- Kannada News Photo gallery Cricket photos ICC Test Rankings: Jasprit Bumrah replaces R Ashwin as No.1 bowler
ICC Test Rankings: ಜಸ್ಪ್ರೀತ್ ಬುಮ್ರಾ ನಂಬರ್ 1 ಬೌಲರ್
ICC Test Rankings: ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಐಸಿಸಿ ಟೆಸ್ಟ್ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಮೂರು ಸ್ವರೂಪಗಳಲ್ಲೂ ಅಗ್ರಸ್ಥಾನಿಯಾಗಿ ಕಾಣಿಸಿಕೊಂಡ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
Updated on:Oct 02, 2024 | 2:49 PM

ಐಸಿಸಿ ಪ್ರಕಟಿಸಿರುವ ಟೆಸ್ಟ್ ಬೌಲರ್ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನ ಅಲಂಕರಿಸಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಬುಮ್ರಾ ಇದೀಗ 870 ಅಂಕಗಳೊಂದಿಗೆ ನಂಬರ್ 1 ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ವಿಶೇಷ ಎಂದರೆ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಕಳೆದ ಬಾರಿ ಅಗ್ರಸ್ಥಾನದಲ್ಲಿದ್ದ ಅಶ್ವಿನ್ ಅವರನ್ನು ಹಿಂದಿಕ್ಕಿ ಜಸ್ಪ್ರೀತ್ ಬುಮ್ರಾ ಮೊದಲ ಸ್ಥಾನಕ್ಕೇರಿದ್ದಾರೆ. ಇದೀಗ 869 ಅಂಕಗಳೊಂದಿಗೆ ಅಶ್ವಿನ್ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ ಬೌಲರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುತ್ತಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ ಫೆಬ್ರವರಿ 2024ರ ಶ್ರೇಯಾಂಕ ಪಟ್ಟಿಯಲ್ಲಿ ಅವರು ನಂಬರ್-1 ಬೌಲರ್ ಆಗಿ ಹೊರಹೊಮ್ಮಿದ್ದರು.

ಅಷ್ಟೇ ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲೇ ಮೂರು ಸ್ವರೂಪಗಳಲ್ಲೂ ಅಗ್ರಸ್ಥಾನ ಅಲಂಕರಿಸಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಅಲ್ಲದೆ ಮೂರು ಸ್ವರೂಪಗಳಲ್ಲೂ ಅಗ್ರಸ್ಥಾನ ಅಲಂಕರಿಸಿದ ಭಾರತದ 2ನೇ ಆಟಗಾರ ಎಂಬ ಹಿರಿಮೆಯನ್ನೂ ಸಹ ತಮ್ಮದಾಗಿಸಿಕೊಂಡಿಸಿದ್ದಾರೆ.

ಇದಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ 2022 ರಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್ ಬೌಲರ್ಗಳ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು. ಇದೀಗ ಟೆಸ್ಟ್ ಕ್ರಿಕೆಟ್ನಲ್ಲೂ ನಂಬರ್ 1 ಬೌಲರ್ ಆಗಿ ಕಾಣಿಸಿಕೊಳ್ಳುವ ಮೂಲಕ ಮೂರು ಸ್ವರೂಪಗಳಲ್ಲೂ ಅಗ್ರಸ್ಥಾನಿಯಾಗಿ ಕಾಣಿಸಿಕೊಂಡ ವಿಶ್ವದ ಮೊದಲ ವೇಗಿ ಎಂಬ ದಾಖಲೆ ಬರೆದಿದ್ದಾರೆ.

ಹಾಗೆಯೇ ಈ ಸಾಧನೆ ಮಾಡಿದ ಭಾರತದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮೂರು ಸ್ವರೂಪಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ವಿಶೇಷ ದಾಖಲೆಯೊಂದನ್ನು ವಿರಾಟ್ ಕೊಹ್ಲಿ ಬರೆದಿದ್ದರು. ಕಿಂಗ್ ಕೊಹ್ಲಿ ಟಿ20, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಯಾರ್ಕಿಂಗ್ನಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಜಸ್ಪ್ರೀತ್ ಬುಮ್ರಾ ಕೂಡ ಮೂರು ಸ್ವರೂಪಗಳ ಶ್ರೇಯಾಂಕ ಪಟ್ಟಿಯಲ್ಲೂ ಮೊದಲ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಬಳಿಕ ಮೂರು ಮಾದರಿಯಲ್ಲೂ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ಐಸಿಸಿ ಟೆಸ್ಟ್ ಬೌಲರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ (870 ಅಂಕಗಳು) ಅಗ್ರಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾ ಸ್ಪಿನ್ನರ್ ಅಶ್ವಿನ್ (869 ಅಂಕಗಳು) ದ್ವಿತೀಯ ಸ್ಥಾನದಲ್ಲಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್ವುಡ್ (847 ಅಂಕಗಳು) ಮೂರನೇ ಸ್ಥಾನದಲ್ಲಿ, ಪ್ಯಾಟ್ ಕಮಿನ್ಸ್ (820 ಅಂಕಗಳು) ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಐದನೇ ಸ್ಥಾನದಲ್ಲಿ ಸೌತ್ ಆಫ್ರಿಕಾದ ಕಗಿಸೊ ರಬಾಡ (820 ಅಂಕಗಳು) ಇದ್ದರೆ, ಟೀಮ್ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜಾ (809 ಅಂಕಗಳು) 6ನೇ ಸ್ಥಾನದಲ್ಲಿದ್ದಾರೆ. ಇನ್ನು 7ನೇ, 8ನೇ, 9ನೇ ಮತ್ತು 10ನೇ ಸ್ಥಾನಗಳಲ್ಲಿ ನಾಥನ್ ಲಿಯಾನ್, ಪ್ರಭಾತ್ ಜಯಸೂರ್ಯ, ಕೈಲ್ ಜೇಮಿಸನ್ ಹಾಗೂ ಶಾಹೀನ್ ಅಫ್ರಿದಿ ಕಾಣಿಸಿಕೊಂಡಿದ್ದಾರೆ.
Published On - 2:42 pm, Wed, 2 October 24



















