
ಐಪಿಎಲ್ 2026 ರ ಆಟಗಾರರ ಮಿನಿ ಹರಾಜು ಡಿಸೆಂಬರ್ 16 ರಂದು ನಿಗದಿಯಾಗಿದ್ದು, ಈ ಬಾರಿಯೂ ಸಹ ಅನೇಕ ದೊಡ್ಡ ಹೆಸರುಗಳು ಹರಾಜಿನಲ್ಲಿ ಭಾಗವಹಿಸಲಿವೆ. ಎಲ್ಲಾ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ತಮ್ಮ ಫ್ರಾಂಚೈಸಿಗಳಲ್ಲಿ ನೋಡಲು ಬಯಸುತ್ತಿದ್ದರೂ, ಐಪಿಎಲ್‌ನ ಅತ್ಯಂತ ಯಶಸ್ವಿ ಮತ್ತು ಅತ್ಯಂತ ಪ್ರೀತಿಯ ಅನುಭವಿ ಆಟಗಾರರಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಈ ಬಾರಿ ಹರಾಜಿನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

ನವೆಂಬರ್ 29 ರಂದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಐಪಿಎಲ್ ಹರಾಜಿನಲ್ಲಿ ಭಾಗವಹಿಸದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಡು ಪ್ಲೆಸಿಸ್ ಈ ವರ್ಷ ಹರಾಜಿನಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದರು. ಡು ಪ್ಲೆಸಿಸ್ ‘ಐಪಿಎಲ್‌ನಲ್ಲಿ 14 ವರ್ಷಗಳ ನಂತರ, ನಾನು ಈ ವರ್ಷ ಹರಾಜಿನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ. ಇದು ಒಂದು ದೊಡ್ಡ ನಿರ್ಧಾರ ಮತ್ತು ಬಹಳ ಕೃತಜ್ಞತೆಯಿಂದ ತೆಗೆದುಕೊಂಡ ನಿರ್ಧಾರ’ ಎಂದು ಬರೆದುಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಪರ ಎರಡು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಡು ಪ್ಲೆಸಿಸ್ ಕಳೆದ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. ಆದರೆ ಈ ವರ್ಷದ ಹರಾಜಿಗೆ ಮುನ್ನವೇ ಅವರನ್ನು ಡೆಲ್ಲಿ ಫ್ರಾಂಚೈಸಿ ತಂಡದಿಂದ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಇದೀಗ 40 ವರ್ಷದ ಡು ಪ್ಲೆಸಿಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಮುಂದುವರೆದು ಬರೆದುಕೊಂಡಿರುವ ಫಾಫ್, ‘14 ವರ್ಷಗಳು ಬಹಳ ಸಮಯ, ಮತ್ತು ಈ ಮೈಲಿಗಲ್ಲು ನನಗೆ ಎಷ್ಟು ಅರ್ಥವಾಗಿದೆ ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ. ಭಾರತವು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ, ಮತ್ತು ಇದು ಖಂಡಿತವಾಗಿಯೂ ವಿದಾಯವಲ್ಲ. ನೀವು ನನ್ನನ್ನು ಮತ್ತೆ ನೋಡುತ್ತೀರಿ. ಈ ವರ್ಷ, ನಾನು ಹೊಸ ಸವಾಲನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಮತ್ತು ಪಿಎಸ್ಎಲ್ನ ಮುಂಬರುವ ಸೀಸನ್ನಲ್ಲಿ ಆಡುತ್ತೇನೆ’ ಎಂದಿದ್ದಾರೆ.

2012 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಫಾಫ್, ಈ ಫ್ರಾಂಚೈಸಿ ಪರ ಏಳು ಸೀಸನ್ ಆಡಿದರು. ಈ ನಡುವೆ 2018 ಮತ್ತು 2021 ರಲ್ಲಿ ತಂಡವನ್ನು ಚಾಂಪಿಯನ್ ಮಾಡುವಲ್ಲು ಶ್ರಮಿಸಿದ್ದರು. ಆ ನಂತರ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಆರ್‌ಸಿಬಿ ಮತ್ತು ದೆಹಲಿ ಕ್ಯಾಪಿಟಲ್ಸ್ ಪರವೂ ಆಡಿದ್ದಾರೆ. ಇದುವರೆಗೆ ಐಪಿಎಲ್‌ನಲ್ಲಿ 154 ಪಂದ್ಯಗಳನ್ನಾಡಿರುವ ಫಾಫ್, 39 ಅರ್ಧಶತಕಗಳನ್ನು ಒಳಗೊಂಡಂತೆ 4,773 ರನ್ ಬಾರಿಸಿದ್ದಾರೆ.