- Kannada News Photo gallery Cricket photos Abhishek Sharma Record Alert: Fastest 1000 T20 Runs vs Australia Final
IND vs AUS: ಕೇವಲ 11 ರನ್.. ಇತಿಹಾಸ ಸೃಷ್ಟಿಸಲಿದ್ದಾರೆ ಅಭಿಷೇಕ್ ಶರ್ಮಾ
Abhishek Sharma T20 record: ಭಾರತ-ಆಸ್ಟ್ರೇಲಿಯಾ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಸರಣಿ ಗೆಲ್ಲುವ ಅವಕಾಶವಿದೆ. ಯುವ ಆರಂಭಿಕ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಮಹತ್ವದ ದಾಖಲೆ ಸೃಷ್ಟಿಸುವ ಸನಿಹದಲ್ಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಮತ್ತು ಅತಿ ಕಡಿಮೆ ಎಸೆತಗಳಲ್ಲಿ 1000 ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಸಿದ್ಧರಾಗಿದ್ದಾರೆ. ಇದು ಸಾಧ್ಯವಾದರೆ, ಟಿಮ್ ಡೇವಿಡ್ ಅವರ ದಾಖಲೆ ಮುರಿದು, ವಿರಾಟ್ ಕೊಹ್ಲಿ ನಂತರ ಎರಡನೇ ಅತಿ ವೇಗದ ಭಾರತೀಯರಾಗಲಿದ್ದಾರೆ.
Updated on: Nov 07, 2025 | 10:25 PM

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಆದ್ದರಿಂದ, ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಸರಣಿ ಗೆಲ್ಲುವ ಅವಕಾಶವಿದ್ದರೆ, ಆಸ್ಟ್ರೇಲಿಯಾ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಹೋರಾಡಲಿದೆ. ಇನ್ನು ಇದೇ ಪಂದ್ಯದಲ್ಲಿ ಭಾರತದ ಯುವ ಆರಂಭಿಕ ಅಭಿಷೇಕ್ ಶರ್ಮಾ ಐದನೇ ಪಂದ್ಯದಲ್ಲಿ ದಾಖಲೆ ಸೃಷ್ಟಿಸುವ ಅವಕಾಶವನ್ನು ಹೊಂದಿದ್ದಾರೆ.

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಈಗ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ವರ್ಷ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಅವರ ಬ್ಯಾಟ್ ರನ್‌ಗಳ ಮಳೆ ಹರಿಸಿದೆ. ಇದೀಗ ಅವರು ಐದನೇ ಟಿ20 ಪಂದ್ಯದಲ್ಲಿ ದೊಡ್ಡ ಮೈಲಿಗಲ್ಲು ತಲುಪಲು ಸಜ್ಜಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 11 ರನ್ ಬಾರಿಸಿದರೆ, ಟಿ20 ಕ್ರಿಕೆಟ್‌ನಲ್ಲಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದು ಸಾಧ್ಯವಾದರೆ, ಅಭಿಷೇಕ್ ಶರ್ಮಾ ಈ ವಿಚಾರದಲ್ಲಿ ಆಸ್ಟ್ರೇಲಿಯಾದ ಟಿಮ್ ಡೇವಿಡ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.

ಹಾಗೆಯೇ ಅಭಿಷೇಕ್ ಶರ್ಮಾ ವೇಗವಾಗಿ 1000 ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಆಗಲಿದ್ದಾರೆ. ವಿರಾಟ್ ಕೊಹ್ಲಿ 27 ಇನ್ನಿಂಗ್ಸ್‌ಗಳಲ್ಲಿ 1000 ರನ್ ಮೈಲುಗಲ್ಲು ಪೂರ್ಣಗೊಳಿಸಿದ್ದರು. ಈಗ ಅಭಿಷೇಕ್ 28 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಪೂರ್ಣಗೊಳಿಸುವ ಅವಕಾಶವನ್ನು ಹೊಂದಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ ದಾಖಲೆ ಡೇವಿಡ್ ಮಲನ್ ಅವರ ಹೆಸರಿನಲ್ಲಿದೆ. ಅವರು 24 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಮತ್ತೊಂದೆಡೆ, ಟಿಮ್ ಡೇವಿಡ್ ಕಡಿಮೆ ಎಸೆತಗಳಲ್ಲಿ 1000 ರನ್‌ಗಳ ಗಡಿಯನ್ನು ತಲುಪಿದ ದಾಖಲೆ ಹೊಂದಿದ್ದಾರೆ. ಅವರು 569 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಪ್ರಸ್ತುತ ಅಭಿಷೇಕ್ 521 ಎಸೆತಗಳಲ್ಲಿ 989 ರನ್ ಗಳಿಸಿದ್ದಾರೆ. ಇದೀಗ ಟಿಮ್ ಡೇವಿಡ್ ಅವರನ್ನು ಮೀರಿಸಲು ಅಭಿಷೇಕ್‌ಗೆ ದೊಡ್ಡ ಅವಕಾಶವಿದೆ.
