
ಏಪ್ರಿಲ್ 27 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶುಭ ಸುದ್ದಿ ಸಿಕ್ಕಿದೆ. ಆರ್‌ಸಿಬಿಯ ಮಾಜಿ ನಾಯಕ ಈ ಪಂದ್ಯದಲ್ಲಿ ಡೆಲ್ಲಿ ಪರ ಆಡಲಿದ್ದಾರೆ. ಕಳೆದ ಸೀಸನ್ವರೆಗೂ ಫಾಫ್ ಬೆಂಗಳೂರು ತಂಡದ ನಾಯಕತ್ವ ವಹಿಸಿದ್ದರು. ಆದರೆ ಮೆಗಾ ಹರಾಜಿಗೂ ಮುನ್ನ ಅವರನ್ನು ತಂಡದಿಂದ ಕೈಬಿಟ್ಟ ಕಾರಣ ಅವರು ಈ ಸೀಸನ್‌ನಲ್ಲಿ ಡೆಲ್ಲಿ ತಂಡವನ್ನು ಕೂಡಿಕೊಂಡಿದ್ದಾರೆ.

ವಾಸ್ತವವಾಗಿ, ಡೆಲ್ಲಿ ಪರ ಉತ್ತಮ ಆರಂಭ ಪಡೆದುಕೊಂಡಿದ್ದ ಡು ಪ್ಲೆಸಿಸ್ ಆ ಬಳಿಕ ಬೆನ್ನಿನ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಕಳೆದ ಕೆಲವು ಪಂದ್ಯಗಳಿಂದ ಅವರು ತಂಡದಿಂದ ಹೊರಗುಳಿದಿದ್ದರು. ಆದರೆ ಈಗ ಅವರು ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನವೇ ಫಿಟ್ ಆಗಿದ್ದು, ಡೆಲ್ಲಿ ತಂಡದ ಉಪನಾಯಕ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ತಮ್ಮ ಹಿಂದಿನ ಫ್ರಾಂಚೈಸಿಯನ್ನು ಎದುರಿಸಲಿದ್ದಾರೆ.

ಫಾಫ್ ಡು ಪ್ಲೆಸಿಸ್ ಈ ಸೀಸನ್ನ ಕೊನೆಯ ಪಂದ್ಯವನ್ನು ಏಪ್ರಿಲ್ 10 ರಂದು ಆರ್‌ಸಿಬಿ ವಿರುದ್ಧ ಆಡಿದ್ದರು. ಆ ಪಂದ್ಯದಲ್ಲಿ ರಜತ್ ಪಟಿದಾರ್ ಬಾರಿಸಿದ್ದ ಚೆಂಡನ್ನು ಹಿಡಿಯಲು ಯತ್ನಿಸುವ ವೇಳೆ ಇಂಜುರಿಗೆ ತುತ್ತಾಗಿದ್ದರು. ಆ ಬಳಿಕ ಅವರು ಸುಮಾರು 2 ವಾರಗಳ ಕಾಲ ತಂಡದಿಂದ ಹೊರಗುಳಿಯಬೇಕಾಯಿತು.

ಹೀಗಾಗಿ ಫಾಫ್ ಡುಪ್ಲೆಸಿಸ್ ಡೆಲ್ಲಿ ಕ್ಯಾಪಿಟಲ್ಸ್ ಆಡಿದ 4 ಪಂದ್ಯಗಳಿಂದ ಹೊರಗುಳಿದ್ದರು. ಆದರೆ ಈಗ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದು, ತಮ್ಮ ಹಳೆಯ ಫ್ರಾಂಚೈಸಿಯನ್ನು ಸೋಲಿಸಲು ಮತ್ತೆ ಸಿದ್ಧರಾಗಿದ್ದಾರೆ. ಫಾಫ್ ಫಿಟ್ ಆಗಿರುವ ಕಾರಣ ಡೆಲ್ಲಿ ತಂಡದಲ್ಲಿ ಬದಲಾವಣೆಯಾಗುವುದು ಖಚಿತ.

ಫಾಫ್ ಲಭ್ಯತೆಯ ಬಗ್ಗೆ ಮಾತನಾಡಿದ ತಂಡದ ಯುವ ಆರಂಭಿಕ ಆಟಗಾರ ಜೇಕ್ ಫ್ರೇಸರ್ ಮೆಕ್‌ಗರ್ಕ್, ಫಾಫ್ ನಾಳಿನ ಪಂದ್ಯಕ್ಕೆ ಲಭ್ಯವಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ಡು ಪ್ಲೆಸಿಸ್ ಶನಿವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು, ಆರ್‌ಸಿಬಿ ವಿರುದ್ಧದ ಪಂದ್ಯದ ಸಮಯದಲ್ಲಿ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ.

ಫಾಫ್ ಡು ಪ್ಲೆಸಿಸ್ ಈ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 3 ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 29 ರನ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 50 ರನ್ ಕಲೆಹಾಕಿದ್ದರು. ಆದರೆ ಆರ್‌ಸಿಬಿ ವಿರುದ್ಧ ಅವರು ಕೇವಲ 2 ರನ್ ಗಳಿಸಲು ಸಾಧ್ಯವಾಯಿತು.

ಮತ್ತೊಂದೆಡೆ, ಫಾಫ್ ಡುಪ್ಲೆಸಿಸ್ ತಂಡದಲ್ಲಿ ಇರದಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾತ್ರ ನಿರಂತರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಪ್ರಸ್ತುತ ಸೀಸನ್‌ನಲ್ಲಿ 8 ಪಂದ್ಯಗಳನ್ನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ 6 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.