- Kannada News Photo gallery Cricket photos BAN vs PAK 2nd T20: Pakistan created an unwanted t20i record
ಹದಿನೈದಕ್ಕೆ ಐದು… ಅತ್ಯಂತ ಹೀನಾಯ ದಾಖಲೆ ಬರೆದ ಪಾಕಿಸ್ತಾನ್
Bangladesh vs Pakistan: ಢಾಕಾದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 133 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು ಕೇವಲ 125 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಬಾಂಗ್ಲಾದೇಶ್ 8 ರನ್ಗಳ ಜಯ ಸಾಧಿಸಿ, ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
Updated on: Jul 23, 2025 | 7:54 AM

ಬಾಂಗ್ಲಾದೇಶ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಪಾಕಿಸ್ತಾನ್ ತಂಡ ಮಕಾಡೆ ಮಲಗಿದೆ. ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಆರಂಭಿಕರಾಗಿ ಕಣಕ್ಕಿಳಿದ ಮುಹಮ್ಮದ್ ನಯೀಮ್ (3) ಹಾಗೂ ಪರ್ವೇಝ್ ಹೊಸೈನ್ (13) ಬೇಗನೆ ಔಟಾದರೆ, ನಾಯಕ ಲಿಟ್ಟನ್ ದಾಸ್ ಕೇವಲ 8 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ತೌಹಿದ್ ಹೃದೋಯ್ (0) ರನ್ಗಳಿಸುವ ಮುನ್ನವೇ ಪೆವಿಲಿಯನ್ಗೆ ಹಿಂತಿರುಗಿದ್ದರು. ಇದರ ನಡುವೆ ಜಕರ್ ಅಲಿ 55 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಈ ಅರ್ಧಶತಕದ ನೆರವಿನೊಂದಿಗೆ ಬಾಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 133 ರನ್ ಕಲೆಹಾಕಿತು.

134 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು ಪವರ್ಪ್ಲೇನಲ್ಲೇ ಪವರ್ ಕಳೆದುಕೊಂಡಿತು. ಆರಂಭಿಕ ದಾಂಡಿಗರಾದ ಫಖರ್ ಝಮಾನ್ (8) ಹಾಗೂ ಸೈಮ್ ಅಯ್ಯೂಬ್ (1) ಬಂದ ವೇಗದಲ್ಲೇ ಹಿಂತಿರುಗಿದರೆ, ಆ ಬಳಿಕ ಮೊಹಮ್ಮದ್ ಹ್ಯಾರಿಸ್ (0) ಸೊನ್ನೆ ಸುತ್ತಿದರು. ಇನ್ನು ಹಸನ್ ನವಾಝ್ (0) ಹಾಗೂ ಮೊಹಮ್ಮದ್ ನವಾಝ್ (0) ಶೂನ್ಯಗಳೊಂದಿಗೆ ಪೆವಿಲಿಯನ್ಗೆ ಹೆಜ್ಜೆಹಾಕಿದರು.

ಹೀಗೆ ಕೇವಲ 15 ರನ್ಗಳಿಗೆ 5 ವಿಕೆಟ್ ಕಳೆದುಕೊಳ್ಳುವ ಮೂಲಕ ಪಾಕಿಸ್ತಾನ್ ತಂಡವು ತನ್ನ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಆರಂಭ ಪಡೆದುಕೊಂಡಿತು. ಇದಕ್ಕೂ ಮುನ್ನ 2024 ರಲ್ಲಿ ಬ್ರಿಸ್ಬೇನ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ 16 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದು ಅತ್ಯಂತ ಕೆಟ್ಟ ದಾಖಲೆಯಾಗಿತ್ತು.

ಆದರೆ ಈ ಬಾರಿ 15 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಅತ್ಯಂತ ಕೆಟ್ಟ ಆರಂಭ ಪಡೆದುಕೊಂಡಿದೆ. ಈ ಮೂಲಕ ಪಾಕ್ ಅತೀ ಕಡಿಮೆ ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ದಾಖಲೆಯೊಂದಕ್ಕೆ ಕೊರೊಳೊಡ್ಡಿದೆ. ಈ ಹೀನಾಯ ದಾಖಲೆಯೊಂದಿಗೆ ಬ್ಯಾಟಿಂಗ್ ಮುಂದುವರೆಸಿದ ಪಾಕಿಸ್ತಾನ್ 19.2 ಓವರ್ಗಳಲ್ಲಿ 125 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಬಾಂಗ್ಲಾದೇಶ್ ತಂಡ 8 ರನ್ಗಳ ರೋಚಕ ಜಯ ಸಾಧಿಸಿದೆ.




