ಇಂತಹದೊಂದು ಪವಾಡ ನಡೆದರೆ ಅಫ್ಘಾನಿಸ್ತಾನ್ ಸೆಮಿಫೈನಲ್ಗೆ..!
Champions Trophy 2025: ಚಾಂಪಿಯನ್ಸ್ ಟ್ರೋಫಿಯ ನಾಕೌಟ್ ಹಂತಕ್ಕೆ ಈಗಾಗಲೇ ಭಾರತ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಎಂಟ್ರಿ ಕೊಟ್ಟಿದೆ. ಇದಾಗ್ಯೂ ಸೆಮಿಫೈನಲ್ಗೇರಲಿರುವ ನಾಲ್ಕನೇ ತಂಡ ಯಾವುದೆಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಇಲ್ಲಿ ಸೌತ್ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ್ ನಡುವೆ ಪೈಪೋಟಿ ಇದ್ದು, ಇಂದಿನ ಪಂದ್ಯದ ಮೂಲಕ ಸೆಮಿಫೈನಲ್ಆಡಲಿರುವ 4ನೇ ತಂಡ ಯಾವುದೆಂಬುದು ನಿರ್ಧಾರವಾಗಲಿದೆ.
Updated on: Mar 01, 2025 | 9:04 AM

ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮೂರು ತಂಡಗಳು ಹೊರಬಿದ್ದರೆ, ಮೂರು ಟೀಮ್ಗಳು ಸೆಮಿಫೈನಲ್ಗೆ ಪ್ರವೇಶಿಸಿದೆ. ಇದಾಗ್ಯೂ ಸೆಮಿಫೈನಲ್ ಆಡಲಿರುವ 4ನೇ ತಂಡ ಯಾವುದೆಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ್ ನಡುವಣ ಪಂದ್ಯವು ಮಳೆಯಿಂದ ರದ್ದಾಗಿರುವುದು.

ಲಾಹೋರ್ನಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ್ ನಡುವಣ ಪಂದ್ಯವು ಮಳೆಗೆ ಅಹುತಿಯಾಗಿದೆ. ಹೀಗಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಈ ಒಂದು ಅಂಕದೊಂದಿಗೆ 4 ಪಾಯಿಂಟ್ಸ್ ಪಡೆದಿರುವ ಆಸ್ಟ್ರೇಲಿಯಾ ಸೆಮಿಫೈನಲ್ಗೇರಿದೆ.

ಆದರೆ ಇತ್ತ ಇಂಗ್ಲೆಂಡ್ ವಿರುದ್ಧ ಗೆದ್ದು 2 ಅಂಕಗಳನ್ನು ಪಡೆದಿದ್ದ ಅಫ್ಘಾನಿಸ್ತಾನ್ ತಂಡ ಒಟ್ಟು ಪಾಯಿಂಟ್ಸ್ ಮೂರಕ್ಕೇರಿದೆ. ಅತ್ತ ಸೌತ್ ಆಫ್ರಿಕಾ ತಂಡವು 3 ಅಂಕಗಳನ್ನು ಹೊಂದಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿದರೆ 5 ಅಂಕಗಳೊಂದಿಗೆ ಸೆಮಿಫೈನಲ್ಗೆ ಪ್ರವೇಶಿಸಲಿದೆ.

ಆದರೆ ಇಂಗ್ಲೆಂಡ್ ತಂಡ 207 ರನ್ಗಳ (ಕನಿಷ್ಠ 301 ರನ್ಗಳ ಟಾರ್ಗೆಟ್) ಅಂತರದಿಂದ ಗೆದ್ದರೆ ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಅಂದರೆ ಇಲ್ಲಿ +2.140 ನೆಟ್ ರನ್ ರೇಟ್ ಹೊಂದಿರುವ ಸೌತ್ ಆಫ್ರಿಕಾ ತಂಡವನ್ನು ಅಫ್ಘಾನಿಸ್ತಾನ್ (-0.990) ಹಿಂದಿಕ್ಕಬೇಕಿದ್ದರೆ ಇಂಗ್ಲೆಂಡ್ ಕನಿಷ್ಠ 207 ರನ್ಗಳ ಅಮೋಘ ಗೆಲುವು ದಾಖಲಿಸಬೇಕು.

ಕರಾಚಿ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ (ಮಾ.1) ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಇಂತಹದೊಂದು ಅಮೋಘ ಗೆಲುವು ದಾಖಲಿಸಿದರೆ ಮಾತ್ರ ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ಗೇರಬಹುದು. ಇದರ ಹೊರತಾಗಿ ಸೌತ್ ಆಫ್ರಿಕಾ ತಂಡ ಸೋತರೂ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಹೀಗಾಗಿ ಅಫ್ಘಾನ್ ಪಾಲಿಗೆ ಆಂಗ್ಲರು ಪವಾಡ ಸೃಷ್ಟಿಸಲಿದ್ದಾರಾ ಕಾದು ನೋಡಬೇಕಿದೆ.
























