ಇಂದಿನ ಕಾಲದಲ್ಲಿ ಭಾರತವನ್ನು ಕ್ರಿಕೆಟ್‌ನಲ್ಲಿ ಸೂಪರ್ ಪವರ್ ಎಂದು ಕರೆಯಲಾಗುತ್ತದೆ. ಪ್ರಸ್ತುತ ಭಾರತ ಕ್ರಿಕೆಟ್ ತಂಡವು ಯಾವುದೇ ದೇಶಕ್ಕೆ ಹೋಗಿ ಗೆಲ್ಲುವ ತಂಡ ಎಂದು ಪರಿಗಣಿಸಲಾಗಿದೆ. ಆದರೆ ಒಂದು ಕಾಲದಲ್ಲಿ ಹಾಗಿರಲಿಲ್ಲ. ಭಾರತವನ್ನು ಕ್ರಿಕೆಟ್ ಜಗತ್ತಿನಲ್ಲಿ ದುರ್ಬಲ ತಂಡಗಳೆಂದು ಪರಿಗಣಿಸಲಾಗಿತ್ತು. ನಂತರ 25 ಜೂನ್ 1983 ರ ದಿನ ಇಡೀ ಜಗತ್ತೆ ಭಾರತದತ್ತ ತಿರುಗಿ ನೋಡುವಂತ್ತಾಗಿತ್ತು. ಈ ದಿನ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತನ್ನ ಮೊದಲ ವಿಶ್ವಕಪ್ ಗೆದ್ದಿತು. ಅದೂ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ. ಇಲ್ಲಿಂದ ಭಾರತೀಯ ಕ್ರಿಕೆಟ್ ಕಥೆಯೇ ಬದಲಾಯಿತು. ಆ ಫೈನಲ್ ಪಂದ್ಯದ ಐದು ವಿಶೇಷ ವಿಷಯಗಳನ್ನು ನಾವು ನಿಮಗೆ ಹೇಳಲಿದ್ದೇವೆ.
ಈ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟ್ ಮಾಡಿತ್ತು. ಸುನಿಲ್ ಗವಾಸ್ಕರ್ ಕೇವಲ ಎರಡು ರನ್ ಗಳಿಸಿ ಔಟಾದರು. ಆದರೆ ಜೊತೆಗಾರ ಕೃಷ್ಣಾಚಾರಿ ಶ್ರೀಕಾಂತ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 38 ರನ್ ಗಳಿಸಿದರು. ಚುರುಕಾಗಿ ಬ್ಯಾಟಿಂಗ್ ಮಾಡಿದ ಶ್ರೀಕಾಂತ್ 57 ಎಸೆತಗಳನ್ನು ಎದುರಿಸಿ ಏಳು ಬೌಂಡರಿಗಳ ಜತೆಗೆ ಒಂದು ಸಿಕ್ಸರ್ ಬಾರಿಸಿದರು. ಈ ಪಂದ್ಯದಲ್ಲಿ ಶ್ರೀಕಾಂತ್ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಭಾರತ 183 ರನ್ ಗಳಿಸಿತ್ತು.
ಭಾರತವು ಕಡಿಮೆ ಸ್ಕೋರ್ ರಕ್ಷಿಸಬೇಕಾಗಿದ್ದರೆ ಆರಂಭದಿಂದಲೂ ವಿಕೆಟ್ಗಳ ಅಗತ್ಯವಿತ್ತು. ಆ ಕಾಲದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಗಾರ್ಡನ್ ಗ್ರೀನಿಡ್ಜ್ ಅವರನ್ನು ಬಲ್ವಿಂದರ್ ಸಂಧು ಒಂದು ರನ್‌ನ ವೈಯಕ್ತಿಕ ಸ್ಕೋರ್‌ನಲ್ಲಿ ಔಟಾಗುವ ಮೂಲಕ ಭಾರತಕ್ಕೆ ಬಯಸಿದ ಆರಂಭವನ್ನು ನೀಡಿದರು.
ಗ್ರೀನಿಡ್ಜ್ ನಿರ್ಗಮನದ ನಂತರ, ಮೂರನೇ ಕ್ರಮಾಂಕದಲ್ಲಿ ಬಂದ ವಿವಿಯನ್ ರಿಚರ್ಡ್ಸ್ ಭಾರತಕ್ಕೆ ಬೆದರಿಕೆಯೊಡ್ಡುತ್ತಿದ್ದರು ಮತ್ತು ನಿರಂತರವಾಗಿ ರನ್ ಗಳಿಸುತ್ತಿದ್ದರು. ಆದರೆ ಟೀಮ್ ಇಂಡಿಯಾದ ನಾಯಕ ಕಪಿಲ್ ದೇವ್ ಅವರ ಅದ್ಭುತ ಕ್ಯಾಚ್ ರಿಚರ್ಡ್ಸ್ ಇನ್ನಿಂಗ್ಸ್ ಕೊನೆಗೊಳಿಸುವ ಮೂಲಕ ಭಾರತಕ್ಕೆ ಬಿಗ್ ರಿಲೀಫ್ ನೀಡಿತು. ಲೆಗ್ ಅಂಪೈರ್ ಬಳಿ ನಿಂತಿದ್ದ ಕಪಿಲ್, ಹಿಂದಕ್ಕೆ ಓಡುತ್ತಾ ಈ ಕಠಿಣ ಕ್ಯಾಚ್ ಹಿಡಿದು ರಿಚರ್ಡ್ಸ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. 28 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದರು.
ಮೊಹಿಂದರ್ ಅಮರನಾಥ್ 1983 ರ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜೊತೆಗೆ ಫೈನಲ್‌ನಲ್ಲಿ ಪಂದ್ಯದ ಆಟಗಾರ ಎಂಬ ಗೌರವವನ್ನೂ ಪಡೆದರು. ಈ ಪಂದ್ಯದಲ್ಲಿ ಅಮರನಾಥ್ ಮೂರು ವಿಕೆಟ್ ಪಡೆದರು. ಅದರಲ್ಲಿ ಜೆಫ್ ಡಜನ್ ವಿಕೆಟ್ ಕೂಡ ಒಂದು. ಜೆಫ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದು, ಭಾರತಕ್ಕೆ ಅಪಾಯಕಾರಿಯಾಗಿದ್ದರು. 26 ರನ್ ಗಳಿಸಿದ್ದ ಜೆಫ್ ಅವರನ್ನು ಅಮರನಾಥ್ ಅವರನ್ನು ಬೌಲ್ಡ್ ಮಾಡಿದರು. ಒಟ್ಟು 119 ರನ್‌ಗಳಾಗುವಷ್ಟರಲ್ಲಿ ಅವರ ವಿಕೆಟ್ ಪತನವಾಯಿತು.
ಭಾರತವನ್ನು ವಿಶ್ವ ಚಾಂಪಿಯನ್ ಮಾಡಿದ ಆ ಸ್ಮರಣೀಯ ವಿಕೆಟ್, ಅಂದರೆ ವೆಸ್ಟ್ ಇಂಡೀಸ್‌ನ ಕೊನೆಯ ವಿಕೆಟ್ ಅನ್ನು ಅಮರನಾಥ್ ಪಡೆದರು. ಅಮರನಾಥ್ ಮೈಕೆಲ್ ಹೋಲ್ಡಿಂಗ್ರನ್ನು ಎಲ್ಬಿಡಬ್ಲ್ಯೂ ಮೂಲಕ ಔಟ್ ಮಾಡಿದರು ಮತ್ತು ವೆಸ್ಟ್ ಇಂಡೀಸ್ ಇನ್ನಿಂಗ್ಸ್ ಅನ್ನು 140 ರನ್ ಗಳಿಗೆ ಔಟ್ ಮಾಡಿದರು. ಇದರೊಂದಿಗೆ ಭಾರತವನ್ನು ವಿಶ್ವ ಚಾಂಪಿಯನ್ ಮಾಡಿದರು. ಇದಾದ ನಂತರ ಕಪಿಲ್ ದೇವ್ ಲಾರ್ಡ್ಸ್ ಬಾಲ್ಕನಿಯಲ್ಲಿ ವಿಶ್ವಕಪ್ ಟ್ರೋಫಿ ಎತ್ತಿ ಈ ಕ್ಷಣವನ್ನು ಶಾಶ್ವತವಾಗಿ ಸ್ಮರಣೀಯವಾಗಿಸಿದರು.
Published On - 2:14 pm, Fri, 24 June 22