Shubman Gill: ಗಿಲ್ ಗಿಲಕ್ಗೆ ಕಿಂಗ್ ಕೊಹ್ಲಿಯ ದಾಖಲೆಗಳು ಉಡೀಸ್..!
Shubman Gill Records: ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕನಾಗಿ ಶುಭ್ಮನ್ ಗಿಲ್ ಶುಭಾರಂಭ ಮಾಡಿದ್ದಾರೆ. ಹೆಡಿಂಗ್ಲೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪ0ಂದ್ಯದಲ್ಲಿ 155 ರನ್ ಬಾರಿಸಿದ್ದ ಗಿಲ್ ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕದೊಂದಿಗೆ ಅಬ್ಬರಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಎರಡು ಭರ್ಜರಿ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ.
Updated on: Jul 06, 2025 | 8:54 AM

ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ (Shubman Gill) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ಭರ್ಜರಿ ದಾಖಲೆಗಳನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 269 ರನ್ ಬಾರಿಸಿದ್ದ ಶುಭ್ಮನ್ ಗಿಲ್, ದ್ವಿತೀಯ ಇನಿಂಗ್ಸ್ನಲ್ಲಿ 161 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯಧಿಕ ರನ್ಗಳಿಸಿದ ಭಾರತೀಯ ನಾಯಕ ಎಂಬ ದಾಖಲೆಯನ್ನು ಶುಭ್ಮನ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು.

2017 ರಲ್ಲಿ ದೆಹಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್ನಲ್ಲಿ 243 ರನ್ ಬಾರಿಸಿದರೆ, ದ್ವಿತೀಯ ಇನಿಂಗ್ಸ್ನಲ್ಲಿ 50 ರನ್ ಕಲೆಹಾಕಿದ್ದರು. ಈ ಮೂಲಕ ಒಟ್ಟು 293 ರನ್ಗಳಿಸುವ ಮೂಲಕ ಭಾರತದ ಪರ ಟೆಸ್ಟ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ಗಳಿಸಿದ ಕ್ಯಾಪ್ಟನ್ ಎಂಬ ದಾಖಲೆ ನಿರ್ಮಿಸಿದ್ದರು.

ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಶುಭ್ಮನ್ ಗಿಲ್ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಇನಿಂಗ್ಸ್ನಲ್ಲಿ 269 ರನ್ಗಳಿಸಿದ್ದ ಗಿಲ್, ದ್ವಿತೀಯ ಇನಿಂಗ್ಸ್ನಲ್ಲಿ 161 ರನ್ ಬಾರಿಸಿದ್ದಾರೆ. ಈ ಮೂಲಕ ಒಟ್ಟು 430 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ ಪರ ಟೆಸ್ಟ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ಗಳಿಸಿದ ನಾಯಕ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಅತ್ಯಧಿಕ ರನ್ಗಳಿಸಿದ ಕ್ಯಾಪ್ಟನ್ ಎಂಬ ವಿಶ್ವ ದಾಖಲೆಯನ್ನು ಕೂಡ ಶುಭ್ಮನ್ ಗಿಲ್ ತನ್ನ ಹೆಸರಿಗೆ ಸೇರ್ಪಡೆಗೊಳಿಸಿದ್ದಾರೆ. ವಿಶೇಷ ಎಂದರೆ ಈ ವಿಶ್ವ ದಾಖಲೆ ಕೂಡ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು.

ಕಿಂಗ್ ಕೊಹ್ಲಿ ಮೊದಲ ಎರಡು ಟೆಸ್ಟ್ ಪಂದ್ಯಗಳ ಮೂಲಕ ಒಟ್ಟು 449 ರನ್ ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ದಶಕದ ಬಳಿಕ ಈ ದಾಖಲೆಯನ್ನು ಮುರಿಯುವಲ್ಲಿ ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ಶುಭ್ಮನ್ ಗಿಲ್ ಯಶಸ್ವಿಯಾಗಿದ್ದಾರೆ.

ಹೆಡಿಂಗ್ಲೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದ ಶುಭ್ಮನ್ ಗಿಲ್ ಒಟ್ಟು 155 ರನ್ ಬಾರಿಸಿದ್ದರು. ಇದೀಗ ದ್ವಿತೀಯ ಪಂದ್ಯದಲ್ಲಿ ಒಟ್ಟು 430 ರನ್ ಕಲೆಹಾಕಿದ್ದಾರೆ. ಈ ಮೂಲಕ ಒಟ್ಟು 585 ರನ್ಗಳಿಸಿ, ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ಕ್ಯಾಪ್ಟನ್ ಎಂಬ ವಿಶ್ವ ದಾಖಲೆಯನ್ನು ಶುಭ್ಮನ್ ಗಿಲ್ ತಮ್ಮದಾಗಿಸಿಕೊಂಡಿದ್ದಾರೆ.




