- Kannada News Photo gallery Cricket photos Ajinkya Rahane in post match presentation he said I'm just trying to enjoy my game KKR vs CSK IPL 2023
Ajinkya Rahane: ಏಳು ವರ್ಷಗಳ ಬಳಿಕ ಮೊದಲ ಬಾರಿಗೆ ಪಂದ್ಯಶ್ರೇಷ್ಠ ಸ್ವೀಕರಿಸುವಾಗ ಅಜಿಂಕ್ಯಾ ರಹಾನೆ ಹೇಳಿದ್ದೇನು ನೋಡಿ
KKR vs CSK, IPL 2023: ಕೆಕೆಆರ್ ವಿರುದ್ಧ ನೀಡಿದ ಪ್ರದರ್ಶನಕ್ಕಾಗಿ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು. ವಿಶೇಷ ಎಂದರೆ, ಏಳು ಐಪಿಎಲ್ ಸೀಸನ್ಗಳ ಬಳಿಕ ರಹಾನೆ ಮೊದಲ ಬಾರಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
Updated on:Apr 24, 2023 | 11:12 AM

ಭಾನುವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2023ರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 49 ರನ್ಗಳ ಅಮೋಘ ಗೆಲುವು ಸಾಧಿಸಿತು. ಈ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ.

ಅಜಿಂಕ್ಯಾ ರಹಾನೆ ಹಾಗೂ ಶಿವಂ ದುಬೆ ಅವರ ಮನಮೋಹಕ ಬ್ಯಾಟಿಂಗ್ ನೆರವಿನಿಂದ ಸಿಎಸ್ಕೆ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 235 ರನ್ಸ್. ಅದರಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಹಾನೆ ಕೇವಲ 29 ಎಸೆತಗಳಲ್ಲಿ 6 ಫೋರ್, 5 ಸಿಕ್ಸರ್ ಸಿಡಿಸಿ ಅಜೇಯ 71 ರನ್ ಚಚ್ಚಿದರು.

ಈ ಅದ್ಭುತ ಪ್ರದರ್ಶನಕ್ಕಾಗಿ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಚಿಕೊಂಡರು. ವಿಶೇಷ ಎಂದರೆ ಏಳು ಐಪಿಎಲ್ ಸೀಸನ್ಗಳ ಬಳಿಕ ರಹಾನೆ ಮೊದಲ ಬಾರಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಈ ಸಂದರ್ಭ ಮಾತನಾಡಿದ ರಹಾನೆ, ನಾನು ಸ್ಪಷ್ಟ ಮನಸ್ಥಿತಿಯನ್ನು ಹೊಂದಿದ್ದೆ. ನೀವು ಕೇಳುವ ವಿಷಯ ಚೆನ್ನಾಗಿದ್ದರೆ, ನಿಮ್ಮ ಮನಸ್ಸು ಸರಿಯಾಗಿದ್ದರೆ ಎಲ್ಲವೂ ಅದ್ಭುತವಾಗಿರುತ್ತದೆ. ನಾನು ಆನಂದಿಸುತ್ತಾ ನನ್ನ ಆಟವನ್ನು ಆಡಿದೆ ಎಂದು ರಹಾನೆ ಹೇಳಿದ್ದಾರೆ.

ಈ ವಿಕೆಟ್ ಸ್ವಲ್ಪ ಜಿಗುಟಾಗಿತ್ತು. ಆದರೆ, ಲಯಕಂಡುಕೊಂಡರೆ ರನ್ ಗಳಿಸಲು ಇಲ್ಲಿ ಉತ್ತಮ ಅವಕಾಶವಿದೆ. ನಮ್ಮ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಬಳಿಕ ನಾನು ನನ್ನ ಆಟವನ್ನು ಶುರು ಮಾಡಿದೆ, ಅದೇ ವೇಗವನ್ನು ಕಾಯ್ದುಕೊಳ್ಳುವುದು ನನ್ನ ಗುರಿಯಾಗಿತ್ತು - ಅಜಿಂಕ್ಯಾ ರಹಾನೆ.

ನಾನು ನನ್ನ ಎಲ್ಲ ಅರ್ಧಶತಕವನ್ನು ಇಷ್ಟಪಡುತ್ತೇನೆ. ನನಗನಿಸುವ ಪ್ರಕಾರ ನನ್ನ ಅದ್ಭುತ ಎನ್ನುವ ಅರ್ಧಶತಕ ಇನ್ನಷ್ಟೆ ಬರಬೇಕಿದೆ. ಇಲ್ಲಿ ಕಲಿಯಲು ಸಾಕಷ್ಟು ಅವಕಾಶವಿದೆ. ನಾನು ಧೋನಿ ನಾಯಕತ್ವದಡಿಯಲ್ಲಿ ಅನೇಕ ಪಂದ್ಯಗಳನ್ನು ಭಾರತ ಪರ ಆಡಿದ್ದೇನೆ. ಈಗ ಸಿಎಸ್ಕೆ ತಂಡದ ಪರವಾಗಿಯು ಆಡುತ್ತಿದ್ದೇನೆ ಎಂಬುದು ರಹಾನೆ ಮಾತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ರಹಾನೆ ಅವರ ಅಜೇಯ 71 ರನ್, ಶಿವಂ ದುಬೆ 21 ಎಸೆತಗಳಲ್ಲಿ 50 ಮತ್ತು ಡೆವೊನ್ ಕಾನ್ವೇ 40 ಎಸೆತಗಳಲ್ಲಿ 56 ರನ್ಗಳನ್ನ ಸಿಡಿಸುವ ಮೂಲಕ ಎದುರಾಳಿಗೆ 236 ರನ್ಗಳ ಕಠಿಣ ಟಾರ್ಗೆಟ್ ನೀಡಿತು.

ಬೃಹತ್ ಮೊತ್ತ ಬೆನ್ನಟ್ಟಿದ ಕೆಕೆಆರ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ಜೇಸನ್ ರಾಯ್ 61 ರನ್ ಮತ್ತು ರಿಂಕು ಸಿಂಗ್ ಅಜೇಯ 53ರನ್ ಗಳನ್ನು ಬಾರಿಸಿ ಗೆಲುವಿಗಾಗಿ ಕೊನೆವರೆಗೂ ಹೋರಾಟ ನಡೆಸಿದರಾದರೂ ಸಾಧ್ಯವಾಗಲಿಲ್ಲ.
Published On - 11:12 am, Mon, 24 April 23














