- Kannada News Photo gallery Cricket photos Abhishek Sharma smashed Joint Fastest Hundred by an Indian in T20
11 ಸಿಕ್ಸ್, 8 ಫೋರ್: ಟಿ20 ಕ್ರಿಕೆಟ್ನಲ್ಲಿ ಶರ ವೇಗದ ಸೆಂಚುರಿ ಸಿಡಿಸಿದ ಅಭಿಷೇಕ್ ಶರ್ಮಾ
Meghalaya vs Punjab: ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೇಘಾಲಯ ತಂಡವು 142 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಪಂಜಾಬ್ ಪರ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೇವಲ 29 ಎಸೆತಗಳನ್ನು ಎದುರಿಸಿದ ಅಭಿಷೇಕ್ 11 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 106 ರನ್ ಬಾರಿಸಿದ್ದಾರೆ. ಈ ಮೂಲಕ ಕೇವಲ 9.3 ಓವರ್ಗಳಲ್ಲಿ ಗುರಿ ಮುಟ್ಟಿಸಿ ಪಂಜಾಬ್ ತಂಡಕ್ಕೆ 7 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
Updated on: Dec 05, 2024 | 12:25 PM

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ಅಭಿಷೇಕ್ ಶರ್ಮಾ ಅಗ್ರಸ್ಥಾನಕ್ಕೇರಿದ್ದಾರೆ. ಅದು ಸಹ ಕೇವಲ 28 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದ ಉರ್ವಿಲ್ ಪಟೇಲ್ ಅವರ ರೆಕಾರ್ಡ್ ಅನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

ಪ್ರಸ್ತುತ ನಡೆಯುತ್ತಿರುವ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ತ್ರಿಪುರ ವಿರುದ್ಧ ಪಂದ್ಯದಲ್ಲಿ ಗುಜರಾತ್ ತಂಡದ ಆರಂಭಿಕ ಆಟಗಾರ ಉರ್ವಿಲ್ ಕೇವಲ 28 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಒಂದೇ ವಾರದೊಳಗೆ ಈ ದಾಖಲೆಯನ್ನು ಪಂಜಾಬ್ ತಂಡದ ನಾಯಕ ಅಭಿಷೇಕ್ ಶರ್ಮಾ ಸರಿಗಟ್ಟಿದ್ದಾರೆ. ರಾಜ್ಕೋಟ್ನಲ್ಲಿ ನಡೆದ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.

ಈ ಮೂಲಕ ಟಿ20 ಪಂದ್ಯದಲ್ಲಿ ಶರ ವೇಗದ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಅತೀ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ವಿಶ್ವದ 3ನೇ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸಾಹಿಲ್ ಚೌಹಾನ್. 2024 ರಲ್ಲಿ ಎಸ್ಟೋನಿಯಾ ಪರ ಕಣಕ್ಕಿಳಿದ ಸಾಹಿಲ್, ಸೈಪ್ರಸ್ ವಿರುದ್ಧದ ಟಿ20 ಪಂದ್ಯದಲ್ಲಿ ಕೇವಲ 27 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇದಾದ ಬಳಿಕ ಉರ್ವಿಲ್ ಪಟೇಲ್ (ಗುಜರಾತ್) 28 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಈ ವಿಶ್ವ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದರು. ಇದೀಗ ಅಭಿಷೇಕ್ ಶರ್ಮಾ ಕೂಡ 28 ಎಸೆತಗಳಲ್ಲಿ ಶತಕ ಬಾರಿಸಿ ಈ ಪಟ್ಟಿಯಲ್ಲಿ ಜಂಟಿಯಾಗಿ 2ನೇ ಸ್ಥಾನ ಅಲಂಕರಿಸಿದ್ದಾರೆ.




