
ಅಫ್ಘಾನಿಸ್ತಾನ್ ಕ್ರಿಕೆಟ್‌ನ ವೇಗದ ಬೌಲರ್ ಶಾಪೂರ್ ಝದ್ರಾನ್ (38) ಅವರು ಜುಲೈ 7, 2026 ರಂದು ಭಾರತದ ನವ ದೆಹಲಿಯಲ್ಲಿ ನಿಧನರಾಗಿದ್ದರು. ಕಳೆದ ಕೆಲವು ಸಮಯದಿಂದ ‘ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್’ (HLH) ಎಂಬ ಅಪರೂಪದ ರೋಗನಿರೋಧಕ ಶಕ್ತಿಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಳಗವಾರ ಕೊನೆಯುಸಿರೆಳೆದಿದ್ದರು. (PC: ACB)

ಜುಲೈ 8, 2026ರ ಬುಧವಾರದಂದು ಸಂಜೆ 4:00 ಗಂಟೆಗೆ ಕಾಮ್ ಏರ್ ವಿಮಾನದ ಮೂಲಕ ಶಾಪೂರ್ ಅವರ ಪಾರ್ಥಿವ ಶರೀರವನ್ನು ಭಾರತದಿಂದ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅತ್ಯಂತ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿತ್ತು. (PC: ACB)

ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ (ACB) ಅಧಿಕಾರಿಗಳು, ಸ್ಟಾರ್ ಆಟಗಾರರಾದ ಇಬ್ರಾಹಿಂ ಝದ್ರಾನ್, ರಶೀದ್ ಖಾನ್, ಮೊಹಮ್ಮದ್ ನಬಿ, ರಹಮಾನುಲ್ಲಾ ಗುರ್ಬಾಝ್ ಸೇರಿದಂತೆ ಹಾಲಿ ಮತ್ತು ಮಾಜಿ ಸಹ ಆಟಗಾರರು ಹಾಗೂ ಸರ್ಕಾರಿ ಗಣ್ಯರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಣ್ಣೀರಿನ ವಿದಾಯ ಹೇಳಿದರು. (PC: ACB)

ಅಫ್ಘನಿಸ್ತಾನ್ ಆಟಗಾರರು ಹೆಗಲು ಕೊಟ್ಟು ಶಾಪೂರ್ ಝದ್ರಾನ್ ಅವರ ಶವಪೆಟ್ಟಿಗೆಯನ್ನು ಸಾಗಿಸಿದರು. ಅಲ್ಲಿಂದ ಪಾರ್ಥಿವ ಶರೀರವನ್ನು ಬಗ್ರಾಮಿ ಜಿಲ್ಲೆಯ ಸದ್ರ್-ಎ-ಅಜಮ್ ಟೌನ್‌ಶಿಪ್‌ನಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಅಫ್ಘಾನ್ ಕ್ರಿಕೆಟ್ ಮಂಡಳಿಯ ಮಾಹಿತಿ ಪ್ರಕಾರ, ಇಂದು (ಜುಲೈ 9, 2026, ಗುರುವಾರ) ಶಾಪೂರ್ ಜದ್ರಾನ್ ಅವರ ಅಂತ್ಯಕ್ರಿಯೆ ನೆರವೇರಲಿದೆ. (PC: ACB)

ಅಫ್ಘಾನಿಸ್ತಾನದ ಹೆಮ್ಮೆಯ ಕ್ರಿಕೆಟಿಗನ ಗೌರವಾರ್ಥವಾಗಿ, ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ‘ಶ್ಪಗೀಜಾ ಕ್ರಿಕೆಟ್ ಲೀಗ್’ ಪಂದ್ಯಾವಳಿಗಳನ್ನು ಜುಲೈ 8 ಮತ್ತು 9 ರಂದು ಸಂಪೂರ್ಣವಾಗಿ ಮುಂದೂಡಲಾಗಿದೆ ಎಂದು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ರಕಟಿಸಿದೆ. (PC: ACB)

ಶಾಪೂರ್ ಝದ್ರಾನ್ ಕೇವಲ ಬೌಲರ್ ಆಗಿರಲಿಲ್ಲ, ಅಫ್ಘಾನ್ ಕ್ರಿಕೆಟ್‌ನ ಭದ್ರ ಬುನಾದಿಯಾಗಿದ್ದರು. ದೇಶದ ಪರ 80 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 80 ವಿಕೆಟ್ ಕಬಳಿಸಿದ್ದರು. ಅಷ್ಟೇ ಅಲ್ಲದೆ 2015ರ ಏಕದಿನ ವಿಶ್ವಕಪ್‌ನಲ್ಲಿ ಸ್ಕಾಟ್‌ಲ್ಯಾಂಡ್ ವಿರುದ್ಧ ವಿನ್ನಿಂಗ್ ರನ್ ಬಾರಿಸಿ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದರು. ಅವರ ಸುದೀರ್ಘ ರನ್ನಿಂಗ್ ಮತ್ತು ಅದ್ಭುತ ಬೌಲಿಂಗ್ ಶೈಲಿಯನ್ನು ಕ್ರಿಕೆಟ್ ಲೋಕ ಎಂದಿಗೂ ಮರೆಯುವುದಿಲ್ಲ. (PC: ACB)