ಯುಎಇನಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಟಿ20 ಲೀಗ್ನಲ್ಲಿ ಯುವ ಬ್ಯಾಟರ್ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಅಬ್ಬರದ ಶತಕದೊಂದಿಗೆ ಶಾರ್ಜಾ ವಾರಿಯರ್ಸ್ ತಂಡಕ್ಕೆ ಜಯ ತಂದುಕೊಟ್ಟಿರುವುದು ವಿಶೇಷ.
ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಶಾರ್ಜಾ ವಾರಿಯರ್ಸ್ ಹಾಗೂ ದುಬೈ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ದುಬೈ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರ ಜೋ ರೂಟ್ 54 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ನೊಂದಿಗೆ ಅಜೇಯ 80 ರನ್ ಬಾರಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ 27 ಎಸೆತಗಳಲ್ಲಿ 44 ರನ್ ಬಾರಿಸುವ ಮೂಲಕ ರೋವ್ಮನ್ ಪೊವೆಲ್ ನಿಗದಿತ 20 ಓವರ್ಗಳಲ್ಲಿ ತಂಡದ ಮೊತ್ತವನ್ನು 4 ವಿಕೆಟ್ ನಷ್ಟಕ್ಕೆ 177 ಕ್ಕೆ ತಂದು ನಿಲ್ಲಿಸಿದರು.
178 ರನ್ಗಳ ಕಠಿಣ ಗುರಿ ಪಡೆದ ಶಾರ್ಜಾ ವಾರಿಯರ್ಸ್ ಪರ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಹಾಗೂ ರಹಮನುಲ್ಲಾ ಗುರ್ಬಾಜ್ ಉತ್ತಮ ಆರಂಭ ಒದಗಿಸಿದ್ದರು. 3.3 ಓವರ್ಗಳಲ್ಲಿ 47 ರನ್ಗಳ ಜೊತೆಯಾಟವಾಡಿದ ಗುರ್ಬಾಜ್ ನಿರ್ಗಮಿಸಿದರು. ಆದರೆ ಮತ್ತೊಂದೆಡೆ ಟಾಮ್ ಆರ್ಭಟ ಮುಂದುವರೆಸಿದರು. ಪರಿಣಾಮ....
19 ಎಸೆತಗಳಲ್ಲಿ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿಯ ಬೆನ್ನಲ್ಲೇ ಸಿಡಿಲಬ್ಬರ ಶುರು ಮಾಡಿದ ಟಾಮ್ ದುಬೈ ಕ್ಯಾಪಿಟಲ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಅದರಂತೆ ಕೇವಲ 46 ಎಸೆತಗಳಲ್ಲಿ ಶತಕ ಪೂರೈಸಿ ಬ್ಯಾಟ್ ಮೇಲೆತ್ತಿದರು.
ಅಷ್ಟರಲ್ಲಾಗಲೇ ಶಾರ್ಜಾ ವಾರಿಯರ್ಸ್ ತಂಡವು ಗೆಲುವಿನ ಸಮೀಪಕ್ಕೆ ತಲುಪಿತ್ತು. ಇನ್ನು ಅಜೇಯರಾಗಿ ಉಳಿದ ಟಾಮ್ ಕೊಹ್ಲರ್-ಕ್ಯಾಡ್ಮೋರ್ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 10 ಫೋರ್ನೊಂದಿಗೆ 106 ರನ್ ಚಚ್ಚಿದರು. ಈ ಮೂಲಕ 14.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ತಂಡವನ್ನು ಗುರಿ ತಲುಪಿಸಿ ಭರ್ಜರಿ ತಂದುಕೊಟ್ಟರು. ವಿಶೇಷ ಎಂದರೆ ಇದು 4 ಪಂದ್ಯಗಳನ್ನಾಡಿರುವ ಶಾರ್ಜಾ ವಾರಿಯರ್ಸ್ ತಂಡದ ಮೊದಲ ಗೆಲುವಾಗಿದೆ. ಇನ್ನು ಅಮೋಘ ಶತಕ ಸಿಡಿಸಿದ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
Published On - 3:56 pm, Sun, 22 January 23