ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲು ಈಗಾಗಲೇ ದೇಶದ ಹಲವು ಸೆಲೆಬ್ರಿಟಿಗಳು ಅಯೋಧ್ಯೆಗೆ ತಲುಪಿದ್ದಾರೆ. ಇವರಲ್ಲಿ ಖ್ಯಾತ ಕ್ರಿಕೆಟಿಗರು ಕೂಡ ಇದ್ದಾರೆ.
ಜನವರಿ 21 ರಂದು ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದ ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಇದೀಗ ಅಯೋಧ್ಯೆಯಲ್ಲಿದ್ದಾರೆ. ಕುಟುಂಬದ ಜೊತೆ ಈ ಸಮಾರಂಭದಲ್ಲಿ ಪಾಲ್ಗೊಂಡಿರುವ ಕುಂಬ್ಳೆ ಇದೀಗ ರಾಮ ಮಂದಿರದ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಇನ್ನು ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ರಾಮ ಜನ್ಮಭೂಮಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಜಡೇಜಾ ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಾಗೆಯೇ ಟೀಮ್ ಇಂಡಿಯಾದ ಮಾಜಿ ನಾಯಕ ಮಿಥಾಲಿ ರಾಜ್ ಕೂಡ ಅಯೋಧ್ಯೆಯಲ್ಲಿದ್ದು, ಅವರ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಭಾರತ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕೂಡ ಅಯೋಧ್ಯೆಯಲ್ಲಿದ್ದಾರೆ. ಈ ಶುಭ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ವೆಂಕಿ, ಬಾಲರಾಮನ ಪ್ರಾಣ ಪ್ರತಿಷ್ಠಾ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು ಸಚಿನ್ ತೆಂಡೂಲ್ಕರ್ ಈಗಾಗಲೇ ಅಯೋಧ್ಯೆಗೆ ತಲುಪಿದ್ದು, ವಿರಾಟ್ ಕೊಹ್ಲಿ ಕೂಡ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದಾಗ್ಯೂ ಈ ಶುಭ ಸಮಾರಂಭದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಹಿಟ್ಮ್ಯಾನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂದು ಹೈದರಾಬಾದ್ಗೆ ಪ್ರಯಾಣಿಸಲಿದ್ದು, ಹೀಗಾಗಿ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಗೈರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
Published On - 11:36 am, Mon, 22 January 24