Ashwin: ಅಪರೂಪದ ದಾಖಲೆ ಬರೆದ ಅಶ್ವಿನ್
India vs England 4th Test: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಏಷ್ಯಾದ ಯಾವುದೇ ಆಟಗಾರನಿಗೂ ಸಾಧ್ಯವಾಗದ ಅಪರೂಪದ ರೆಕಾರ್ಡ್ ಎಂಬುದು ವಿಶೇಷ. ಹಾಗಿದ್ರೆ ಅಶ್ವಿನ್ ಬರೆದಿರುವ ಹೊಸ ದಾಖಲೆ ಯಾವುದೆಂದು ತಿಳಿಯೋಣ...
Updated on: Feb 24, 2024 | 9:09 AM

ರಾಂಚಿಯ ಜೆಎಸ್ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್ ಒಂದು ವಿಕೆಟ್ ಕಬಳಿಸಿದ್ದಾರೆ. ಈ ಒಂದು ವಿಕೆಟ್ನೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ವಿರುದ್ಧ 100 ವಿಕೆಟ್ಗಳನ್ನು ಪಡೆದ ಮೊದಲ ಭಾರತೀಯ ಎಂಬ ದಾಖಲೆಯನ್ನು ಅಶ್ವಿನ್ ತಮ್ಮದಾಗಿಸಿಕೊಂಡಿದ್ದಾರೆ.

ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧ 23 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಈ ವೇಳೆ 42 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಮೂಲಕ 100 ವಿಕೆಟ್ಗಳನ್ನು ಕಬಳಿಸಿ ಈ ವಿಶೇಷ ದಾಖಲೆ ಬರೆದಿದ್ದಾರೆ. ಇದರ ಜೊತೆಗೆ ಮತ್ತೊಂದು ಅಪರೂಪದ ದಾಖಲೆಯನ್ನೂ ಕೂಡ ನಿರ್ಮಿಸಿದ್ದಾರೆ.

ಅಂದರೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ + 1000 ರನ್ ಕಲೆಹಾಕಿದ ಏಷ್ಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾಗಿದ್ದಾರೆ. ಅಶ್ವಿನ್ ಅವರನ್ನು ಹೊರತುಪಡಿಸಿ ಏಷ್ಯಾದ ಯಾವುದೇ ಆಟಗಾರ 1000 ರನ್+100 ವಿಕೆಟ್ ಕಬಳಿಸಿಲ್ಲ ಎಂಬುದು ವಿಶೇಷ.

ಇಂಗ್ಲೆಂಡ್ ವಿರುದ್ಧ 100 ವಿಕೆಟ್ + 1000 ರನ್ ಕಲೆಹಾಕಿದ ಏಷ್ಯಾದ ಮೊದಲ ಆಟಗಾರ ಹಾಗೂ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೆ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ನ ಗ್ಯಾರಿ ಸೋಬರ್ಸ್, ಆಸ್ಟ್ರೇಲಿಯಾದ ಮೋನಿ ನೋಬಲ್, ಜಾರ್ಜ್ ಗಿಫೆನ್ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.

ಇದೀಗ ಇಂಗ್ಲೆಂಡ್ ವಿರುದ್ಧ 100 ವಿಕೆಟ್ ಮತ್ತು 1000 ರನ್‌ಗಳ ಈ ಐಕಾನಿಕ್ ಡಬಲ್ ದಾಖಲೆಯನ್ನು ಮಾಡಿದ ವಿಶ್ವದ 4ನೇ ಆಟಗಾರ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ. ಈ ಮೂಲಕ ಏಷ್ಯಾದ ಯಾವುದೇ ಆಟಗಾರನಿಂದಲೂ ಸಾಧ್ಯವಾಗದ ಅಪರೂಪದ ದಾಖಲೆಯನ್ನು ಬರೆದು ರವಿಚಂದ್ರನ್ ಅಶ್ವಿನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಜೋ ರೂಟ್ (106*) ಶತಕ ಸಿಡಿಸಿದ್ದಾರೆ. ಈ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 302 ರನ್ ಕಲೆಹಾಕಿದೆ. ಕ್ರೀಸ್ನಲ್ಲಿ ಒಲೀ ರಾಬಿನ್ಸನ್ ಹಾಗೂ ಜೋ ರೂಟ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
