
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 4 ತಂಡಗಳು ಮಾತ್ರ ಡಬಲ್ ಸೂಪರ್ ಓವರ್‌ಗಳ ಪಂದ್ಯಗಳನ್ನಾಡಿದೆ. ಈ ಪಂದ್ಯಗಳಲ್ಲಿ ಎರಡು ಬಾರಿ ಕಾಣಿಸಿಕೊಂಡ ತಂಡ ಅಫ್ಘಾನಿಸ್ತಾನ್. ಅಂದರೆ ಅಫ್ಘಾನ್ ಪಡೆ ಟಿ20 ಕ್ರಿಕೆಟ್‌ನಲ್ಲಿ 2 ಬಾರಿ ಡಬಲ್ ಸೂಪರ್ ಓವರ್ ಪಂದ್ಯಗಳನ್ನಾಡಿದೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಡಬಲ್ ಸೂಪರ್ ಓವರ್ ಪಂದ್ಯ ನಡೆದಿದ್ದು 2024 ರಲ್ಲಿ. ಅದು ಸಹ ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 212 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ್ ಕೂಡ 212 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡರು.

ಆ ಬಳಿಕ ನಡೆದ ಮೊದಲ ಸೂಪರ್ ಓವರ್ ನಲ್ಲಿ ಅಫ್ಘಾನಿಸ್ತಾನ್ 16 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಗಳಿಸಿದ್ದು ಕೂಡ 16 ರನ್. ಆ ನಂತರ ನಡೆದ ದ್ವಿತೀಯ ಸೂಪರ್ ಓವರ್‌ನಲ್ಲಿ ಟೀಮ್ ಇಂಡಿಯಾ 11 ರನ್ ಕಲೆಹಾಕಿದರು.12 ರನ್ ಗಳ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ್ 1 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ಡಬಲ್ ಸೂಪರ್ ಓವರ್ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದಿದ್ದರು.

ಈ ಪಂದ್ಯದ ಬಳಿಕ 2025 ರಲ್ಲಿ ನೆದರ್ಲೆಂಡ್ಸ್ ಹಾಗೂ ನೇಪಾಳ ನಡುವೆ ತ್ರಿಪಲ್ ಸೂಪರ್ ಓವರ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಉಭಯ ತಂಡಗಳು 20 ಓವರ್‌ಗಳಲ್ಲಿ 152 ರನ್ ಕಲೆಹಾಕಿದ್ದರಿಂದ ಸೂಪರ್ ಓವರ್ ಆಡಿಸಲಾಯಿತು. ಮೊದಲ ಸೂಪರ್ ಓವರ್‌ನಲ್ಲಿ ಎರಡೂ ತಂಡಗಳು 20 ರನ್ ಗಳಿಸಿದ್ದರಿಂದ ಎರಡನೇ ಓವರ್ ಸೂಪರ್ ಆಡಿಸಲಾಯಿತು. ಎರಡನೇ ಸೂಪರ್ ಓವರ್‌ನಲ್ಲಿ ಉಭಯ ತಂಡಗಳು 18 ರನ್ ಗಳಿಸಿದ್ದರಿಂದ ಮೂರನೇ ಸೂಪರ್ ಓವರ್ ನೀಡಲಾಯಿತು.

ಮೂರನೇ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ರನ್ ಗಳಿಸುವ ಮುನ್ನವೇ 2 ವಿಕೆಟ್ ಕಳೆದುಕೊಂಡಿತು. ಅದರಂತೆ ಒಂದು ರನ್ನಿನ ಗುರಿ ಪಡೆದ ನೆದರ್ಲೆಂಡ್ಸ್ ಪರ ಮೈಕೆಲ್ ಲೆವಿಟ್ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿದರು. ಈ ಮೂಲಕ ಟಿ೨೦ ಇತಿಹಾಸದ ಮೊದಲ ತ್ರಿಪಲ್ ಸೂಪರ್ ಓವರ್ ಪಂದ್ಯ ಗೆದ್ದ ತಂಡವೆಂಬ ಹೆಗ್ಗಳಿಕೆಯನ್ನು ನೆದರ್ಲೆಂಡ್ಸ್ ತನ್ನದಾಗಿಸಿಕೊಂಡಿತು.

ಇದೀಗ ಟಿ20 ವಿಶ್ವಕಪ್‌ನಲ್ಲಿ ಮೊದಲ ಡಬಲ್ ಸೂಪರ್ ಓವರ್ ಆಡಿದ ತಂಡಗಳೆಂಬ ದಾಖಲೆಯನ್ನು ಸೌತ್ ಆಫ್ರಿಕಾ-ಅಫ್ಘಾನಿಸ್ತಾನ್ ತಮ್ಮದಾಗಿಸಿಕೊಂಡಿದ್ದಾರೆ. ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ೨೦ ವಿಶ್ವಕಪ್‌ನ 13ನೇ ಪಂದ್ಯದಲ್ಲಿ ಉಭಯ ತಂಡಗಳು 187 ರನ್ ಗಳಿಸಿದ್ದರಿಂದ ಪಂದ್ಯ ಟೈ ಆಯಿತು. ಆ ಬಳಿಕ ನಡೆದ ಮೊದಲ ಸೂಪರ್ ಓವರ್‌ನಲ್ಲಿ ಅಫ್ಘಾನಿಸ್ತಾನ್ 17 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಕೂಡ 17 ರನ್ ಗಳಿಸಿತು.

ಆ ಬಳಿಕ ನಡೆದ ಎರಡನೇ ಸೂಪರ್ ಓವರ್‌ನಲ್ಲಿ ಸೌತ್ ಆಫ್ರಿಕಾ 23 ರನ್ ಬಾರಿಸಿದ್ದಾರೆ. ಈ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ 19 ರನ್ ಗಳಿಸಿ 4 ರನ್ ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡರು. ಈ ಸೋಲಿನ ಹೊರತಾಗಿಯೂ ಟಿ೨೦ ಕ್ರಿಕೆಟ್ ಇತಿಹಾಸದಲ್ಲೇ 2 ಬಾರಿ ಡಬಕ್ ಸೂಪರ್ ಓವರ್ ಆಡಿದ ವಿಶ್ವದ ಏಕೈಕ ತಂಡವೆಂಬ ವಿಶ್ವ ದಾಖಲೆಯನ್ನು ಅಫ್ಘಾನಿಸ್ತಾನ್ ತನ್ನದಾಗಿಸಿಕೊಂಡಿದೆ. ಭಾರತ ಮತ್ತು ಸೌತ್ ಆಫ್ರಿಕಾ ವಿರುದ್ಧ ಡಬಲ್ ಸೂಪರ್ ಓವರ್ ಆಡುವ ಮೂಲಕ ಅಫ್ಘಾನಿಸ್ತಾನ್ ತಂಡ ಈ ವಿಶೇಷ ದಾಖಲೆ ಬರೆದಿದೆ.