- Kannada News Photo gallery Cricket photos BCCI dismisses Virat Kohli stance over lack of communication
Virat Kohli: ಬಿಸಿಸಿಐ vs ವಿರಾಟ್ ಕೊಹ್ಲಿ: ಹೊಸ ವಿವಾದಕ್ಕೆ ಕಾರಣವಾದ ಕೊಹ್ಲಿಯ ಸುದ್ದಿಗೋಷ್ಠಿ
Virat Kohli vs BCCI: ಸೆಪ್ಟೆಂಬರ್‌ನಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಮಾತನಾಡಿದೆ. ಜೊತೆಗೆ ನಾಯಕತ್ವದಿಂದ ಕೆಳಗಿಳಿಯದಂತೆ ಮನವಿ ಮಾಡಿದೆ ಎಂದು ತಿಳಿಸಿದ್ದಾರೆ. (ಡೈಲಿಹಂಟ್ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)
Updated on: Dec 15, 2021 | 6:08 PM

ದಕ್ಷಿಣ ಆಫ್ರಿಕಾ ಸರಣಿಗೆ ತೆರಳುವ ಮುನ್ನ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಡೆಸಿದ ಸುದ್ದಿಗೋಷ್ಠಿ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಈ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ನೀಡಿದ ಸ್ಪಷ್ಟನೆಗಳು ಇದೀಗ ಬಿಸಿಸಿಐ ನಡೆಯ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ.

ಏಕೆಂದರೆ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ, ಟಿ20 ನಾಯಕತ್ವವನ್ನು ತ್ಯಜಿಸುವ ನನ್ನ ನಿರ್ಧಾರವನ್ನು ಬಿಸಿಸಿಐ ಸ್ವಾಗತಿಸಿತ್ತು. ಇದರ ಹೊರತಾಗಿ ಯಾರೂ ಕೂಡ ನಾಯಕತ್ವ ತ್ಯಜಿಸಬೇಡಿ ಎಂದು ಮನವಿ ಮಾಡಿರಲಿಲ್ಲ ಎಂದು ತಿಳಿಸಿದ್ದರು. ಆದರೆ ಇದಕ್ಕೂ ಮುನ್ನ ಸೌರವ್ ಗಂಗೂಲಿ, ಅವರು ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದ ಪರಿಣಾಮ ಏಕದಿನ ತಂಡದ ನಾಯಕತ್ವ ಕೈತಪ್ಪಿದೆ ಎಂದಿದ್ದರು. ಆದರೆ ಬಿಸಿಸಿಐ ಟಿ20 ನಾಯಕತ್ವವನ್ನು ತೊರೆದರೆ ಏಕದಿನ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಯಬೇಕಾಗುತ್ತೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಕೊಹ್ಲಿ ತಿಳಿಸಿದ್ದರು.

ಅಲ್ಲದೆ ಟಿ20 ನಾಯಕತ್ವವನ್ನು ಬಿಟ್ಟುಕೊಡದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮನವಿ ಮಾಡಿಲ್ಲ ಎಂದು ವಿರಾಟ್ ಕೊಹ್ಲಿ ಬುಧವಾರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಇದೀಗ ಸೌರವ್ ಗಂಗೂಲಿ ಹೇಳಿಕೆ ಹಾಗೂ ಕೊಹ್ಲಿಯ ಸ್ಪಷ್ಟನೆ ಬಿಸಿಸಿಐಗೆ ಇರುಸು ಮುರುಸು ಉಂಟು ಮಾಡಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಮಂಡಳಿಯು ಸೆಪ್ಟೆಂಬರ್‌ನಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಮಾತನಾಡಿದೆ ಮತ್ತು ನಾಯಕತ್ವದಿಂದ ಕೆಳಗಿಳಿಯದಂತೆ ಮನವಿ ಮಾಡಿದೆ ಎಂದು ತಿಳಿಸಿದ್ದಾರೆ. ನಾವು ಮೊದಲೇ ವಿರಾಟ್ ಕೊಹ್ಲಿಗೆ ಟಿ20 ನಾಯಕತ್ವವನ್ನು ಬಿಟ್ಟುಕೊಡಬೇಡಿ ಎಂದು ತಿಳಿಸಿದ್ದೆವು. ಇದೀಗ ಅವರು ನೀಡಿರುವ ಹೇಳಿಕೆ ಸತ್ಯಕ್ಕೆ ದೂರ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಬಿಸಿಸಿಐ ಜೊತೆಗಿನ ಸಂವಹನ ಕೊರತೆಯನ್ನು ಎತ್ತಿ ತೋರಿಸಿದ್ದು, ಇದೀಗ ಕೊಹ್ಲಿ ನೀಡಿರುವ ಹೇಳಿಕೆಗಳನ್ನು ಬಿಸಿಸಿಐ ಅಧಿಕಾರಿ ತಳ್ಳಿಹಾಕಿದ್ದಾರೆ. ಅಲ್ಲದೆ ನಾವು ಎಲ್ಲವನ್ನೂ ಕೊಹ್ಲಿ ಜೊರೆ ಚರ್ಚಿಸಿಯೇ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಇತ್ತ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಗಳಿಗೂ ಬಿಸಿಸಿಐ ನೀಡಿರುವ ಸ್ಪಷ್ಟನೆಗಳು ತದ್ವಿರುದ್ಧವಾಗಿದ್ದು, ಇದರಿಂದ ಬಿಸಿಸಿಐ ನಡೆಯ ಬಗ್ಗೆ ಅಭಿಮಾನಿಗಳಲ್ಲಿ ಅನುಮಾನಗಳು ಹುಟ್ಟಿಕೊಂಡಿದೆ. ಅಷ್ಟೇ ಅಲ್ಲದೆ ಕೊಹ್ಲಿ ನಾಯಕತ್ವ ಕುರಿತಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೀಡಿರುವ ಹೇಳಿಕೆಗಳು ಸುಳ್ಳು ಎಂಬ ವಾದಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಸುದ್ಧಿಗೋಷ್ಠಿಯೊಂದಿಗೆ ನಾಯಕತ್ವ ವಿವಾದ ಮುಕ್ತಾಯವಾಗಲಿದೆ ಎಂದುಕೊಂಡಿದ್ದ ಬಿಸಿಸಿಐಗೆ ಇದೀಗ ವಿರಾಟ್ ಕೊಹ್ಲಿಯ ಹೇಳಿಕೆಗಳೇ ತಿರುಮಂತ್ರವಾಗಿ ಪರಿಣಮಿಸಿದೆ.




