6,6,6,6,6,6,6,6: WPLನಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ದಾಖಲೆ ಬರೆದ ಶಿನೆಲ್ಲೆ ಹೆನ್ರಿ
Delhi Capitals Women vs UP Warriorz Women: ವುಮೆನ್ಸ್ ಪ್ರೀಮಿಯರ್ ಲೀಗ್ನ 8ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ವೆಸ್ಟ್ ಇಂಡೀಸ್ ಆಟಗಾರ್ತಿ ಶಿನೆಲ್ಲೆ ಹೆನ್ರಿ. ಏಕೆಂದರೆ ಈ ಮ್ಯಾಚ್ನಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿನೆಲ್ಲೆ 8 ಸಿಕ್ಸ್ಗಳೊಂದಿಗೆ ಸ್ಪೋಟಕ ಅರ್ಧಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ.
Updated on: Feb 23, 2025 | 11:30 AM

ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ವಿಸ್ಪೋಟಕ ಅರ್ಧಶತಕ ಬಾರಿಸಿ ಯುಪಿ ವಾರಿಯರ್ಸ್ ತಂಡದ ಆಟಗಾರ್ತಿ ಶಿನೆಲ್ಲೆ ಹೆನ್ರಿ ದಾಖಲೆ ಬರೆದಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಯುಪಿ ವಾರಿಯರ್ಸ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಅಲ್ಲದೆ 14 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 89 ರನ್ಗಳು ಮಾತ್ರವಾಗಿತ್ತು. ಈ ಹಂತದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿನೆಲ್ಲೆ ಹೆನ್ರಿ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಕ್ರೀಸ್ಗೆ ಆಗಮಿಸುತ್ತಿದ್ದಂತೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶಿನೆಲ್ಲೆ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಅಲ್ಲದೆ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಅತೀ ವೇಗದ ಅರ್ಧಶತಕದ ದಾಖಲೆಯನ್ನು ನಿರ್ಮಿಸಿದರು.

ಇದಕ್ಕೂ ಮುನ್ನ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಜೈಂಟ್ಸ್ ತಂಡದ ಆಟಗಾರ್ತಿ ಸೋಫಿಯಾ ಡಂಕ್ಲಿ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಸರಿಗಟ್ಟುವಲ್ಲಿ ಶಿನೆಲ್ಲೆ ಹೆನ್ರಿ ಯಶಸ್ವಿಯಾಗಿದ್ದಾರೆ.

ಇನ್ನು ಈ ಪಂದ್ಯದಲ್ಲಿ 23 ಎಸೆತಗಳನ್ನು ಎದುರಿಸಿದ ಶಿನೆಲ್ಲೆ ಹೆನ್ರಿ 8 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 62 ರನ್ ಬಾರಿಸಿದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ಯುಪಿ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 177 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.3 ಓವರ್ಗಳಲ್ಲಿ 144 ರನ್ ಬಾರಿಸಿ ಆಲೌಟ್ ಆಗಿದೆ. ಈ ಮೂಲಕ ಯುಪಿ ವಾರಿಯರ್ಸ್ ತಂಡ 33 ರನ್ಗಳ ಭರ್ಜರಿ ಜಯ ಸಾಧಿಸಿದೆ.



















