆ ಭಾವಿಸಲಾಗುತ್ತೆ. ಇದೇ ಕಾರಣಕ್ಕೆ ಇಲ್ಲಿ ಯಾರು ಕೂಡಾ ಚಪ್ಪಲಿ ಧರಿಸುವಂತಿಲ್ಲ.

ಗ್ರಾಮದಲ್ಲಿ ಓಡಾಡುವವರು ಮಾತ್ರವಲ್ಲ ಈ ಗ್ರಾಮದ ರಸ್ತೆಯಲ್ಲಿ ಹಾದು ಹೋಗುವವರು ಸಹ ಪಾದರಕ್ಷೆ ಧರಿಸುವಂತಿಲ್ಲ. ಬೈಕ್ ಮತ್ತು ಕಾರಿನಲ್ಲಿ ಸಂಚರಿಸುವವರು ಕೂಡಾ ಪಾದರಕ್ಷೆ ತೆಗೆದು ಬ್ಯಾಗ್ಗಳಲ್ಲಿಟ್ಟುಕೊಂಡು ಹೋಗುವಂತೆ ಸೂಚಿಸಲಾಗುತ್ತದೆ. ಅದಕ್ಕೆಂದೆ ಗ್ರಾಮದ ಕೆಲ ಯುವಕರು ನಿಗಾವಹಿಸುತ್ತಾರೆ.

ಒಟ್ನಲ್ಲಿ ಆಧುನಿಕತೆ ಭರಾಟೆ, ಭಕ್ತಿಭಾವ ಮರೆಯಾಗಿರೋ ಈ ದಿನಗಳಲ್ಲಿ ಕೋಟೆನಾಡಿನ ಜನ ಮಾತ್ರ ಹಿಂದಿನಿಂದಲೂ ತಮ್ಮ ಸಂಪ್ರದಾಯ, ಆಚರಣೆಗಳಿಗೆ ಮಾತ್ರ ಎಳ್ಳುನೀರು ಬಿಡದೆ ಶ್ರದ್ಧೆಯಿಂದ ಆಚರಿಸುತ್ತಾರೆ. ಅದಕ್ಕೆ ಸಾಕ್ಷಿಯೇ ಈ ಉತ್ಸವ.
Published On - 8:13 am, Fri, 20 January 23




