Updated on:Jun 21, 2023 | 12:20 AM
Ashes 2023: ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ರೋಚಕ ಜಯ ಸಾಧಿಸಿದೆ. ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್ನಲ್ಲಿ ನೀಡಿದ 281 ರನ್ಗಳ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 8 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಈ ಮೂಲಕ 2 ವಿಕೆಟ್ಗಳ ರೋಚಕ ಜಯವನ್ನು ತನ್ನದಾಗಿಸಿಕೊಂಡಿದೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಜೋ ರೂಟ್ (118) ಅಜೇಯ ಶತಕ ಬಾರಿಸಿ ಮಿಂಚಿದರು. ಅಲ್ಲದೆ ಮೊದಲ ದಿನದಾಟದಲ್ಲೇ 8 ವಿಕೆಟ್ 393 ರನ್ ಪೇರಿಸಿ ಇಂಗ್ಲೆಂಡ್ ಡಿಕ್ಲೇರ್ ಘೋಷಿಸಿ ಅಚ್ಚರಿ ಮೂಡಿಸಿತು.
ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಮೊದಲ ಇನಿಂಗ್ಸ್ನಲ್ಲಿ ಮಿಂಚಿದ್ದು ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ. ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಖ್ವಾಜಾ 141 ರನ್ ಬಾರಿಸಿದರು. ಪರಿಣಾಮ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 386 ರನ್ಗಳಿಸಲು ಸಾಧ್ಯವಾಯಿತು.
ಇತ್ತ 7 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಪ್ಯಾಟ್ ಕಮಿನ್ಸ್ ಹಾಗೂ ನಾಥನ್ ಲಿಯಾನ್ ದಾಳಿಗೆ ತತ್ತರಿಸಿತು. ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 273 ರನ್ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಲಿಯಾನ್ ಹಾಗೂ ಕಮಿನ್ಸ್ ತಲಾ 4 ವಿಕೆಟ್ ಕಬಳಿಸಿ ಮಿಂಚಿದರು.
ಮೊದಲ ಇನಿಂಗ್ಸ್ನಲ್ಲಿನ 7 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 281 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 61 ರನ್ಗಳ ಜೊತೆಯಾಟವಾಡಿ ವಾರ್ನರ್ (36) ಔಟಾದರು. ಇದರ ಬೆನ್ನಲ್ಲೇ ಮಾರ್ನಸ್ ಲಾಬುಶೇನ್ (13) ಹಾಗೂ ಸ್ಟೀವ್ ಸ್ಮಿತ್ (6) ವಿಕೆಟ್ ಉರುಳಿಸಿ ಇಂಗ್ಲೆಂಡ್ ಬೌಲರ್ಗಳು ಮೇಲುಗೈ ಸಾಧಿಸಿದರು.
ಇದಾಗ್ಯೂ ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡವು 3 ವಿಕೆಟ್ ನಷ್ಟಕ್ಕೆ 107 ರನ್ ಕಲೆಹಾಕಿತು. ಅಲ್ಲದೆ ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 174 ರನ್ಗಳ ಅವಶ್ಯಕತೆಯಿತ್ತು. ಅತ್ತ ಇಂಗ್ಲೆಂಡ್ಗೆ ಜಯ ಸಾಧಿಸಲು 7 ವಿಕೆಟ್ಗಳ ಅಗತ್ಯವಿತ್ತು.
ಆದರೆ ಬೆಂಬಿಡದೆ ಸುರಿದ ಮಳೆಯಿಂದಾಗಿ ಕೊನೆಯ ದಿನದಾಟದ ಮೊದಲ ಸೆಷನ್ನಲ್ಲಿ ಆಟ ನಡೆದಿರಲಿಲ್ಲ. 2ನೇ ಸೆಷನ್ನೊಂದಿಗೆ ಶುರುವಾದ ಪಂದ್ಯದ ಆರಂಭದಲ್ಲೇ ಇಂಗ್ಲೆಂಡ್ ಬೌಲರ್ಗಳು ಮೇಲುಗೈ ಸಾಧಿಸಿದರು. ಆರಂಭದಲ್ಲೇ ಸ್ಕಾಟ್ ಬೋಲ್ಯಾಂಡ್ (20) ವಿಕೆಟ್ ಉರುಳಿಸಿ ಸ್ಟುವರ್ಟ್ ಬ್ರಾಡ್ ಯಶಸ್ಸು ತಂದುಕೊಟ್ಟರು.
ಇದರ ಬೆನ್ನಲ್ಲೇ ಮೊಯೀನ್ ಅಲಿ ಹೆಣೆದ ಬಲೆಗೆ ಟ್ರಾವಿಸ್ ಹೆಡ್ (16) ಕೂಡ ಬಿದ್ದರು. ಮತ್ತೊಂದೆಡೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಉಸ್ಮಾನ್ ಖ್ವಾಜಾ ಅರ್ಧಶತಕ ಬಾರಿಸಿದರು. ಆದರೆ ಮೂರನೇ ಸೆಷನ್ ಆರಂಭದಲ್ಲೇ ಕ್ಯಾಮರೋನ್ ಗ್ರೀನ್ (28) ರಾಬಿನ್ಸನ್ ಎಸೆತದಲ್ಲಿ ಬೌಲ್ಡ್ ಆದರು.
ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ 197 ಎಸೆತಗಳಲ್ಲಿ 65 ರನ್ ಬಾರಿಸಿದ್ದ ಉಸ್ಮಾನ್ ಖ್ವಾಜಾ ಅವರ ಅಮೂಲ್ಯ ವಿಕೆಟ್ ಉರುಳಿಸಿದರು. ಅಂತಿಮ 17 ಓವರ್ಗಳಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 54 ರನ್ಗಳ ಅವಶ್ಯಕತೆಯಿತ್ತು.
ಈ ವೇಳೆ ಸ್ಟೋಕ್ಸ್ ಜೋ ರೂಟ್ ಕೈಗೆ ಚೆಂಡಿತ್ತರು. ಅತ್ಯುತ್ತಮ ಸ್ಪಿನ್ ಮೋಡಿ ಮಾಡಿದ ರೂಟ್ ಅಲೆಕ್ಸ್ ಕ್ಯಾರಿಯ (20) ಅದ್ಭುತ ಕ್ಯಾಚ್ ಹಿಡಿದರು. ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಪ್ಯಾಟ್ ಕಮಿನ್ಸ್ ಒಂದೇ ಓವರ್ನಲ್ಲಿ 14 ರನ್ ಚಚ್ಚಿದರು.
ಕೊನೆಯ 10 ಓವರ್ಗಳಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು. ಇತ್ತ ಇಂಗ್ಲೆಂಡ್ಗೆ ಗೆಲ್ಲಲು 2 ವಿಕೆಟ್ಗಳ ಅಗತ್ಯವಿತ್ತು. ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಪ್ಯಾಟ್ ಕಮಿನ್ಸ್ ಹಾಗೂ ನಾಥನ್ ಲಿಯಾನ್ ಅರ್ಧಶತಕದ ಜೊತೆಯಾಟವಾಡಿದರು.
ಅಂತಿಮವಾಗಿ ಪ್ಯಾಟ್ ಕಮಿನ್ಸ್ (44) ಹಾಗೂ ನಾಥನ್ ಲಿಯಾನ್ (16) ಜೊತೆಗೂಡಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 141 ರನ್ ಬಾರಿಸಿದ್ದ ಉಸ್ಮಾನ್ ಖ್ವಾಜಾ 2ನೇ ಇನಿಂಗ್ಸ್ನಲ್ಲಿ 65 ರನ್ಗಳಿಸಿದರು. ಈ ಮೂಲಕ ಒಟ್ಟು 206 ರನ್ ಪೇರಿಸಿದ ಖ್ವಾಜಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.
Published On - 11:54 pm, Tue, 20 June 23