- Kannada News Photo gallery Cricket photos AUS vs IND: India registers Many Records against Australia
ಟೀಮ್ ಇಂಡಿಯಾ ಜಯಭೇರಿ… ಹಲವು ದಾಖಲೆಗಳು ನಿರ್ಮಾಣ
Australia vs India, 1st Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 150 ರನ್ಗಳಿಸಿದರೆ, ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್ನಲ್ಲಿ 104 ರನ್ಗಳಿಗೆ ಆಲೌಟ್ ಆಗಿತ್ತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ನೀಡಿದ 534 ರನ್ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 238 ರನ್ಗಳಿಗೆ ಆಲೌಟ್ ಆಗಿದೆ.
Updated on: Nov 25, 2024 | 1:56 PM

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 295 ರನ್ಗಳಿಂದ ಬಗ್ಗು ಬಡಿದು ಭಾರತ ತಂಡವು ಹಲವು ದಾಖಲೆಗಳನ್ನು ನಿರ್ಮಿಸಿದೆ. ಈ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

ಪರ್ತ್ನಲ್ಲಿ ಪಲ್ಟಿ: ಆಸ್ಟ್ರೇಲಿಯಾ ತಂಡವನ್ನು ಪರ್ತ್ನಲ್ಲಿ ಸೋಲಿಸಿದ ಮೊದಲ ತಂಡವೆಂಬ ಹೆಗ್ಗಳಿಕೆ ಟೀಮ್ ಇಂಡಿಯಾ ಪಾಲಾಗಿದೆ. ಪರ್ತ್ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಒಮ್ಮೆಯೂ ಆಸೀಸ್ ಪಡೆ ಸೋತಿರಲಿಲ್ಲ. ಇದೀಗ ಕಮಿನ್ಸ್ ಪಡೆಯನ್ನು ಮಕಾಡೆ ಮಲಗಿಸಿ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.

ಐತಿಹಾಸಿಕ ಜಯ: ಆಸ್ಟ್ರೇಲಿಯಾದಲ್ಲಿ ಇದು ಟೀಮ್ ಇಂಡಿಯಾದ ಅತಿ ದೊಡ್ಡ ಟೆಸ್ಟ್ ಗೆಲುವು. 1977 ರಲ್ಲಿ ಮೆಲ್ಬೋರ್ನ್ ಟೆಸ್ಟ್ನಲ್ಲಿ ಭಾರತ ತಂಡವು 222 ರನ್ಗಳ ಜಯ ಸಾಧಿಸಿತ್ತು. ಇದೀಗ 47 ವರ್ಷಗಳ ಬಳಿಕ ಟೀಮ್ ಇಂಡಿಯಾ 295 ರನ್ಗಳ ಅಮೋಘ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಅಮೋಘ ಜಯ: ಏಷ್ಯಾದ ಹೊರಗೆ ಇದು ಭಾರತ ತಂಡದ 2ನೇ ಅಮೋಘ ಜಯ ಎಂಬುದು ವಿಶೇಷ. 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ನಲ್ಲಿ 318 ರನ್ಗಳ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ ಇದೀಗ 295 ರನ್ಗಳಿಂದ ಜಯಭೇರಿ ಬಾರಿಸಿದೆ.

ಐತಿಹಾಸಿಕ ಸಾಧನೆ: 2000ರ ಬಳಿಕ ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ಟೆಸ್ಟ್ ಪಂದ್ಯಗಳನ್ನು ಗೆದ್ದ ದಾಖಲೆ ಕೂಡ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಸೌತ್ ಆಫ್ರಿಕಾ ತಂಡದ ಹೆಸರಿನಲ್ಲಿತ್ತು. ಇದೀಗ 7ನೇ ಗೆಲುವಿನೊಂದಿಗೆ ಭಾರತ ತಂಡವು ಈ ದಾಖಲೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
