57 ಎಸೆತಗಳಲ್ಲಿ ಇತಿಹಾಸ ನಿರ್ಮಿಸಿದ ಬ್ರಾಡ್ ಇವನ್ಸ್
Zimbabwe vs Afghanistan: ಹರಾರೆಯಲ್ಲಿ ನಡೆಯುತ್ತಿರುವ ಝಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು ಕೇವಲ 127 ರನ್ಗಳಿಗೆ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡುತ್ತಿರುವ ಝಿಂಬಾಬ್ವೆ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 130 ರನ್ ಕಲೆಹಾಕಿದೆ.
Updated on: Oct 21, 2025 | 12:56 PM

ಝಿಂಬಾಬ್ವೆ ತಂಡದ ಆಲ್ರೌಂಡರ್ ಬ್ರಾಡ್ ಇವನ್ಸ್ (Brad Evans) ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಕೇವಲ 9.3 ಓವರ್ಗಳಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಎಂಬುದು ವಿಶೇಷ. ಅಫ್ಘಾನಿಸ್ತಾನ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ 77ನೇ ರನ್ಗೆ 2ನೇ ವಿಕೆಟ್ ಕಳೆದುಕೊಂಡ ಬಳಿಕ ಅಫ್ಘಾನ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಪರಿಣಾಮ ಪ್ರಥಮ ಇನಿಂಗ್ಸ್ನಲ್ಲಿ ಅಫ್ಘಾನಿಸ್ತಾನ್ ತಂಡ 127 ರನ್ಗಳಿಗೆ ಆಲೌಟ್ ಆಗಿದೆ.

ಹೀಗೆ ಅಫ್ಘಾನಿಸ್ತಾನ್ ತಂಡ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಲು ಮುಖ್ಯ ಕಾರಣ ಬ್ರಾಡ್ ಇವನ್ಸ್. ಈ ಪಂದ್ಯದಲ್ಲಿ 57 ಎಸೆತಗಳನ್ನು ಎಸೆದ ಇವನ್ಸ್ ಕೇವಲ 22 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ಝಿಂಬಾಬ್ವೆ ಪರ ಟೆಸ್ಟ್ನಲ್ಲಿ ಅತೀ ಕಡಿಮೆ ರನ್ ನೀಡಿ 5 ವಿಕೆಟ್ ಕಬಳಿಸಿದ ಬೌಲರ್ ಎಂಬ ದಾಖಲೆಯನ್ನು ಸಹ ನಿರ್ಮಿಸಿದರು.

ಇದಕ್ಕೂ ಮುನ್ನ ಈ ದಾಖಲೆ ಝಿಂಬಾಬ್ವೆ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ಹೆಸರಿನಲ್ಲಿತ್ತು. 2001 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸ್ಟ್ರೀಕ್ 27 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಈ ಮೂಲಕ ಝಿಂಬಾಬ್ವೆ ಪರ ಟೆಸ್ಟ್ನಲ್ಲಿ ಅತೀ ಕಡಿಮೆ ರನ್ ನೀಡಿ ಐದು ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದರು.

ಇದೀಗ 24 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ದಾಖಲೆಯನ್ನು ಬ್ರಾಡ್ ಇವನ್ಸ್ ಮುರಿದಿದ್ದಾರೆ. ಅಫ್ಘಾನಿಸ್ತಾನ್ ವಿರುದ್ಧ ಕೇವಲ 22 ರನ್ ನೀಡಿ 5 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಕನಿಷ್ಠ ರನ್ ನೀಡಿ ಝಿಂಬಾಬ್ವೆ ಪರ 5 ವಿಕೆಟ್ ಪಡೆದ ಬೌಲರ್ ಎಂಬ ಹಿರಿಮೆಯನ್ನು ಬ್ರಾಡ್ ಇವನ್ಸ್ ತಮ್ಮದಾಗಿಸಿಕೊಂಡಿದ್ದಾರೆ.




