Updated on:Jun 17, 2023 | 1:42 PM
ಅಫ್ಘಾನಿಸ್ತಾನ ವಿರುದ್ಧ ಶೇರ್-ಎ-ಬಾಂಗ್ಲಾ ಮೈದಾನದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 546 ರನ್‌ಗಳ ಬೃಹತ್ ಅಂತರದ ಗೆಲುವು ದಾಖಲಿಸಿದೆ. ಇದು ಬಾಂಗ್ಲಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವಾಗಿದ್ದರೆ, ಟೆಸ್ಟ್ ಕ್ರಿಕೆಟ್ನ ಮೂರನೇ ಅತಿ ದೊಡ್ಡ ಗೆಲುವಾಗಿದೆ.
ಈ ಹಿಂದೆ 1928ರಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾವನ್ನು 675 ರನ್‌ಗಳಿಂದ ಮಣಿಸಿ ಅತಿ ದೊಡ್ಡ ಗೆಲುವಿನ ದಾಖಲೆ ಬರೆದಿತ್ತು. ಆ ಬಳಿಕ 1934 ರಲ್ಲಿ 562 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸುವುದರೊಂದಿಗೆ ಆಸ್ಟ್ರೇಲಿಯಾ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಂಡಿತ್ತು.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 382 ರನ್ ಕಲೆ ಹಾಕಿತ್ತು. ತಂಡದ ಪರ ನಜ್ಮುಲ್ ಹೊಸೈನ್ ಶಾಂಟೋ 146 ರನ್‌ಗಳ ಇನ್ನಿಂಗ್ಸ್ ಆಡಿದರೆ, ಆರಂಭಿಕ ಮಹಮ್ಮದುಲ್ ಹಸನ್ ಜಾಯ್ 76 ರನ್‌ಗಳ ಇನ್ನಿಂಗ್ಸ್ ಆಡಿದರು. ಅಫ್ಘಾನ್ ಪರ ನಿಜತ್ ಮಸೂದ್ 5 ವಿಕೆಟ್ ಪಡೆದು ಮಿಂಚಿದರೆ, ಯಾಮಿನ್ ಅಹ್ಮದ್ಝೈ 2 ವಿಕೆಟ್ ಪಡೆದರು.
ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನ್ ಪರ ಯಾವೊಬ್ಬ ಆಟಗಾರನು ಅರ್ಧಶತಕ ಇನ್ನಿಂಗ್ಸ್ ಸಹ ಆಡಲಿಲ್ಲ. ತಂಡದ ಪರ ಅಫ್ಸರ್ ಝಜೈ 36, ನಸೀರ್ ಜಮಾಲ್ 35 ರನ್ ಸಿಡಿಸಿದರು. ಅಂತಿಮವಾಗಿ ಅಫ್ಘಾನ್ ತಂಡ 146 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಬಾಂಗ್ಲಾ ಪರ ಇಬಾದತ್ 4 ವಿಕೆಟ್ ಪಡೆದರೆ, ಶೋರಿಫುಲ್ ಇಸ್ಲಾಂ, ತೈಜುಲ್ ಇಸ್ಲಾಂ, ಮೆಹದಿ ಹಸನ್ ತಲಾ 2 ವಿಕೆಟ್ ಪಡೆದರು.
ಹೀಗಾಗಿ 236 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ, ನಜ್ಮುಲ್ ಹೊಸೈನ್ ಶಾಂಟೋ ಅವರ ಸತತ ಎರಡನೇ ಶತಕ (124) ಹಾಗೂ ಮೊಮಿನುಲ್ ಹಕ್ ಅವರ ಶತಕದ (121) ನೆರವಿನಿಂದ 4 ವಿಕೆಟ್ ನಷ್ಟಕ್ಕೆ 425 ರನ್ ಕಲೆ ಹಾಕಿತು.
2ನೇ ಇನ್ನಿಂಗ್ಸ್ನಲ್ಲಿ 662 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಕೇವಲ 115 ರನ್ಗಳಿಗೆ ಆಲೌಟ್ ಆಗುವ ಮೂಲಕ ಬರೋಬ್ಬರಿ 546 ರನ್‌ಗಳ ಅಂತರದ ಹೀನಾಯ ಸೋಲು ಅನುಭವಿಸಿತು. ಬಾಂಗ್ಲಾ ಪರ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕದ ಇನ್ನಿಂಗ್ಸ್ ಆಡಿದ ನಜ್ಮುಲ್ ಹೊಸೈನ್ ಶಾಂಟೋ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
Published On - 1:41 pm, Sat, 17 June 23